
ಕಳೆದ 10 ವರ್ಷಗಳಲ್ಲಿ ಹಾಲಿ ಮತ್ತು ಮಾಜಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ರಾಜಕೀಯ ಮುಖಂಡರು ಹಾಗೂ ರಾಜಕೀಯ ಪಕ್ಷಗಳೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳ ವಿರುದ್ಧ ಜಾರಿ ನಿರ್ದೇಶನಾಲಯ (ಇ ಡಿ) 193 ಪ್ರಕರಣಗಳನ್ನು ದಾಖಲಿಸಿದೆ ಎಂದು ಕೇಂದ್ರ ಹಣಕಾಸು ಮತ್ತು ಕಂದಾಯ ಸಚಿವಾಲಯ ಇತ್ತೀಚೆಗೆ ಸಂಸತ್ತಿಗೆ ತಿಳಿಸಿದೆ.
ಇದರಲ್ಲಿ ಕಳೆದ 10 ವರ್ಷಗಳಲ್ಲಿ ಕೇವಲ ಎರಡು ಅಪರಾಧಗಳಿಗೆ ಸಂಬಂಧಿಸಿದಂತೆ ಮಾತ್ರ ಶಿಕ್ಷೆ ವಿಧಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.
ಕೇರಳದ ಸಂಸದ (ಸಂಸದ) ಎ ಎ ರಹೀಮ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಹಣಕಾಸು ಸಚಿವಾಲಯದ ರಾಜ್ಯ ಸಚಿವ ಪಂಕಜ್ ಚೌಧರಿ ಈ ಮಾಹಿತಿ ನೀಡಿದ್ದಾರೆ .
ರಾಜಕಾರಣಿಗಳ ವಿರುದ್ಧ ಇ ಡಿ ಹೂಡಿರುವ ಪ್ರಕರಣಗಳ ಸಂಖ್ಯೆ, ಅಪರಾಧ ನಿರ್ಣಯ, ಖುಲಾಸೆ ಹಾಗೂ ಬಾಕಿ ಇರುವ ತನಿಖೆ ಕುರಿತು ವರ್ಷವಾರು ಮಾಹಿತಿ, ವಿರೋಧ ಪಕ್ಷದ ನಾಯಕರ ವಿರುದ್ಧದ ಪ್ರಕರಣಗಳ ಹೆಚ್ಚಳದ ಕುರಿತು ತನಿಖೆ ಮತ್ತು ಈ ಪ್ರವೃತ್ತಿಗೆ ಸಮರ್ಥನೆ ಏನು? ಹಾಗೂ ಜಾರಿ ನಿರ್ದೇಶನಾಲಯದ ತನಿಖೆಗಳಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ಸರ್ಕಾರ ಕೈಗೊಂಡಿರುವ ಸುಧಾರಣೆಗಳೇನು? ಎಂದು ರಹೀಮ್ ಪ್ರಶ್ನೆ ಕೇಳಿದ್ದರು.
ಮೊದಲ ಪ್ರಶ್ನೆಗೆ ಉತ್ತರಿಸುತ್ತಾ ಸಚಿವ ಚೌಧರಿ ಅವರು ಸಂಸದರು, ಶಾಸಕರು, ಸ್ಥಳೀಯ ಆಡಳಿತಗಾರರ ಮತ್ತು ಅವರ ಪಕ್ಷಗಳ ವಿರುದ್ಧ ದಾಖಲಾಗಿರುವ ಇ ಡಿ ಪ್ರಕರಣಗಳ ದತ್ತಾಂಶವನ್ನು ರಾಜ್ಯವಾರು ನಿರ್ವಹಿಸಿಲ್ಲ ಎಂದು ಹೇಳಿದರು.
ಆದರೂ ಕಳೆದ 10 ವರ್ಷಗಳಲ್ಲಿ ಹಾಲಿ ಮತ್ತು ಮಾಜಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ರಾಜಕೀಯ ನಾಯಕರು ಅಥವಾ ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿರುವ ಯಾರ ವಿರುದ್ಧದ ಪ್ರಕರಣಗಳ ವರ್ಷವಾರು ವಿವರಗಳನ್ನು ಅವರು ಒದಗಿಸಿದ್ದಾರೆ.
ಕಳೆದ 10 ವರ್ಷಗಳಲ್ಲಿ ದಾಖಲಾಗಿರುವ ಒಟ್ಟು 193 ಪ್ರಕರಣಗಳಲ್ಲಿ ಕೇವಲ ಎರಡರಲ್ಲಿ ಮಾತ್ರ ಶಿಕ್ಷೆಯಾಗಿದೆ. ಆದರೆ ಇಷ್ಟೂ ಪ್ರಕರಣಗಳಲ್ಲಿ ಯಾರನ್ನೂ ದೋಷಮುಕ್ತಗೊಳಿಸಿಲ್ಲ ಎಂದು ಅವರು ಮಾಹಿತಿ ನೀಡಿದರು.
ವಿರೋಧಪಕ್ಷಗಳ ನಾಯಕರ ವಿರುದ್ಧದ ಪ್ರಕರಣಗಳ ಹೆಚ್ಚಳವಾಗಿರುವ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಆ ಬಗೆಯ ಯಾವುದೇ ಮಾಹಿತಿ ನಿರ್ವಹಿಸಿಲ್ಲ ಎಂದಿದ್ದಾರೆ.
ನಾಲ್ಕನೇ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು ಇ ಡಿ ವಿಶ್ವಾಸಾರ್ಹ ಪುರಾವೆಗಳನ್ನು ಆಧರಿಸಿಯಷ್ಟೇ ತನಿಖೆ ಕೈಗೆತ್ತಿಕೊಳ್ಳುತ್ತದೆಯೇ ಹೊರತು ರಾಜಕೀಯ ನಂಟು, ಧರ್ಮದ ಆಧಾರದಲ್ಲಿ ಪ್ರಕರಣಗಳಲ್ಲಿ ಭೇದ ಎಣಿಸುವುದಿಲ್ಲ. ಇದಲ್ಲದೆ, ಇ ಡಿಯ ಕ್ರಮಗಳು ಸದಾ ನ್ಯಾಯಾಂಗ ಪರಿಶೀಲನೆಗೆ ಮುಕ್ತವಾಗಿರುತ್ತದೆ ಎಂದಿದ್ದಾರೆ.
[ಸಚಿವರ ಲಿಖಿತ ಉತ್ತರದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]