ಪಟಾಕಿ ಉತ್ಪಾದನೆ ಮತ್ತು ಮಾರಾಟದ ನಿಯಂತ್ರಣ ಕುರಿತಾದ ಆದೇಶಗಳು ಎಲ್ಲಾ ರಾಜ್ಯಗಳಿಗೂ ಅನ್ವಯ: ಸುಪ್ರೀಂ ಕೋರ್ಟ್

ಬೇರಿಯಂಯುಕ್ತ ಪಟಾಕಿಗಳ ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಲು ಅಕ್ಟೋಬರ್ 2021ರಲ್ಲಿ ಸರ್ವೋಚ್ಚ ನ್ಯಾಯಾಲಯ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಿತ್ತು.
Supreme court of India, Firecrackers
Supreme court of India, Firecrackers

ವಾಯು ಮತ್ತು ಶಬ್ದ ಮಾಲಿನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪಟಾಕಿಗಳ ಮಾರಾಟ ಮತ್ತು ತಯಾರಿಕೆ ನಿಯಂತ್ರಿಸುವ ತನ್ನ ಹಿಂದಿನ ಆದೇಶಗಳು ದೆಹಲಿಗೆ ಮಾತ್ರವಲ್ಲದೆ ಎಲ್ಲಾ ರಾಜ್ಯಗಳಿಗೂ ಅನ್ವಯಿಸುತ್ತವೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಸ್ಪಷ್ಟಪಡಿಸಿದೆ.

ಹಬ್ಬ ಹರಿದಿನಗಳಲ್ಲಿ ಮಾತ್ರವಲ್ಲದೆ ಉಳಿದ ಸಂದರ್ಭಗಳಲ್ಲೂ ಮಾಲಿನ್ಯ ಎದುರಿಸಲು ರಾಜ್ಯ ಸರ್ಕಾರಗಳು ಕ್ರಮ ತೆಗೆದುಕೊಳ್ಳುವಂತೆ ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಎಂ ಎಂ ಸುಂದರೇಶ್ ಅವರನ್ನೊಳಗೊಂಡ ಪೀಠ ಹೇಳಿದೆ.

"ಈ ನ್ಯಾಯಾಲಯ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ವಾಯು ಮತ್ತು ಶಬ್ದ ಮಾಲಿನ್ಯ ಕಡಿಮೆ ಮಾಡಲು ವಿವಿಧ  ಆದೇಶಗಳನ್ನು ಜಾರಿಗೊಳಿಸಿದೆ. ಆದ್ದರಿಂದ, ಈ ಆದೇಶಗಳು ದೆಹಲಿ ಸೇರಿದಂತೆ ದೇಶದ ಪ್ರತಿಯೊಂದು ರಾಜ್ಯಕ್ಕೂ ಅನ್ವಯಿಸುತ್ತದೆ. ಹೀಗಾಗಿ, ರಾಜಸ್ಥಾನ ರಾಜ್ಯವೂ ಇದನ್ನು ಗಮನಿಸಬೇಕು. ಹಬ್ಬದ ಸಂದರ್ಭಗಳಲ್ಲಿ ಮಾತ್ರವಲ್ಲದೆ ಉಳಿದ ಸಮಯದಲ್ಲೂ ವಾಯು , ಶಬ್ದ ಮಾಲಿನ್ಯವನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು”  ಎಂದು ಪೀಠ ವಿವರಿಸಿದೆ.

Also Read
ಆರೋಗ್ಯ ಬಲಿ ಪಡೆದು ಆಚರಣೆಗಳು ನಡೆಯಬಾರದು ಎಂದ ಎನ್‌ಜಿಟಿ: ಪಟಾಕಿ ನಿರ್ಬಂಧ ಕಟ್ಟುನಿಟ್ಟಿನ ಪಾಲನೆಗೆ ತಾಕೀತು

ರಾಜಸ್ಥಾನದ ಉದಯಪುರದಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕ್ರಮಕೈಗೊಳ್ಳುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ  ಈ ವಿಚಾರ ತಿಳಿಸಿದೆ. ಬೇರಿಯಂಯುಕ್ತ  ಪಟಾಕಿಗಳ ನಿಷೇಧಕ್ಕೆ ಸಂಬಂಧಿಸಿದ ಅರ್ಜಿಗಳಲ್ಲಿ ಈ ಮನವಿಯನ್ನೂ ಸಲ್ಲಿಸಲಾಗಿತ್ತು.

ಪಟಾಕಿ ಕುರಿತು ಸುಪ್ರೀಂ ಕೋರ್ಟ್‌ನ ಆದೇಶಗಳು ದೆಹಲಿಗೆ ಮಾತ್ರ ಸೀಮಿತ ಎಂಬ ಗ್ರಹಿಕೆ ಇದೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಸ್ಪಷ್ಟನೆ ನೀಡಿದೆ.

Also Read
ಪಟಾಕಿ ದಾಸ್ತಾನು ಮಳಿಗೆಗಳ ಸುರಕ್ಷತೆ: ನವೆಂಬರ್ 6ರೊಳಗೆ ವರದಿ ಸಲ್ಲಿಸಲು ಹೈಕೋರ್ಟ್‌ ನಿರ್ದೇಶನ

ಬೇರಿಯಂ ಬಳಸಿ ತಯಾರಿಸಿದ ಹಸಿರು ಪಟಾಕಿ ಮತ್ತು ಸಂಯುಕ್ತ ಪಟಾಕಿಗಳ ತಯಾರಿಕೆ ಮತ್ತು ಮಾರಾಟಕ್ಕೆ ಅನುಮತಿ ನೀಡುವಂತೆ ಕೋರಿದ್ದ ಅರ್ಜಿಗಳನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಕಳೆದ ಸೆಪ್ಟೆಂಬರ್‌ನಲ್ಲಿ ನಿರಾಕರಿಸಿತ್ತು.

ಬೇರಿಯಂಯುಕ್ತ ಪಟಾಕಿಗಳ ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಲು ಅಕ್ಟೋಬರ್ 2021ರಲ್ಲಿ ಸರ್ವೋಚ್ಚ ನ್ಯಾಯಾಲಯ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಿತ್ತು.

Related Stories

No stories found.
Kannada Bar & Bench
kannada.barandbench.com