

ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಜನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ಅಲಾಹಾಬಾದ್ ಹೈಕೋರ್ಟ್‌ನ ಲಖನೌ ಪೀಠ ಶುಕ್ರವಾರ ನಿರಾಕರಿಸಿದೆ [ನೇಹಾ ಸಿಂಗ್ ರಾಥೋಡ್ ಮತ್ತು ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ]
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಿರ್ಣಾಯಕ ಸಮಯದಲ್ಲಿ ನೇಹಾ ಟ್ವೀಟ್ ಮಾಡಿದ್ದು ಪ್ರಧಾನಿಯವರನ್ನು ಅಗೌರವದಿಂದ ಕಾಣಲಾಗಿದೆ ಎಂದು ನ್ಯಾ. ಬ್ರಿಜ್ ರಾಜ್ ಸಿಂಗ್ ತಿಳಿಸಿದರು.
ಆರೋಪಿಗೆ ನಿರೀಕ್ಷಣಾ ಜಾಮೀನು ದೊರೆಯುವುದಕ್ಕಿಂತಲೂ ಪೂರ್ಣ ತನಿಖೆ ಅಗತ್ಯವಿದೆ ಎಂದ ನ್ಯಾಯಾಲಯ ಆಕೆ ಮಾಡಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯದಡಿ ಬರುತ್ತದೆ ಎಂಬ ವಾದವನ್ನು ಕೂಡ ತಿರಸ್ಕರಿಸಿತು.
ಸಂವಿಧಾನದ 19 ನೇ ವಿಧಿ ಎಲ್ಲಾ ನಾಗರಿಕರಿಗೆ ವಾಕ್ ಸ್ವಾತಂತ್ರ್ಯ ನೀಡಿದ್ದರೂ, ಸಾರ್ವಜನಿಕ ಶಾಂತಿ, ಅಥವಾ ನೈತಿಕತೆ ವಿಚಾರದಲ್ಲಿ ಅದಕ್ಕೆ ಸಮಂಜಸ ನಿರ್ಬಂಧ ಇದೆ. ಅರ್ಜಿದಾರರಾದ ನೇಹಾ ಅವರು 22.04.2025 ರಂದು ದುರದೃಷ್ಟಕರ ಪಹಲ್ಗಾಮ್ ದಾಳಿ ವೇಳೆ ಕೆಲ ಟ್ವೀಟ್‌ಗಳನ್ನು ಮಾಡಿದ್ದು ಕೇಸ್ ಡೈರಿ ಹಾಗೂ ಎಫ್‌ಐಆರ್ ಮೂಲಕ ತಿಳಿಯುವುದೇನೆಂದರೆ ಅವರು ಪೋಸ್ಟ್ ಮಾಡಿದ ಆ ಟ್ವೀಟ್‌ಗಳು ದೇಶದ ಪ್ರಧಾನಿ ವಿರುದ್ಧ ಇವೆ. ಪ್ರಧಾನಿಯವರ ಹೆಸರನ್ನು ಅಗೌರವಯುತವಾಗಿ ಬಳಸಲಾಗಿದೆ ಎಂದು ನ್ಯಾಯಾಲಯ ವಿವರಿಸಿದೆ.
ಪಹಲ್ಗಾಮ್ ದಾಳಿಯ ಬೆನ್ನಿಗೇ ಟ್ವೀಟ್ ಮಾಡಿರುವುದು, ಮತ್ತು ನೇರವಾಗಿ ಪ್ರಧಾನಮಂತ್ರಿಯನ್ನು ಉಲ್ಲೇಖಿಸಿರುವುದು ಸಾರ್ವಜನಿಕ ಶಾಂತಿಗೆ ಧಕ್ಕೆ ಉಂಟಾಗುವ ಸಾಧ್ಯತೆ ಸೃಷ್ಟಿಸಿವೆ ಎಂದು ನ್ಯಾಯಾಲಯ ಹೇಳಿದೆ.
ನೇಹಾ ಅವರ ಅರ್ಜಿಯನ್ನು ಹೈಕೋರ್ಟ್ ಈಗಾಗಲೇ ತಿರಸ್ಕರಿಸಿರುವುದನ್ನು ಅದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ಗೆ ತೆರಳಿದ್ದನ್ನು ಹಾಗೂ ಸರ್ವೋಚ್ಚ ನ್ಯಾಯಾಲಯ ತನಿಖೆಯಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದ್ದನ್ನು ಉಚ್ಚ ನ್ಯಾಯಾಲಯ ಪರಿಗಣಿಸಿತು. ಜೊತೆಗೆ ಅವರು ಸೂಕ್ತ ವೇಳೆ ತನಿಖೆಗೆ ಹಾಜರಾಗದೆ ವಾಸಸ್ಥಾನ ಬದಲಿಸುತ್ತಿದ್ದರು ಎಂಬ ತನಿಖಾಧಿಕಾರಿಗಳ ಮಾಹಿತಿಯನ್ನು ಗಣನೆಗೆ ತೆಗೆದುಕೊಂಡ ಅದು ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ಆದರೆ ವಿಚಾರಣಾ ನ್ಯಾಯಾಲಯ ಆರೋಪ ನಿಗದಿಪಡಿಸಲು ಮುಂದಾದರೆ ಆ ವೇಳೆ ಆಕೆ ತನ್ನ ವಾದ ಮಂಡಿಸುವ ಹಕ್ಕು ಹೊಂದಿದ್ದಾರೆ ಎಂದು ಅದು ಸ್ಪಷ್ಟಪಡಿಸಿತು.