ಎಲ್ಲ ಮತಾಂತರಗಳು ಅಕ್ರಮವಲ್ಲ: ಮಧ್ಯಪ್ರದೇಶ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂ ನಕಾರ

ಹೈಕೋರ್ಟ್ ತೀರ್ಪಿನ ವಿರುದ್ಧ ಮಧ್ಯಪ್ರದೇಶ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಕುರಿತಂತೆ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಪೀಠ ಸಂಬಂಧಪಟ್ಟವರಿಗೆ ನೋಟಿಸ್ ನೀಡಿತು.
Supreme Court, religious conversion
Supreme Court, religious conversion

ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ ಪ್ರಕಾರ ಮತಾಂತರದ ವೇಳೆ ಜಿಲ್ಲಾಧಿಕಾರಿ ಎದುರು ಘೋಷಣೆ ಮಾಡುವ ಅಗತ್ಯವನ್ನು ತಳ್ಳಿಹಾಕಿದ್ದ ಮಧ್ಯಪ್ರದೇಶ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್‌ ಮಂಗಳವಾರ ನಿರಾಕರಿಸಿದೆ [ಮಧ್ಯಪ್ರದೇಶ ಸರ್ಕಾರ ಇನ್ನಿತರರು ಮತ್ತು ಸ್ಯಾಮ್ಯುಯೆಲ್‌ ಡೇನಿಯಲ್‌ ನಡುವಣ ಪ್ರಕರಣ].

ಹೈಕೋರ್ಟ್ ತೀರ್ಪಿನ ವಿರುದ್ಧ ಮಧ್ಯಪ್ರದೇಶ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಕುರಿತಂತೆ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಪೀಠ ಸಂಬಂಧಪಟ್ಟವರಿಗೆ ನೋಟಿಸ್‌ ನೀಡಿತು. ಈ ವೇಳೆ ಅದು, "ಎಲ್ಲ ಮತಾಂತರಗಳನ್ನು ಕಾನೂನುಬಾಹಿರವೆನ್ನಲಾಗದು" ಎಂದಿತು. ಮುಂದುವರೆದು, ವಿಶೇಷ ಅನುಮತಿ ಅರ್ಜಿ (ಎಸ್‌ಎಲ್‌ಪಿ) ಮತ್ತು ಮಧ್ಯಂತರ ಪರಿಹಾರ ಕೋರಿಕೆಗೆ ಸಂಬಂಧಿಸಿದಂತೆ ಸಂಬಂಧಪಟ್ಟವರಿಗೆ ನೋಟಿಸ್‌ ಜಾರಿ ಮಾಡಲು ತಿಳಿಸಿತು. ಫೆಬ್ರವರಿ 7ಕ್ಕೆ ಪ್ರತಿಕ್ರಿಯಿಸಲು ಸೂಚಿಸಿತು.

Also Read
ಮತಾಂತರ ಪ್ರಶ್ನಿಸಿದ್ದ ಪಿಐಎಲ್‌ನಲ್ಲಿ ಅಲ್ಪಸಂಖ್ಯಾತ ಧರ್ಮಗಳ ಅವಹೇಳನ: ಪರಿಶೀಲಿಸಲು ಸೂಚಿಸಿದ ಸುಪ್ರೀಂ ಕೋರ್ಟ್

ಇಂದು ನಡೆದ ವಿಚಾರಣೆಯ ವೇಳೆ ರಾಜ್ಯ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿ, "ಮದುವೆ ಅಥವಾ ಮತಾಂತರಕ್ಕೆ ಯಾವುದೇ ನಿಷೇಧವಿಲ್ಲ. ಜಿಲ್ಲಾಧಿಕಾರಿಗೆ (ಮತಾಂತರದ) ಮಾಹಿತಿ ನೀಡಬೇಷ್ಟೇ. ತಡೆಯಾಜ್ಞೆಯು ಇದನ್ನಷ್ಟೇ ಮಾಡಲಿದೆ” ಎಂದರು. ಇದಕ್ಕೆ ಉತ್ತರಿಸಿದ ಪೀಠ, ಇದನ್ನು ಪರಿಗಣಿಸಲು ಸಾಧ್ಯವಿಲ್ಲ ಮತ್ತು ರಾಜ್ಯ ಸರ್ಕಾರಕ್ಕೆ ಪ್ರತಿವಾದ ಮಂಡಿಸುವುದಿದ್ದರೆ ಅದನ್ನು ಮುಂದಿನ ವಿಚಾರಣೆಯ ದಿನಾಂಕದಂದು (ಫೆ. 7) ಪ್ರಸ್ತುತಪಡಿಸಬಹುದು” ಎಂದಿತು.

ಕಾಯಿದೆಯ ಸೆಕ್ಷನ್ 10 ಅನ್ನು (ಮತಾಂತರದ ಮುನ್ನ ಘೋಷಣೆ)  ಉಲ್ಲಂಘಿಸುವ ಯಾವುದೇ ವ್ಯಕ್ತಿಯ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ಹೈಕೋರ್ಟ್‌  ನ್ಯಾಯಮೂರ್ತಿಗಳಾದ ಸುಜೋಯ್ ಪಾಲ್ ಮತ್ತು ಪ್ರಕಾಶ್ ಚಂದ್ರ ಗುಪ್ತಾ ಅವರಿದ್ದ ಪೀಠ 2022ರ ನವೆಂಬರ್ 1ರಂದು ಆದೇಶ ಹೊರಡಿಸಿತ್ತು. ಕಾಯಿದೆಯ ಸಾಂವಿಧಾನಿಕತೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ವೇಳೆ ಹೈಕೋರ್ಟ್‌ ಈ ತೀರ್ಪು ನೀಡಿತ್ತು.

Kannada Bar & Bench
kannada.barandbench.com