
ಅಹಮದಾಬಾದ್‌ನಲ್ಲಿ ಜೂನ್ 12ರಂದು ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 260 ಪ್ರಯಾಣಿಕರು ಹಾಗೂ ಘಟನಾ ಸ್ಥಳದಲ್ಲಿದ್ದ 19 ಮಂದಿ ಸಾವನ್ನಪ್ಪಿದ್ದ ಪ್ರಕರಣದ ಬಗ್ಗೆ , ನ್ಯಾಯಯುತ, ನಿಷ್ಪಕ್ಷಪಾತ ಮತ್ತು ತ್ವರಿತ ತನಿಖೆಗಾಗಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆಯೇ ಎಂದು ಪರಿಶೀಲಿಸಲು ಸುಪ್ರೀಂ ಕೋರ್ಟ್ ಸೋಮವಾರ ಸಮ್ಮತಿ ಸೂಚಿಸಿದೆ [ಸೇಫ್ಟಿ ಮ್ಯಾಟರ್ಸ್ ಫೌಂಡೇಶನ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ್ ].
ಪ್ರಕರಣದ ಸಂಬಂಧ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾ. ಎನ್ ಕೆ ಸಿಂಗ್ ಅವರಿದ್ದ ವಿಭಾಗೀಯ ಪೀಠವು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ, ಭಾರತದ ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶಕರ (ಡಿಜಿಸಿಎ) ಪ್ರತಿಕ್ರಿಯೆ ಕೇಳಿದೆ.
ಭಾರತದಲ್ಲಿ ವಾಯುಯಾನ ಸುರಕ್ಷತೆಗಾಗಿ ಕಾರ್ಯ ನಿರ್ವಹಿಸುವ ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಸೇಫ್ಟಿ ಮ್ಯಾಟರ್ಸ್ ಫೌಂಡೇಶನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ (ಪಿಐಎಲ್) ಸಂಬಂಧಿಸಿದಂತೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.
ಆದರೆ ವಿಮಾನ ದೋಷಕ್ಕೆ ಸಂಬಂಧಿಸಿದ ಸಂದೇಶ ಮತ್ತು ತಾಂತ್ರಿಕ ಸಲಹೆಗಳು ಸೇರಿದಂತೆ ಎಲ್ಲಾ ತನಿಖಾ ದಾಖಲೆಗಳನ್ನು ಬಹಿರಂಗಗೊಳಿಸಬೇಕೆಂಬ ಎನ್‌ಜಿಒ ಮನವಿಯ ಬಗ್ಗೆ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿತು.
"ನಾಳೆ ಇಂತಹವರೇ ಪೈಲಟ್ ಜವಾಬ್ದಾರರು ಎಂದು ಹೇಳಿದರೆ ಏನು ಗತಿ? ಪೈಲಟ್ ಕುಟುಂಬ ತೊಂದರೆ ಅನುಭವಿಸುವುದು ಖಚಿತ" ಎಂದು ನ್ಯಾಯಮೂರ್ತಿ ಸೂರ್ಯಕಾಂತ್ಆತಂಕ ವ್ಯಕ್ತಪಡಿಸಿದರು.
ಅಂತೆಯೇ ಪ್ರಕರಣದ ಬಗ್ಗೆ ಕೈಗೊಳ್ಳಲಾಗುತ್ತಿರುವ ತನಿಖೆ ಸರಿಯಾದ ಹಾದಿಯಲ್ಲಿ ನಡೆಯುತ್ತಿದೆಯೇ ಎಂಬ ಸೀಮಿತ ಪ್ರಶ್ನೆಗೆ ಮಾತ್ರ ನ್ಯಾಯಾಲಯ ಸರ್ಕಾರಿ ಅಧಿಕಾರಿಗಳ ಪ್ರತಿಕ್ರಿಯೆ ಕೇಳಿತು.
"ಮುಕ್ತ, ನ್ಯಾಯಯುತ, ನಿಷ್ಪಕ್ಷಪಾತ, ಸ್ವತಂತ್ರ ಮತ್ತು ತ್ವರಿತ ತನಿಖೆಯ ಸೀಮಿತ ಉದ್ದೇಶಕ್ಕಾಗಿ ಪ್ರತಿವಾದಿಗಳಿಗೆ ನೋಟಿಸ್ ನೀಡಿ" ಎಂದು ನ್ಯಾಯಾಲಯ ಆದೇಶಿಸಿತು.
ಅರ್ಜಿ ಸಲ್ಲಿಸಿದ್ದ ಎನ್‌ಜಿಒ ʼವಿಮಾನ ಅಪಘಾತದ ಕುರಿತಾದ ಪ್ರಾಥಮಿಕ ವರದಿಯನ್ನು “ಹೆಕ್ಕಿತೆಗೆದ” ರೀತಿಯಲ್ಲಿ ಬಿಡುಗಡೆ ಮಾಡಲಾಗಿದೆ. ನಿರ್ಣಾಯಕ ಮಾಹಿತಿಯನ್ನು ಬಹಿರಂಗಪಡಿಸದಿರುವುದರಿಂದ ಪೈಲಟ್ ದೋಷವೇ ಕಾರಣ ಎಂದು ಸಾರ್ವಜನಿಕರನ್ನು ತಪ್ಪಾಗಿ ನಂಬಿಸುವ ಅಪಾಯ ಇದೆ.
ವಿಮಾನ ತಯಾರಿಕಾ ದೋಷ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಿಫಾರಸ್ಸಿಗೆ ಅನುಗುಣವಾಗಿ ತಪಾಸಣೆ ನಡೆಸದೆ ಇರುವ ಬಗೆಗಿನ ವೈಫಲ್ಯಗಳನ್ನು ವರದಿ ಒಳಗೊಂಡಿಲ್ಲ. ಮಾನವ ದೋಷಕ್ಕೆ ಮಾತ್ರ ಒತ್ತು ನೀಡಲಾಗಿದೆ ಎಂದು ಹೇಳಿತ್ತು.
ಘಟನೆಯಲ್ಲಿ ಬದುಕುಳಿದಿದ್ದ ಏಕೈಕ ವ್ಯಕ್ತಿಯ ಸಾಕ್ಷ್ಯ ಪರಿಗಣಿಸದೆ ಇರುವುದು ಸಾಕಷ್ಟು ಸಂಶಯ ಹುಟ್ಟಿಸಿದೆ. ಅಲ್ಲದೆ ಐದು ಸದಸ್ಯರ ತನಿಖಾ ತಂಡದಲ್ಲಿ ಮೂವರು ಡಿಜಿಸಿಎ ವಾಯುಸುರಕ್ಷತೆ, ಪಶ್ಚಿಮ ವಲಯಕ್ಕೆ ಸೇರಿರುವುದು ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗಿದೆ ಎಂದು ಅದು ದೂರಿತ್ತು. ತನಿಖೆಯ ಎಲ್ಲಾ ಸಂಬಂಧಿತ ದಾಖಲೆಗಳನ್ನು ಬಹಿರಂಗಪಡಿಸಬೇಕು. ಜೊತೆಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ತನಿಖಾ ತಂಡವನ್ನು ನೇಮಿಸಬೇಕು ಎಂದು ಅದು ಎರಡು ಬೇಡಿಕೆಗಳನ್ನು ಇರಿಸಿತ್ತು.
ಅಪಘಾತ ಸಂಭವಿಸಿ 100 ದಿನಗಳಾದರೂ ಕೇವಲ ಪ್ರಾಥಮಿಕ ವರದಿಯಷ್ಟೇ ಪ್ರಕಟವಾಗಿದೆ. ಅದರಲ್ಲಿ ಘಟನೆ ಹೇಗಾಯಿತು, ಏನಾಗಿರಬಹುದು, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮ ಏನು ಎನ್ನುವ ವಿವರಗಳಿಲ್ಲ. ಹಾಗಾಗಿ, ಬೋಯಿಂಗ್ ವಿಮಾನಗಳಲ್ಲಿ ಪ್ರಯಾಣಿಸುವವರು ಅಪಾಯದಲ್ಲಿದ್ದಾರೆ ಎಂದು ಎನ್‌ಜಿಒ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್ ಗಮನ ಸೆಳೆದರು. ವಕೀಲ ಪ್ರಣವ್ ಸಚ್‌ದೇವ ಅವರ ಮೂಲಕ ಅರ್ಜಿ ಸಲ್ಲಿಸಲಾಗಿದೆ.