ಕಳೆದ ನವೆಂಬರ್‌ನಲ್ಲಿ ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜಿಸಿದ ಘಟನೆಗೆ ಸಂಬಂಧಿಸಿದಂತೆ ಬಂಧಿತನಾಗಿರುವ ಶಂಕರ್ ಮಿಶ್ರಾ ಸಲ್ಲಿಸಿದ್ದ ಜಾಮೀನು ಅರ್ಜಿಯ ಆದೇಶವನ್ನು ದೆಹಲಿ ನ್ಯಾಯಾಲಯ ಸೋಮವಾರ ಕಾಯ್ದಿರಿಸಿತು.
ತಮ್ಮ ತೀರ್ಪು ಕಾಯ್ದಿರಿಸುವ ಮುನ್ನ ಎಲ್ಲಾ ಕಕ್ಷಿದಾರರ ವಾದವನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಹರ್‌ಜ್ಯೋತ್ ಸಿಂಗ್ ಭಲ್ಲಾ ಅವರು ಆಲಿಸಿದರು.
ಆರೋಪಿ ಮಾಡಿದ್ದಾರೆ ಎನ್ನಲಾದ ಕೃತ್ಯವು ಅಸಹ್ಯಕರವಾದರೂ ನ್ಯಾಯಾಲಯ ಕಾನೂನು ಪ್ರಕಾರ ನಡೆದುಕೊಳ್ಳಲಿದೆ ಎಂದು ಅವರು ಹೇಳಿದರು. ಜನವರಿ 31ರ ಮಂಗಳವಾರದಂದು ಅಂದರೆ ನಾಳೆ ಆದೇಶ ಪ್ರಕಟವಾಗುವ ಸಾಧ್ಯತೆ ಇದೆ.
ಮೆಟ್ರೊಪಾಲಿಟನ್ ನ್ಯಾಯಾಲಯ ಆರೋಪಿ ಮಿಶ್ರಾಗೆ ಜನವರಿ 11ರಂದು ಜಾಮೀನು ನಿರಾಕರಿಸಿತ್ತು. ಹೀಗಾಗಿ ಆರೋಪಿಯು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇಂದು ವಿಚಾರಣೆಯ ಸಂದರ್ಭದಲ್ಲಿ, ಪಬ್ಲಿಕ್ ಪ್ರಾಸಿಕ್ಯೂಟರ್ (ಪಿಪಿ) ಜಾಮೀನು ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು, ಆರೋಪಿಯ ಆರಂಭದಲ್ಲಿ ಪರಾರಿಯಾಗಿದ್ದು ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಈ ಘಟನೆಯಿಂದಾಗಿ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲೆತಗ್ಗಿಸುವಂತಾಗಿದೆ ಎಂದು ಹೇಳಿದರು.
ತನಿಖೆ ಪೂರ್ಣಗೊಂಡಿದ್ದು, ಸಿಬ್ಬಂದಿ ಹಾಗೂ ಇತರ ಸಾಕ್ಷಿಗಳನ್ನೂ ವಿಚಾರಣೆಗೊಳಪಡಿಸಲಾಗಿದೆ. ಹೀಗಾಗಿ ಜಾಮೀನು ನೀಡಬಹುದು ಎಂದು ಮಿಶ್ರಾ ಪರ ವಕೀಲ ರಮೇಶ್ ಗುಪ್ತಾ ವಾದಿಸಿದರು.