ಪಟಾಕಿ ದಾಸ್ತಾನು ಮಳಿಗೆಗಳ ಸುರಕ್ಷತೆ: ನವೆಂಬರ್ 6ರೊಳಗೆ ವರದಿ ಸಲ್ಲಿಸಲು ಹೈಕೋರ್ಟ್‌ ನಿರ್ದೇಶನ

ತಾವರೆಕೆರೆ ಹೋಬಳಿಯ ಕಂದಾಯ ನಿರೀಕ್ಷಕರು ಯಾವುದೇ ಪೂರ್ವ ನೋಟಿಸ್ ಕೊಡದೆ, ಏಕಾಏಕಿ ಪಟಾಕಿ ದಾಸ್ತಾನು ಜಪ್ತಿ ಮಾಡಿ ಮಾರಾಟ ಮಳಿಗೆಗೆ ಬೀಗ ಜಡಿದಿದ್ದಲ್ಲದೆ ಎಫ್‌ಐಆರ್ ಸಹ ದಾಖಲಿಸಿದ್ದಾರೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
Firecrackers
Firecrackers
Published on

ಅಧಿಕೃತ ಪರವಾನಿಗೆ ಹೊಂದಿದ್ದರೂ ಪಟಾಕಿ ದಾಸ್ತಾನು ಜಪ್ತಿ ಮಾಡಿರುವ ಕಂದಾಯ ನಿರೀಕ್ಷಕರ ಕ್ರಮ ಪ್ರಶ್ನಿಸಿ ಪಟಾಕಿ ಮಾರಾಟಗಾರರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಪಟಾಕಿ ದಾಸ್ತಾನು ಜಪ್ತಿ ಮಾಡಿ ಮಾರಾಟ ಮಳಿಗೆಗೆ ಬೀಗ ಜಡಿದಿರುವುದನ್ನು ಪ್ರಶ್ನಿಸಿ ಪಟಾಕಿ ಮಾರಾಟ ಸಂಸ್ಥೆ ಶ್ರೀ ತಿರುಮಲ ಟ್ರೇಡರ್ಸ್‌ನ ಪಾಲುದಾರರಾದ ವೆಂಕಟೇಶ್ ಹಾಗೂ ವಿ ಸತ್ಯನಾರಾಯಣ ಎಂಬುವರು ಸೇರಿ ಇತರೆ ನಾಲ್ವರು ಪಟಾಕಿ ಮಾರಾಟಗಾರರು ಸಲ್ಲಿಸಿರುವ ಅರ್ಜಿಯನ್ನು ಶುಕ್ರವಾರ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಸಕಸದಸ್ಯ ಪೀಠ ವಿಚಾರಣೆ ನಡೆಸಿತು.

ಸ್ಫೋಟಕಗಳ ಮುಖ್ಯ ನಿಯಂತ್ರಣಾಧಿಕಾರಿ ಸ್ಥಳ ಪರಿಶೀಲನೆ ನಡೆಸಿ ಪಟಾಕಿ ದಾಸ್ತಾನು ಮಳಿಗೆಗಳ ಸುರಕ್ಷತೆ ಬಗ್ಗೆ ನವೆಂಬರ್ 6ರೊಳಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು. ಅರ್ಜಿದಾರರ ಪರವಾಗಿ ವಕೀಲ ಶರತ್ ಎಸ್. ಗೌಡ ವಾದ ಮಂಡಿಸಿದರು.

ತಿರುಮಲ ಟ್ರೇಡರ್ಸ್ 1932ರ ಪಾಲುದಾರಿಕೆ ಕಾಯಿದೆ ಅಡಿ ನೋಂದಣಿಯಾಗಿದೆ. ಬೆಂಗಳೂರು ದಕ್ಷಿಣ ತಾಲ್ಲೂಕು ತಾವರಕೆರೆ ಹೋಬಳಿಯ ಎಲಚಿಗುಪ್ಪೆ ಗ್ರಾಮದ ಸರ್ವೆ ನಂಬರ್ 17/2ರಲ್ಲಿ ಪಟಾಕಿ ಮಾರಾಟ ಮಳಿಗೆ ಹೊಂದಿದ್ದು, ಕಳೆದ 25 ವರ್ಷಗಳಿಂದ ಪಟಾಕಿ ಮಾರಾಟದಲ್ಲಿ ತೊಡಗಿಸಿಕೊಂಡಿದೆ. ಸ್ಫೋಟಕಗಳ ಕಾಯಿದೆ ಅನ್ವಯ ಅಗತ್ಯ ಪರವಾನಗಿಗಳನ್ನು ಹೊಂದಲಾಗಿದೆ. ಈಗಿರುವ ಪರವಾನಿಗೆ ಅವಧಿ 2024ರ ಮಾರ್ಚ್‌ 31ಕ್ಕೆ ಕೊನೆಗೊಳ್ಳಲಿದೆ. ಹೀಗಿದ್ದರೂ, ತಾವರಕೆರೆ ಹೋಬಳಿಯ ಕಂದಾಯ ನಿರೀಕ್ಷಕರು ಯಾವುದೇ ಪೂರ್ವ ನೋಟಿಸ್ ಕೊಡದೆ, ಏಕಾಏಕಿ ಪಟಾಕಿ ದಾಸ್ತಾನು ಜಪ್ತಿ ಮಾಡಿ ಮಾರಾಟ ಮಳಿಗೆಗೆ ಬೀಗ ಜಡಿದಿದ್ದಲ್ಲದೆ ಎಫ್‌ಐಆರ್ ಸಹ ದಾಖಲಿಸಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಪಟಾಕಿ ಮಾರಾಟಗಾರರಿಗೆ ದೀಪಾವಳಿ ಸುಗ್ಗಿಯ ಕಾಲ. ಈ ತಿಂಗಳಲ್ಲಿ ಮಾತ್ರ ಪಟಾಕಿ ಮಾರಾಟಗಾರರಿಗೆ ಹೆಚ್ಚು ವ್ಯಾಪಾರ ಇರುತ್ತದೆ. ಇಂತಹ ಸಂದರ್ಭದಲ್ಲೇ ದಾಸ್ತಾನು ಜಪ್ತಿ ಮಾಡಿ, ಮಳಿಗೆಗೆ ಬೀಗ ಜಡಿಯಲಾಗಿದೆ. ಒಂದೊಮ್ಮೆ ದಾಸ್ತಾನು ಜಪ್ತಿ ಹಾಗೂ ಬೀಗ ತೆರವುಗೊಳಿಸದಿದ್ದರೆ ಭಾರಿ ಪ್ರಮಾಣದಲ್ಲಿ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ. ದಾಸ್ತಾನು ಇರುವ ಪಟಾಕಿಗಳನ್ನು ಈ ನಿಗದಿತ ಅವಧಿಯಲ್ಲಿ ಮಾರಾಟ ಮಾಡದಿದ್ದರೆ ತೇವಾಂಶದ ಸಾಧ್ಯತೆಗಳಿದ್ದು, ಬಳಕೆಗೆ ಬರುವುದಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

Also Read
ಬೆಂಗಳೂರಿನ ಜನನಿಬಿಡ ಪ್ರದೇಶಗಳಲ್ಲಿನ ಪಟಾಕಿ ಮಾರಾಟ ನಿಷೇಧ ಎತ್ತಿ ಹಿಡಿದ ಹೈಕೋರ್ಟ್‌

ಪೊಲೀಸರು ಹಾಗೂ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕಂದಾಯ ನಿರೀಕ್ಷಕರು ದಾಸ್ತಾನು ಜಪ್ತಿ ಮಾಡಿ ಮಾರಾಟ ಮಳಿಗೆಗೆ ಬೀಗ ಜಡಿದಿರುವುದನ್ನು ಕಾನೂನುಬಾಹಿರ ಎಂದು ಘೋಷಿಸಬೇಕು. ಅಗತ್ಯ ಪರವಾನಗಿಗಳನ್ನು ಪಡೆದುಕೊಂಡು ನಡೆಸಲಾಗುತ್ತಿರುವ ವ್ಯಾಪಾರದಲ್ಲಿ ಪೊಲೀಸರು, ಜಿಲ್ಲಾಧಿಕಾರಿಗಳು ಹಾಗೂ ಇತರ ಸಂಬಂಧಪಟ್ಟ ಅಧಿಕಾರಿಗಳು ಅನಗತ್ಯವಾಗಿ ಹಸ್ತಕ್ಷೇಪ ಮಾಡದಂತೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ. ಅಲ್ಲದೇ, ಅರ್ಜಿ ಇತ್ಯರ್ಥಗೊಳ್ಳುವ ತನಕ ಪಟಾಕಿಗಳ ಮಾರಾಟಕ್ಕೆ ಅವಕಾಶವಾಗುವಂತೆ ಬೀಗ ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮಧ್ಯಂತರ ಮನವಿ ಮಾಡಿದ್ದಾರೆ.

Kannada Bar & Bench
kannada.barandbench.com