ಅಲ್ಗೊ ಲೀಗಲ್ ಮತ್ತು ಅದರ ಸಂಸ್ಥಾಪಕ ಸಂದೀಪ್ ಕಪೂರ್ ಅವರು ಹೂಡಿರುವ ಒಂದು ಕೋಟಿ ರೂಪಾಯಿ ಮಾನನಷ್ಟ ದಾವೆ ಕುರಿತಾದ ಮಧ್ಯಂತರ ಮನವಿಗಳಿಗೆ ಸಂಬಂಧಿಸಿದಂತೆ ಎಚ್ ಟಿ ಮೀಡಿಯಾ ಲಿಮಿಟೆಡ್, ನೆಟ್‌ವರ್ಕ್ 18. ಕಾಂ ಲಿಮಿಟೆಡ್, ನಿಖಿಲ್ ಪಟವರ್ಧನ್ ಹಾಗೂ ಸಿಕೊಯಾ ಕ್ಯಾಪಿಟಲ್ ಪರವಾಗಿ ಶನಿವಾರ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದಲ್ಲಿ ಆಕ್ಷೇಪಣೆ ಸಲ್ಲಿಸಲಾಯಿತು.
ಸಂದೀಪ್ ಕಪೂರ್ ಮತ್ತು ಅಲ್ಗೊ ಲೀಗಲ್ ಸಂಸ್ಥೆಯು ಸಿಕೊಯಾ ಕ್ಯಾಪಿಟಲ್ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳ ವಿರುದ್ಧ ಶಾಶ್ವತ ನಿರ್ಬಂಧಕಾದೇಶ ಕೋರಿರುವ ಮನವಿಯ ವಿಚಾರಣೆಯನ್ನು 18ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶ ಎಂ ಎಚ್ ಅಣ್ಣಯ್ಯನವರ ನಡೆಸಿದರು.
ಎಚ್ ಟಿ ಮೀಡಿಯಾ ಲಿಮಿಟೆಡ್, ನೆಟ್‌ವರ್ಕ್ 18. ಕಾಂ ಲಿಮಿಟೆಡ್ ಮತ್ತು ನಿಖಿಲ್ ಪಟವರ್ಧನ್ ಪರವಾಗಿ ವಕೀಲರಾದ ಅವಿನಾಶ್ ಬಾಲಕೃಷ್ಣ ಮತ್ತು ಆದಿತ್ಯ ಸೇಠಿ ಅವರು ವಕಾಲತ್ತು ಮತ್ತು ಆಕ್ಷೇಪಣೆ ಸಲ್ಲಿಸಿದರು. ಸಿಕೊಯಾ ಕ್ಯಾಪಿಟಲ್ ಪರವಾಗಿ ಹಾಜರಾಗಿದ್ದ ವಕೀಲೆ ಪ್ರೇರಣಾ ಪೊನ್ನಪ್ಪ ಅವರು ಆಕ್ಷೇಪಣೆ ಸಲ್ಲಿಸಿದರು.
ಕಳೆದ ಬಾರಿ ಹಾಜರಾಗಿದ್ದ ಎರಡನೇ ಪ್ರತಿವಾದಿಯಾದ ಬೆನೆಟ್ ಕೋಲ್ಮನ್ ಅಂಡ್ ಕಂಪೆನಿ ಲಿಮಿಟೆಡ್ ಮತ್ತು ಅವರ ವಕೀಲರು ಇಂದು ಗೈರಾಗಿದ್ದರು. ಹೀಗಾಗಿ, ಎರಡನೇ ಪ್ರತಿವಾದಿಯನ್ನು ಎಕ್ಸ್ ಪಾರ್ಟಿ ಮಾಡಲಾಗಿದೆ.
ಫಿರ್ಯಾದುದಾರರ ಕೋರಿಕೆಯಂತೆ ಪತ್ರಕರ್ತರಾದ ಐದು ಮತ್ತು ಆರನೇ ಪ್ರತಿವಾದಿಗಳಾಗಿರುವ ದಿಗ್ಬಿಜಯ್ ಮಿಶ್ರಾ ಮತ್ತು ಸಮಿದಾ ಶರ್ಮಾ ಅವರಿಗೆ ಇಮೇಲ್ ಮೂಲಕ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ಜೂನ್ 29ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ, ಟ್ವಿಟರ್ ಪ್ರತಿನಿಧಿಸಿದ್ದ ವಕೀಲರು “ಆಕ್ಷೇಪಣೆ ಸಲ್ಲಿಸಲು ಕನಿಷ್ಠ ನಾಲ್ಕು ದಿನ ಕಾಲಾವಕಾಶ ನೀಡಬೇಕು” ಎಂದು ಕೋರಿದರು.
ಸಂದೀಪ್ ಕಪೂರ್ ಮತ್ತು ಅಲ್ಗೊ ಲೀಗಲ್ ಪ್ರತಿನಿಧಿಸಿದ್ದ ವಕೀಲ ವಿಕಾಸ್ ಅವರು ಟ್ವಿಟರ್ ವಕೀಲರ ಕೋರಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. “ನಮಗೆ ಹಾನಿಯಾಗಿದೆ. ನಮ್ಮ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಲಾಗಿದೆ. ಸಮಯ ವಿಸ್ತರಿಸಿದಷ್ಟೂ ನಮಗೆ ಸಮಸ್ಯೆಯಾಗುತ್ತದೆ. ಮಾಧ್ಯಮಗಳು ವರದಿ ಪ್ರಕಟಿಸುವುದನ್ನು ಮುಂದುವರಿಸುತ್ತವೆ. ಒಂದೊಮ್ಮೆ ಕಾಲಾವಕಾಶ ನೀಡಿದರೂ ಅತ್ಯಂತ ಕಡಿಮೆ ಕಾಲಾವಕಾಶ ನೀಡಿ” ಎಂದು ಮನವಿ ಮಾಡಿದರು.
ಆಗ ನ್ಯಾಯಾಧೀಶರು ಎಂ ಎಚ್ ಅಣ್ಣಯ್ಯನವರ “ಮಧ್ಯಾಹ್ನ ಸಮಯ ನೀಡಲಾಗುವುದು ವಾದ ಮಂಡಿಸಿ” ಎಂದರು. ಅದಕ್ಕೆ ಪ್ರಸ್ತುತ ಸಾಧ್ಯವಿಲ್ಲ ಎಂದು ವಿಕಾಸ್ ಹೇಳಿದರು. ಅಂತಿಮವಾಗಿ ನ್ಯಾಯಾಲಯವು ವಿಚಾರಣೆಯನ್ನು ಜೂನ್ 29ಕ್ಕೆ ಮುಂದೂಡಿತು.
ಕಳೆದ ವಿಚಾರಣೆಯಲ್ಲಿ ಉಭಯ ಪಕ್ಷಕಾರರ ವಾದ ಪರಿಶೀಲಿಸಿದ್ದು, ಪ್ರತಿವಾದಿಗಳಿಗೆ ಅವಕಾಶ ಮಾಡಿಕೊಟ್ಟು ತಕರಾರನ್ನು ಪಡೆದುಕೊಂಡು ಮಧ್ಯಂತರ ಅರ್ಜಿಗಳ ಮೇಲೆ ಆದೇಶ ಮಾಡುವುದು ಸೂಕ್ತ ಎಂದು ನ್ಯಾಯಾಲಯಕ್ಕೆ ಕಂಡುಬಂದಿದ್ದರಿಂದ ಆದೇಶಕ್ಕೆ ಕಾಯ್ದಿರಿಸಲಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಶೀಘ್ರ ಲಿಪಿಗಾರರಿಗೆ ಹೇಳಿದ್ದು, ಇನ್ನುಳಿದ ವಿಷಯದ ಬಗ್ಗೆ ಬೆರಳಚ್ಚು ಮಾಡಿರುವುದಿಲ್ಲ. ಈ ಹಂತದಲ್ಲಿ ಪ್ರತಿವಾದಿಗಳು ಅರ್ಜಿ ಸಲ್ಲಿಸಿರುವುದರಿಂದ ಆದೇಶ ಮಾಡಲಾಗಿಲ್ಲ. ಈ ಹಿನ್ನೆಲೆಯಲ್ಲಿ ಆದೇಶಕ್ಕಾಗಿ ಇದ್ದ ಹಂತವನ್ನು ತೆರವುಗೊಳಿಸಲಾಗಿದೆ ಎಂದು ನ್ಯಾಯಾಲಯ ಆದೇಶ ಮಾಡಿತ್ತು.
ಸಂದೀಪ್ ಕಪೂರ್ ಅವರು ಆಲ್ಗೊ ಲೀಗಲ್‌ನ ಪಾಲುದಾರರಾಗಿದ್ದು, ಈ ಸಂಸ್ಥೆಯಲ್ಲಿ 85 ವಕೀಲರು ಹಾಗೂ 15 ಸಿಬ್ಬಂದಿ ಇದ್ದಾರೆ. ಅರ್ಜಿದಾರರ ಘನತೆಗೆ ಚ್ಯುತಿಯುಂಟಾಗುವಂಥ ಬರಹಗಳನ್ನು ಪ್ರತಿವಾದಿಗಳು ವಿದ್ಯುನ್ಮಾನ ಮಾಧ್ಯಮ, ಪತ್ರಿಕೆ, ನೆಟ್‌ವರ್ಕ್, ವೆಬ್‌ಸೈಟ್, ಟ್ವಿಟರ್‌ನಲ್ಲಿ ಪ್ರಕಟ ಮಾಡಿದ್ದಾರೆ ಎಂಬುದು ನ್ಯಾಯಾಲಯದ ಮುಂದೆ ಇಟ್ಟಿರುವ ದಾಖಲೆಗಳಿಂದ ಮೇಲ್ನೋಟಕ್ಕೆ ತಿಳಿದುಬಂದಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿತ್ತು.
ಪ್ರತಿವಾದಿಗಳಾದ ಬೆನೆಟ್ ಕೋಲ್ಮನ್ ಅಂಡ್ ಕಂಪೆನಿ ಲಿಮಿಟೆಡ್, ಪತ್ರಕರ್ತರಾದ ದಿಗ್ಬಿಜಯ್ ಮಿಶ್ರಾ, ಸಮಿಧಾ ಶರ್ಮಾ ಮತ್ತು ಅಶೋಕ್ ಕುಮಾರ್/ಜಾನ್ ದಿಯೊ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ಅಲ್ಲದೇ, ಎಚ್ ಟಿ ಮೀಡಿಯಾ ಲಿಮಿಟೆಡ್, ನೆಟ್‌ವರ್ಕ್ 18. ಕಾಂ ಲಿಮಿಟೆಡ್, ಟ್ವಿಟರ್ ಇಂಕ್, ಪತ್ರಕರ್ತ ನಿಖಿಲ್ ಪಟವರ್ಧನ್ ಮತ್ತು ಸಿಕೊಯಾ ಕ್ಯಾಪಿಟಲ್‌ಗೆ ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯ ಆದೇಶಿಸಿತ್ತು.
ಪ್ರಕರಣದ ಹಿನ್ನೆಲೆ: ಸಿಕೊಯಾ ಕ್ಯಾಪಿಟಲ್ ಜೊತೆ ವ್ಯವಹಾರ ಹೊಂದಿರುವ ಕೆಲವು ಕಂಪೆನಿಗಳು ವಿದೇಶಿ ವಿನಿಮಯ ನಿರ್ವಹಣೆ ಕಾಯಿದೆ ಉಲ್ಲಂಘಿಸಿದ್ದು, ಆದಾಯ ತೆರಿಗೆ ಹಾಗೂ ಜಾರಿ ನಿರ್ದೇಶನಾಲಯಕ್ಕೆ ಪ್ರಕರಣ ದಾಖಲಿಸಲು ಸೂಚಿಸಲಾಗುವುದು ಎಂದು ಕೆಲವು ಕಂಪೆನಿಗಳಿಗೆ ಆಲ್ಗೊ ಲೀಗಲ್‌ನ ಸಂದೀಪ್ ಕಪೂರ್ ಅವರು ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಿಕೊಯಾ ಕ್ಯಾಪಿಟಲ್ ತನ್ನ ಜೊತೆ ವ್ಯವಹಾರ ಹೊಂದಿರುವ ಸಂಸ್ಥೆಗಳಿಗೆ ಆಲ್ಗೊ ಲೀಗಲ್‌ಗೆ ಸಂಬಂಧಿಸಿದಂತೆ ಕೆಲ ಕಳವಳಕಾರಿ ಬೆಳವಣಿಗೆಗಳು ನಡೆದಿವೆ ಎಂದು ತನ್ನ ಜೊತೆ ವ್ಯವಹಾರ ಹೊಂದಿರುವ ಕಂಪೆನಿಗಳಿಗೆ ಇಮೇಲ್ ಕಳುಹಿಸಿತ್ತು ಎನ್ನಲಾಗಿದೆ.
ಈ ಹಿಂದೆ ಸಿಕೊಯಾ ಕ್ಯಾಪಿಟಲ್‌ನಲ್ಲಿ ಕಾನೂನು ವಿಭಾಗದ ನಿರ್ದೇಶಕರಾಗಿದ್ದ ಕಪೂರ್ ಅವರು ತಮ್ಮ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು, ಸಿಕೊಯಾ ಜೊತೆಗೆ ವ್ಯವಹಾರ ಹೊಂದಿರುವ ಕಂಪೆನಿಗಳು ತಮ್ಮ ಒಡೆತನದ ಆಲ್ಗೊ ಲೀಗಲ್ ಅನ್ನು ಕಾನೂನು ಸಂಬಂಧಿತ ಸೇವೆಗಳಿಗೆ ನೇಮಕ ಮಾಡಿಕೊಳ್ಳಲು ಒತ್ತಡ ಹೇರಿದ್ದರು ಎಂದು ಲೇಖನಗಳಲ್ಲಿ ಆರೋಪಿಸಲಾಗಿತ್ತು. ಇದರಿಂದ ತಮ್ಮ ಮತ್ತು ಸಂಸ್ಥೆಯ ಘನತೆಗೆ ಚ್ಯುತಿಯಾಗಿದೆ ಎಂದು ಸಂದೀಪ್ ಕಪೂರ್ ನ್ಯಾಯಾಲಯದ ಮೆಟ್ಟಿಲೇರಿದ್ದು, ಮಾನನಷ್ಟ ದಾವೆ ಹೂಡಿದ್ದಾರೆ.