ಫೋಕ್ಸ್ ವ್ಯಾಗನ್‌ ವಾಹನದಲ್ಲಿ ‘ಮೋಸದ ಸಾಧನ’ ಅಳವಡಿಕೆ: ಎಫ್‌ಐಆರ್ ವಜಾ ಮನವಿ ತಿರಸ್ಕರಿಸಿದ ಅಲಾಹಾಬಾದ್ ಹೈಕೋರ್ಟ್

ಪ್ರಯೋಗಾಲಯ ಪರೀಕ್ಷೆಯಲ್ಲಿ ಕಡಿಮೆ ಕಲುಷಿತ ಗಾಳಿ ಹೊರಸೂಸುವಿಕೆಗೆ ಸಂಬಂಧಿಸಿದಂತೆ ಫೋಕ್ಸ್ ವ್ಯಾಗನ್ ಮೋಸದ ಸಾಧನ ಅಳವಡಿಸಿತ್ತು ಎಂಬ 2019ರ ಎನ್‌ಜಿಟಿ ಆದೇಶ ಆಧರಿಸಿ ಆಡಿ ಮಾಲೀಕರು ಸಂಸ್ಥೆಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಫೋಕ್ಸ್ ವ್ಯಾಗನ್‌ ವಾಹನದಲ್ಲಿ ‘ಮೋಸದ ಸಾಧನ’ ಅಳವಡಿಕೆ: ಎಫ್‌ಐಆರ್ ವಜಾ ಮನವಿ ತಿರಸ್ಕರಿಸಿದ ಅಲಾಹಾಬಾದ್ ಹೈಕೋರ್ಟ್

ಸ್ಕೋಡಾ ಆಟೊ ಫೋಕ್ಸ್ ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ತಾನು ಮಾರಾಟ ಮಾಡಿದ್ದ ವಾಹನದಲ್ಲಿ ಕಡಿಮೆ ಕಲುಷಿತ ಗಾಳಿ ಹೊರಸೂಸುವಿಕೆ ತೋರಲು ಮೋಸದ ಸಾಧನ ಅಳವಡಿಸಿದ್ದು ಸಾಬೀತಾಗಿದೆ ಎಂದು 2019ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಆದೇಶಿಸಿದ್ದನ್ನು ಆಧರಿಸಿ ಆಡಿ ವಾಹನದ ಮಾಲೀಕರೊಬ್ಬರು ಸಂಸ್ಥೆಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಎಫ್‌ಐಆರ್ ವಜಾಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಈಚೆಗೆ ಅಲಾಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ.

ನ್ಯಾಯಮೂರ್ತಿಗಳಾದ ಬಿ ಅಮಿತ್ ಸ್ಥಾಲೇಕರ್ ಮತ್ತು ಶೇಖರ್ ಕುಮಾರ್ ಯಾದವ್ ಅವರಿದ್ದ ವಿಭಾಗೀಯ ಪೀಠವು ಮನವಿಯ ವಿಚಾರಣೆ ನಡೆಸಿತು.

“...ಮೂರನೇ ಪ್ರತಿವಾದಿಯು ಖರೀದಿಸಿದ್ದ ವಾಹನದಲ್ಲಿ ಮೋಸದ ಸಾಧನ ಅಳವಡಿಸಲಾಗಿತ್ತೇ ಮತ್ತು ಅವರು ಬಿಎಸ್‌-4 ಪ್ರಮಾಣಗಳನ್ನು ಪೂರೈಸಿದ್ದಾರೆಯೇ ಎಂಬುದು ತನಿಖೆಯಿಂದ ಸಾಬೀತಾಗಬೇಕಿದೆ ಎಂಬ ಅಭಿಪ್ರಾಯವನ್ನು ನಾವು ಹೊಂದಿದ್ದೇವೆ. ತನಿಖೆಯಲ್ಲಿ ಮಧ್ಯಪ್ರವೇಶಿಸುವ ಮೂಲಕ ಸುಪ್ರೀಂ ಕೋರ್ಟ್‌ನ ಮಧ್ಯಂತರ ಆದೇಶವನ್ನು ಈ ನ್ಯಾಯಾಲಯವು ತಪ್ಪಾಗಿ ವ್ಯಾಖ್ಯಾನಿಸಲಾಗದು. ಈ ಹಿನ್ನೆಲೆಯಲ್ಲಿ ಎಫ್‌ಐಆರ್ ವಜಾಗೊಳಿಸುವಂತೆ ಕೋರಿದ್ದ ಮನವಿಯನ್ನು ವಜಾಗೊಳಿಸಲಾಗಿದೆ.”
ಅಲಹಾಬಾದ್ ಹೈಕೋರ್ಟ್

ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 34, 471, 468, 467, 420, 419 ಮತ್ತು 406 ಅಡಿ ಫೋಕ್ಸ್ ವ್ಯಾಗನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಅಧಿಕೃತ ವಿತರಕರ ಮೂಲಕ ಅರ್ಜಿದಾರರಿಂದ ಏಳು ಆಡಿ ಕಾರುಗಳನ್ನು ದೂರುದಾರರು ಖರೀದಿಸಿದ್ದರು ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.

ಕಲುಷಿತ ಗಾಳಿ ಹೊರಸೂಸುವಿಕೆ ಪ್ರಮಾಣದ ನಿಯಮಗಳು ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಡಿಲವಿದ್ದು, ಭಾರತವು ಮುಂಚೂಣಿ ಮಾರುಕಟ್ಟೆಯಾಗಿ ಅಭಿವೃದ್ಧಿ ಹೊಂದುತ್ತಿರುವುದರಿಂದ ಇಲ್ಲಿ ಮಾರಾಟ ಮಾಡುವ ವಾಹನಗಳಲ್ಲಿ ಯಾವುದೇ ತೆರನಾದ ಮೋಸದ ಸಾಧನಗಳನ್ನು ಅಳವಡಿಸಿಲ್ಲ ಎಂದು ಕಂಪೆನಿಯು ಭರವಸೆ ನೀಡಿತ್ತು ಎಂದು ದೂರುದಾರರು ವಿವರಿಸಿದ್ದಾರೆ.

ಆದರೆ, ಪ್ರಯೋಗಾಲಯ ಪರೀಕ್ಷೆಯಲ್ಲಿ ಕಡಿಮೆ ಕಲುಷಿತ ಗಾಳಿ ಹೊರಸೂಸುವಿಕೆಗೆ ಸಂಬಂಧಿಸಿದಂತೆ ಫೋಕ್ಸ್ ವ್ಯಾಗನ್ ಮೋಸದ ಸಾಧನ ಅಳವಡಿಸಿದ್ದು ಸಾಬೀತಾಗಿದೆ ಎಂದು 2019ರ ಮಾರ್ಚ್‌ನಲ್ಲಿ ಎನ್‌ಜಿಟಿ ಆದೇಶ ಹೊರಡಿಸಿದ್ದರಿಂದ ವಿಚಾರ ತಿಳಿಯಿತು ಎಂದು ದೂರುದಾರರು ಹೇಳಿದ್ದಾರೆ.

ಎನ್‌ಜಿಟಿಯು 2019ರ ಮಾರ್ಚ್‌ನಲ್ಲಿ‌ ಹೊರಡಿಸಿದ ಆದೇಶದಲ್ಲಿ ಆಡಿಯ ವಿರುದ್ಧ ಹಾನಿ ವೆಚ್ಚ ಮತ್ತು ₹500 ಕೋಟಿಗೆ ಪರಿಹಾರ ಮೊತ್ತ ಸೇರಿಸಿದೆ ಎಂದು ಸ್ಕೋಡಾ ಆಟೊ ಫೋಕ್ಸ್ ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಪ್ರತಿನಿಧಿಸಿರುವ ಹಿರಿಯ ವಕೀಲ ನವೀನ್ ಸಿನ್ಹಾ ನ್ಯಾಯಾಲಯಕ್ಕೆ ವಿವರಿಸಿದರು.

ಎನ್‌ಜಿಟಿ ಆದೇಶವನ್ನು ಪ್ರಶ್ನಿಸಿ ಫೋಕ್ಸ್ ವ್ಯಾಗನ್ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು 2019ರ ಮೇ 6ರಂದು ಕಂಪೆನಿಯ ವಿರುದ್ಧ ಯಾವುದೇ ತೆರನಾದ ಒತ್ತಾಯದ ಕ್ರಮಕೈಗೊಳ್ಳಬಾರದು ಎಂದು ಆದೇಶಿಸಿತ್ತು.

ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ಆಧರಿಸಿ ಫೋಕ್ಸ್ ವ್ಯಾಗನ್ ಹೈಕೋರ್ಟ್‌ನಲ್ಲಿ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಪ್ರಶ್ನಿಸಿದ್ದು, ಇದೊಂದು ದುರುದ್ದೇಶಪೂರಿತ ಕಾನೂನು ಕ್ರಮವಾಗಿದೆ. ದೂರು ದಾಖಲಿಸುವ ಪ್ರಮೇಯವೇ ಉದ್ಭವಿಸಿರಲಿಲ್ಲ ಎಂದಿದ್ದು, ಅದನ್ನು ವಜಾಗೊಳಿಸುವಂತೆ ಮನವಿ ಮಾಡಿತ್ತು.

Also Read
ಟಾಟಾ V. ಮಿಸ್ತ್ರಿ: ಟಾಟಾ ಷೇರುಗಳನ್ನು ಅಡವಿಡುವ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡಲು ಎಸ್‌ಪಿ ಸಮೂಹಕ್ಕೆ ಸುಪ್ರೀಂ ಆದೇಶ

ರಿಟ್ ಅರ್ಜಿಗೆ ಯಾವುದೇ ಮಾನ್ಯತೆ ಇಲ್ಲ. ಪ್ರಕರಣದ ವಿಚಾರಣೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್ ಎಫ್‌ಐಆರ್ ವಜಾಗೊಳಿಸಲು ಕೋರಿದ್ದ ಮನವಿಯನ್ನು ತಿರಸ್ಕರಿಸಿದೆ. ಸಿಆರ್‌ಪಿಸಿಯ ಸೆಕ್ಷನ್ 173 (2)ರ ಅಡಿ ಅಂತಿಮ ವರದಿ ಸಲ್ಲಿಸುವವರೆಗೆ ಅರ್ಜಿದಾರರನ್ನು ಬಂಧಿಸಬಾರದು ಎಂದಿರುವ ನ್ಯಾಯಾಲಯವು ತನಿಖೆಗೆ ಸಹಕರಿಸುವಂತೆ ಮನವಿದಾರರಿಗೆ ಸೂಚಿಸಿದೆ.

Related Stories

No stories found.
Kannada Bar & Bench
kannada.barandbench.com