ಆಲ್ಗೊ ಲೀಗಲ್ ಮತ್ತು ಅದರ ಸಂಸ್ಥಾಪಕ ಸಂದೀಪ್ ಕಪೂರ್ ಅವರು ಹೂಡಿರುವ ಒಂದು ಕೋಟಿ ರೂಪಾಯಿ ಮಾನನಷ್ಟ ದಾವೆ ಕುರಿತಾದ ಮಧ್ಯಂತರ ಮನವಿಗಳಿಗೆ ಸಂಬಂಧಿಸಿದಂತೆ ಟ್ವಿಟರ್ ಇಂಕ್ ಬುಧವಾರ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದಲ್ಲಿ ಆಕ್ಷೇಪಣೆ ಸಲ್ಲಿಸಿತು.
ಸಂದೀಪ್ ಕಪೂರ್ ಮತ್ತು ಆಲ್ಗೊ ಲೀಗಲ್ ಸಂಸ್ಥೆಯು ಸಿಕೊಯಾ ಕ್ಯಾಪಿಟಲ್ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳ ವಿರುದ್ಧ ಶಾಶ್ವತ ನಿರ್ಬಂಧಕಾದೇಶ ಕೋರಿರುವ ಮನವಿಯ ವಿಚಾರಣೆಯನ್ನು 18ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶ ಎಂ ಎಚ್ ಅಣ್ಣಯ್ಯನವರ ನಡೆಸಿದರು.
ಐದನೇ ಪ್ರತಿವಾದಿ ಪತ್ರಕರ್ತ ದಿಗ್ಬಿಜಯ್ ಮಿಶ್ರಾ ಹಾಗೂ ಆರನೇ ಪ್ರತಿವಾದಿ ಸಮಿದಾ ಶರ್ಮಾ ಅವರ ಇಮೇಲ್ ಮೆಮೊಗಳನ್ನು ಅವರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದರು. ಆಕ್ಷೇಪಣೆ ಸಲ್ಲಿಸಿದ ಟ್ವಿಟರ್ ಪರ ವಕೀಲರು ವಿಚಾರಣೆಗೆ ದಿನಾಂಕ ನಿಗದಿಪಡಿಸಬೇಕು ಎಂದು ಕೋರಿದರು. ಇದಕ್ಕೆ ಒಪ್ಪಿದ ನ್ಯಾಯಾಲಯವು ಜುಲೈ 20ಕ್ಕೆ ವಿಚಾರಣೆ ಮುಂದೂಡಿತು.
ಕಳೆದ ವಿಚಾರಣೆಯಲ್ಲಿ ಎಚ್ ಟಿ ಮೀಡಿಯಾ ಲಿಮಿಟೆಡ್, ನೆಟ್‌ವರ್ಕ್ 18. ಕಾಂ ಲಿಮಿಟೆಡ್, ನಿಖಿಲ್ ಪಟವರ್ಧನ್ ಹಾಗೂ ಸಿಕೊಯಾ ಕ್ಯಾಪಿಟಲ್ ಪರವಾಗಿ ಆಕ್ಷೇಪಣೆ ಸಲ್ಲಿಸಲಾಗಿತ್ತು. ಟ್ವಿಟರ್ ಪರ ವಕೀಲರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದ್ದರು. ಇದಕ್ಕೆ ಒಪ್ಪಿದ್ದ ನ್ಯಾಯಾಲಯವು ದಿಗ್ಬಿಜಯ್ ಮಿಶ್ರಾ ಮತ್ತು ಸಮಿದಾ ಶರ್ಮಾ ಅವರಿಗೆ ಇಮೇಲ್ ಮೂಲಕ ಸಮನ್ಸ್ ಜಾರಿ ಮಾಡಿತ್ತು.
ಪ್ರಕರಣದ ಹಿನ್ನೆಲೆ: ಸಿಕೊಯಾ ಕ್ಯಾಪಿಟಲ್ ಜೊತೆ ವ್ಯವಹಾರ ಹೊಂದಿರುವ ಕೆಲವು ಕಂಪೆನಿಗಳು ವಿದೇಶಿ ವಿನಿಮಯ ನಿರ್ವಹಣೆ ಕಾಯಿದೆ ಉಲ್ಲಂಘಿಸಿದ್ದು, ಆದಾಯ ತೆರಿಗೆ ಹಾಗೂ ಜಾರಿ ನಿರ್ದೇಶನಾಲಯಕ್ಕೆ ಪ್ರಕರಣ ದಾಖಲಿಸಲು ಸೂಚಿಸಲಾಗುವುದು ಎಂದು ಕೆಲವು ಕಂಪೆನಿಗಳಿಗೆ ಆಲ್ಗೊ ಲೀಗಲ್‌ನ ಸಂದೀಪ್ ಕಪೂರ್ ಅವರು ಒತ್ತಡ ಹಾಕಿದ್ದರು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಿಕೊಯಾ ಕ್ಯಾಪಿಟಲ್ ತನ್ನ ಜೊತೆ ವ್ಯವಹಾರ ಹೊಂದಿರುವ ಸಂಸ್ಥೆಗಳಿಗೆ ಆಲ್ಗೊ ಲೀಗಲ್‌ಗೆ ಸಂಬಂಧಿಸಿದಂತೆ ಕೆಲ ಕಳವಳಕಾರಿ ಬೆಳವಣಿಗೆಗಳು ನಡೆದಿವೆ ಎಂದು ತನ್ನ ಜೊತೆ ವ್ಯವಹಾರ ಹೊಂದಿರುವ ಕಂಪೆನಿಗಳಿಗೆ ಇಮೇಲ್ ಕಳುಹಿಸಿತ್ತು ಎನ್ನಲಾಗಿದೆ.
ಈ ಹಿಂದೆ ಸಿಕೊಯಾ ಕ್ಯಾಪಿಟಲ್‌ನಲ್ಲಿ ಕಾನೂನು ವಿಭಾಗದ ನಿರ್ದೇಶಕರಾಗಿದ್ದ ಕಪೂರ್ ಅವರು ತಮ್ಮ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು, ಸಿಕೊಯಾ ಜೊತೆಗೆ ವ್ಯವಹಾರ ಹೊಂದಿರುವ ಕಂಪೆನಿಗಳು ತಮ್ಮ ಒಡೆತನದ ಆಲ್ಗೊ ಲೀಗಲ್ ಅನ್ನು ಕಾನೂನು ಸಂಬಂಧಿತ ಸೇವೆಗಳಿಗೆ ನೇಮಕ ಮಾಡಿಕೊಳ್ಳಲು ಒತ್ತಡ ಹೇರಿದ್ದರು ಎಂದು ಲೇಖನಗಳಲ್ಲಿ ಆರೋಪಿಸಲಾಗಿತ್ತು. ಇದರಿಂದ ತಮ್ಮ ಮತ್ತು ಸಂಸ್ಥೆಯ ಘನತೆಗೆ ಚ್ಯುತಿಯಾಗಿದೆ ಎಂದು ಸಂದೀಪ್ ಕಪೂರ್ ನ್ಯಾಯಾಲಯದ ಮೆಟ್ಟಿಲೇರಿದ್ದು, ಮಾನನಷ್ಟ ದಾವೆ ಹೂಡಿದ್ದಾರೆ.