

ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ 37ನೇ ಅಖಿಲ ಭಾರತ ವಕೀಲರ ಕ್ರಿಕೆಟ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ವಕೀಲರ ಕ್ರಿಕೆಟ್ ತಂಡವು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು, ನಾಳೆ ನಡೆಯಲಿರುವ ಎಂಟರ ಘಟ್ಟದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಪಂಜಾಬ್-ಹರಿಯಾಣ ವಕೀಲರ ಕ್ರಿಕೆಟ್ ತಂಡವನ್ನು ಎದುರಿಸಲಿದೆ.
ಮೂರು ಲೀಗ್ ಪಂದ್ಯಗಳನ್ನು ಕರ್ನಾಟಕ ತಂಡ ಆಡಿದ್ದು, ಗ್ವಾಲಿಯರ್ ಮತ್ತು ಔರಂಗಾಬಾದ್ ಕ್ರಿಕೆಟ್ ವಕೀಲರ ತಂಡದ ವಿರುದ್ಧ ಜಯಗಳಿಸಿದೆ. ಬುಧವಾರ ಮುಂಬೈ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ತಂಡ ಪರಾಭವಗೊಂಡಿದೆ. ಇಂದು ಎಲ್ಲಾ ತಂಡಗಳಿಗೂ ಬಿಡುವು ನೀಡಲಾಗಿದೆ.
ಡಿಸೆಂಬರ್ 21ರಂದು ಟೂರ್ನಿ ಆರಂಭವಾಗಿದ್ದು, ಡಿಸೆಂಬರ್ 29ರಂದು ಫೈನಲ್ ಪಂದ್ಯ ನಡೆಯಲಿದೆ. ಇದರ ಜೊತೆಗೆ ಕ್ವಾರ್ಟರ್ ಫೈನಲ್‌ನಲ್ಲಿ ಸೋತ ತಂಡಗಳು ʼಪ್ಲೇಟ್ ಚಾಂಪಿಯನ್‌ಷಿಪ್ʼ ಪ್ರಶಸ್ತಿಗೆ ಸೆಣಸಲಿವೆ. ಇದಲ್ಲದೇ ಪ್ರತಿ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನೂ ನೀಡಲಾಗುತ್ತದೆ.
ಕರ್ನಾಟಕ, ಮುಂಬೈ, ತಮಿಳನಾಡು, ತೆಲಂಗಾಣ, ಆಂಧ್ರ ಪ್ರದೇಶ, ಗುಜರಾತ್, ಒಡಿಶಾ, ಸುಪ್ರೀಂ ಕೋರ್ಟ್ ದೆಹಲಿ, ದೆಹಲಿ, ಚತ್ತೀಸಗಢ, ಪಶ್ಚಿಮ ಬಂಗಾಳ, ಗ್ವಾಲಿಯರ್, ಅಲಹಾಬಾದ್, ಲಖನೌ, ಔರಂಗಾಬಾದ್ ಮತ್ತು ಇಂದೋರ್ ತಂಡಗಳನ್ನು ಒಳಗೊಂಡ ನಾಲ್ಕು ಗುಂಪುಗಳಿವೆ. ಟೂರ್ನಿಯಲ್ಲಿ 24 ಲೀಗ್ ಪಂದ್ಯಗಳೂ ಸೇರಿ ಒಟ್ಟು 34 ಪಂದ್ಯಗಳು ನಡೆಯಲಿವೆ.
ಇದೇ ಮೊದಲ ಬಾರಿಗೆ ದೇಶದ ಹೊರಗೆ ಅಖಿಲ ಭಾರತ ವಕೀಲರ ಕ್ರಿಕೆಟ್ ಚಾಂಪಿಯನ್‌ಷಿಪ್ ನಡೆಯುತ್ತಿದ್ದು, ರಣಜಿ ಮಾದರಿಯ ಟೂರ್ನಿ ಆಯೋಜನೆಗೆ ಸಿದ್ಧಪಡಿಸಿರುವ ಕೊಲಂಬೊದ ಎಂಟು ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯುತ್ತಿವೆ. ಪ್ರತೀ ಪಂದ್ಯವು 35 ಓವರ್‌ಗಳ ಪಂದ್ಯವಾಗಿದ್ದು, ವೈಟ್ ಬಾಲ್ ಬಳಕೆ ಮಾಡಲಾಗುತ್ತಿದೆ.
ಶ್ರೀಲಂಕಾದ ಕೊಲೊಂಬೊದಲ್ಲಿರುವ ಮರ್ಕೆಂಟೈಲ್ ಕ್ರಿಕೆಟ್ ಅಸೋಸಿಯೇಶನ್, ಕ್ರಿಕೆಟ್ ಫಾರ್ ಅಡ್ವೊಕೇಟ್ ಅಸೋಸಿಯೇಶನ್ಸ್ ಇನ್ ಇಂಡಿಯಾ (ಕಾಯ್- ಸಿಎಎಐ) ಮತ್ತು ಬೆಂಗಳೂರಿನ ವಕೀಲ ಅರವಿಂದ್ ರೆಡ್ಡಿ ಅವರ ಮಾಲೀಕತ್ವದ ಎಎಂಆರ್ ಸಮೂಹ ಸಂಸ್ಥೆ ಸಹಯೋಗದಲ್ಲಿ ಟೂರ್ನಿ ಆಯೋಜನೆಗೊಂಡಿದೆ. ಟೂರ್ನಿಯಲ್ಲಿ ಭಾಗವಹಿಸಿರುವ ಸುಮಾರು 300 ವಕೀಲರ ವಸತಿ, ಊಟ, ಟ್ರೋಫಿಗೆ ಸಂಬಂಧಿಸಿದ ಎಲ್ಲಾ ಖರ್ಚು ವೆಚ್ಚಗಳನ್ನು ಎಎಂಆರ್ ಸಂಸ್ಥೆ ವಹಿಸಿಕೊಂಡಿದೆ. ಪ್ರವಾಸದ ಖರ್ಚು ಮಾತ್ರ ಆ ಸಂಸ್ಥೆಯ ಜವಾಬ್ದಾರಿಯಾಗಿದೆ.
ಶ್ರೀಲಂಕಾ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಎಚ್ ಎಂ ದಿಲೀಪ್ ನವಾಜ್, ಶ್ರೀಲಂಕಾ ವಕೀಲರ ಸಂಸ್ಥೆಯ ಅಧ್ಯಕ್ಷ ರಾಜೀವ್ ಅಮರಸೂರ್ಯ, ಕಾಯ್ ಅಧ್ಯಕ್ಷ ಮತ್ತು ಕಾಮನ್‌ವೆಲ್ತ್ ಲಾಯರ್ಸ್ ಅಸೋಸಿಯೇಶನ್ಸ್ ಗೌರವಾಧ್ಯಕ್ಷರೂ ಆಗಿರುವ ಸುಪ್ರೀಂ ಕೋರ್ಟ್ ವಕೀಲ ಸಂತಾನ ಕೃಷ್ಣ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರೂ ಆಗಿರುವ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಮತ್ತಿತರರು ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.
ಟೂರ್ನಿ ಕುರಿತು ʼಬಾರ್ ಅಂಡ್ ಬೆಂಚ್ʼ ಜೊತೆ ಮಾತನಾಡಿದ ಕಾಯ್ ಕಾರ್ಯದರ್ಶಿ ಶೈಲೇಶ್ ಮಾರಪ್ಪ ಅವರು “1989ರಲ್ಲಿ ಹೈದರಾಬಾದ್‌ನಲ್ಲಿ ಮೊದಲ ಬಾರಿಗೆ ಅಖಿಲ ಭಾರತ ವಕೀಲರ ಕ್ರಿಕೆಟ್ ಚಾಂಪಿಯನ್‌ಷಿಪ್ ನಡೆದಿತ್ತು. ಇದೇ ಮೊದಲ ಬಾರಿಗೆ ವಿದೇಶದಲ್ಲಿ ಟೂರ್ನಿ ಆಯೋಜಿಸಲಾಗಿದೆ. ದೇಶದ 15 ಹೈಕೋರ್ಟ್, ಒಂದು ಸುಪ್ರೀಂ ಕೋರ್ಟ್ ತಂಡ ಟೂರ್ನಿಯಲ್ಲಿ ಭಾಗವಹಿಸಿವೆ. ಇದಲ್ಲದೇ ಎರಡು ವರ್ಷಗಳಿಗೊಮ್ಮೆ ವಕೀಲರ ವರ್ಲ್ಡ್ ಕಪ್ ನಡೆಯುತ್ತದೆ. 2027ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ಕೇಪ್‌ಟೌನ್‌ನಲ್ಲಿ ವಕೀಲರ ವರ್ಲ್ಡ್ ಕಪ್ ಟೂರ್ನಿ ನಡೆಯಲಿದ್ದು, ಭಾರತ ವಕೀಲರ ತಂಡ ಎರಡು ಬಾರಿ ವರ್ಲ್ಡ್ ಚಾಂಪಿಯನ್ ಆಗಿದೆ” ಎಂದು ತಿಳಿಸಿದ್ದಾರೆ.
ಮುಂದುವರಿದು, “ಕರ್ನಾಟಕ ವಕೀಲರ ಕ್ರಿಕೆಟ್ ತಂಡವು 1993 ಮತ್ತು 2005ರಲ್ಲಿ ಎರಡು ಬಾರಿ ಚಾಂಪಿಯನ್ ಆಗಿದ್ದು, ಮೂರು ಬಾರಿ ರನ್ನರ್ ಅಪ್ ಆಗಿದೆ. ಕರ್ನಾಟಕ ತಂಡದ ನಾಯಕತ್ವವನ್ನು ವಕೀಲ ಅರವಿಂದ್ ರೆಡ್ಡಿ ವಹಿಸಿದ್ದಾರೆ” ಎಂದೂ ವಿವರಿಸಿದರು.
“ಕೆಲವು ತಂಡಗಳಲ್ಲಿ ರಣಜಿ ಪಂದ್ಯಗಳನ್ನಾಡಿರುವ ಆಟಗಾರರು ಇದ್ದಾರೆ. ಹೀಗಾಗಿ, ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತಿಯಾಗಿ ಹತ್ತು ವರ್ಷ ತುಂಬಿರುವ ವಕೀಲರು ತಂಡದಲ್ಲಿ ಸ್ಥಾನ ಪಡೆಯಬಹುದು ಮತ್ತು 42 ವರ್ಷ ತುಂಬಿರುವ ಒಬ್ಬ ಆಟಗಾರ ತಂಡದಲ್ಲಿ ಇರಲೇಬೇಕು ಎಂಬ ನಿಯಮವಿದೆ” ಎಂದರು.