
ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮದ (ಟಿಎಎಸ್‌ಎಂಎಸಿ) ಮೇಲೆ ನಡೆದ ದಾಳಿಯ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ (ಇ ಡಿ) ಅಧಿಕಾರಿಗಳ ವರ್ತನೆಗೆ ಮದ್ರಾಸ್ ಹೈಕೋರ್ಟ್ ಗುರುವಾರ ಅಸಮ್ಮತಿ ಸೂಚಿಸಿದೆ.
ನಿಗಮದ ಉದ್ಯೋಗಿಗಳನ್ನು ಇ ಡಿ ಅಧಿಕಾರಿಗಳು ತಪಾಸಣೆ ಮಾಡಿದರು. ಆದರೆ ತಪಾಸಣೆ ಮತ್ತು ದಾಳಿಗೆ ಕಾರಣ ಏನೆಂಬುದನ್ನು ಅವರು ನಿಗಮದ ಅಧಿಕಾರಿಗಳಿಗೆ ತಿಳಿಸಲಿಲ್ಲ ಎಂದು ನ್ಯಾಯಮೂರ್ತಿಗಳಾದ ಎಂ ಎಸ್ ರಮೇಶ್ ಮತ್ತು ಎನ್ ಸೆಂಥಿಲ್ ಕುಮಾರ್ ಅವರಿದ್ದ ಪೀಠ ನಿರ್ದಿಷ್ಟವಾಗಿ ಆಕ್ಷೇಪ ವ್ಯಕ್ತಪಡಿಸಿತು.
"ಇದು ಆತಂಕಕಾರಿ ಪರಿಸ್ಥಿತಿಯಲ್ಲವೇ? ನೀವು ನಿರ್ದಿಷ್ಟ ಮಾಹಿತಿ ನೀಡಿದರೆ ಅರ್ಥವಾಗುತ್ತದೆ. ಆದರೆ ಇಡೀ ಕಚೇರಿಯನ್ನು ಗಂಟೆಗಟ್ಟಲೆ ನಿಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದೇ? ನೀವು ನಂಬಲು ಕಾರಣವಿದ್ದರೆ, ಅದನ್ನು ಅವರಿಗೆ ತಿಳಿಸಬೇಕಲ್ಲವೇ? ತಮಗೆ (ದಾಳಿಯ ಕಾರಣ) ತಿಳದಿಲ್ಲ ಎಂಬುದು ಅವರ ದೂರು" ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.
ಇ ಡಿ ನಡೆ ಎಲ್ಲೆ ಮೀರಿದ್ದು ಅದರ ಅಧಿಕಾರ ವ್ಯಾಪ್ತಿಯಿಂದ ಆಚೆಗೆ ಇದೆ ಎಂದು ರಾಜ್ಯ ಮದ್ಯ ವಿತರಣಾ ನಿಗಮವಾದ ಟಿಎಎಸ್‌ಎಂಎಸಿ ನ್ಯಾಯಾಲಯದ ಮೆಟ್ಟಿಲೇರಿತ್ತು. ರಾಜ್ಯ ಸರ್ಕಾರ ಕೂಡ ಈ ಸಂಬಂಧ ಅರ್ಜಿ ಸಲ್ಲಿಸಿತ್ತು.
ಜಾರಿ ನಿರ್ದೇಶನಾಲಯ ನಿಗಮದ ಆವರಣಕ್ಕೆ ನುಗ್ಗಿ ನೌಕರರ ಮೊಬೈಲ್ ಫೋನ್ ವಶಪಡಿಸಿಕೊಂಡು ಅವರ ಗೌಪ್ಯತೆ ಮತ್ತಿತರ ಹಕ್ಕುಗಳನ್ನು ಉಲ್ಲಂಘಿಸಿತು. ಕೆಲ ನೌಕರರನ್ನು 60 ಗಂಟೆಗಳ ಕಾಲ ಅಲ್ಲಿಯೇ ಇರುವಂತೆ ತಾಕೀತು ಮಾಡಲಾಗಿತ್ತು. ಕೆಲವರನ್ನು ಬೆಳಿಗ್ಗೆಯಿಂದ ಮಧ್ಯರಾತ್ರಿ 1 ಗಂಟೆಯವರೆಗೆ ಕುಳ್ಳಿರಿಸಲಾಗಿತ್ತು. ಅವರಲ್ಲಿ ಕೆಲವರು ಮಹಿಳೆಯರೂ ಇದ್ದರು. ನಂತರ ತೆರಳುವಂತೆ ಅವರಿಗೆ ಸೂಚಿಸಲಾಗಿತ್ತು. ಈ ಪ್ರಕ್ರಿಯೆ ಮೂರು ದಿನಗಳ ಕಾಲ ಮುಂದುವರೆದಿತ್ತು ಎನ್ನುವ ಅಂಶಗಳನ್ನು ನ್ಯಾಯಾಲಯವು ಗಮನಿಸಿತು.
ಆದರೆ ಜಾರಿ ನಿರ್ದೇಶನಾಲಯದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಈ ವಾದಗಳನ್ನು ಬಲವಾಗಿ ನಿರಾಕರಿಸಿದರು. "ಯಾರನ್ನೂ ಬಂಧನದಲ್ಲಿ ಇರಿಸಿರಲಿಲ್ಲ, ಎಲ್ಲರಿಗೂ ತೆರಳಲು ಅವಕಾಶ ನೀಡಲಾಗಿತ್ತು" ಎಂದರು.
ರಾಜ್ಯ ಮತ್ತು ನಿಗಮ ಸಲ್ಲಿಸಿದ್ದ ಅರ್ಜಿಗಳಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ನ್ಯಾಯಾಲಯ ಅಂತಿಮವಾಗಿ ಇ ಡಿಗೆ ಸೂಚಿಸಿತು. ಮುಂದಿನ ವಿಚಾರಣೆ ನಡೆಯಲಿರುವ ಮಾರ್ಚ್ 25ರವರೆಗೆ ನಿಗಮದ ಅಧಿಕಾರಿಗಳ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ನ್ಯಾಯಾಲಯ ಇ ಡಿಗೆ ಮೌಖಿಕವಾಗಿ ಸೂಚಿಸಿದೆ.
ವಿವಾದಕ್ಕೆ ಕಾರಣವಾಗಿರುವ ಅಂಶಗಳನ್ನು ಪರಿಶೀಲಿಸಲು ನಿಗಮದ ಆವರಣದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವಂತೆ ನ್ಯಾಯಾಲಯ ಹೇಳಿತು.
ಮಾರ್ಚ್ 6, 2025ರಂದು, ಚೆನ್ನೈನಲ್ಲಿರುವ ನಿಗಮದ ಪ್ರಧಾನ ಕಚೇರಿಯ ಮೇಲೆ ಹಾಗೂ ತಮಿಳುನಾಡಿನಾದ್ಯಂತ ಹಲವಾರು ಡಿಸ್ಟಿಲರಿಗಳು ಮತ್ತು ಬಾಟ್ಲಿಂಗ್ ಘಟಕಗಳ ಮೇಲೆ ಇ ಡಿ ದಾಳಿ ನಡೆಸಿತ್ತು. ಟೆಂಡರ್ ಅಕ್ರಮ, ಲೆಕ್ಕವಿಲ್ಲದ ನಗದು ವಹಿವಾಟು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಅಧಿಕ ಬೆಲೆ ನಿಗದಿ ಮುಂತಾದ ವಿಷಯಗಳನ್ನು ಉಲ್ಲೇಖಿಸಿ ₹1,000 ಕೋಟಿಗೂ ಹೆಚ್ಚಿನ ಹಣಕಾಸಿನ ಅಕ್ರಮ ನಡೆದಿದೆ ಎಂದು ಇ ಡಿ ಆರೋಪಿಸಿತ್ತು.