ಹಣ ಸಂಗ್ರಹಿಸುವ ಉದ್ದೇಶದಿಂದ ಟಾಟಾ ಸನ್ಸ್ ಸಮೂಹದಲ್ಲಿನ ಷೇರುಗಳನ್ನು ವಿಕ್ರಯಕ್ಕೆ ಇಡದಂತೆ ಸೈರಸ್ ಮಿಸ್ತ್ರಿ ಅವರ ಶಾಪೂರ್ಜಿ ಪಲ್ಲೊಂಜಿ ಸಮೂಹಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ. ಈಗಾಗಲೇ ಅಡವಿಟ್ಟಿರುವ ಷೇರುಗಳಿಗೆ ಸಂಬಂಧಿಸಿದಂತೆ ಯಾವುದೇ ಕ್ರಮಕೈಗೊಳ್ಳದೆ ಯಥಾಸ್ಥಿತಿ ಕಾಪಾಡುವಂತೆಯೂ ಕಂಪೆನಿಗೆ ನ್ಯಾಯಾಲಯ ಸೂಚಿಸಿದೆ.
ಹಣ ಸಂಗ್ರಹಿಸುವ ಉದ್ದೇಶದಿಂದ ಟಾಟಾ ಸನ್ಸ್‌ನಲ್ಲಿರುವ ಷೇರುಗಳನ್ನು ಅಡವಿಡುವ ಎಸ್‌ಪಿ ಸಮೂಹದ ನಿರ್ಧಾರ ಪ್ರಶ್ನಿಸಿ ಟಾಟಾ ಸನ್ಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಹಾಗೂ ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಮೇಲಿನ ಆದೇಶ ಹೊರಡಿಸಿದೆ.
ಟಾಟಾ ಸನ್ಸ್‌ನಲ್ಲಿರುವ ತನ್ನ ಷೇರುಗಳನ್ನು ಕೆನಡಾ ಮೂಲದ ಕಂಪೆನಿಗೆ ಅಡವಿಟ್ಟು ₹3,750 ಕೋಟಿ ಹಣ ಸಂಗ್ರಹಿಸುವ ಒಪ್ಪಂದಕ್ಕೆ ಎಸ್‌ಪಿ ಸಮೂಹ ಮುಂದಾಗುತ್ತಿದ್ದ ಹಿನ್ನೆಲೆಯಲ್ಲಿ ಟಾಟಾ ಸಮೂಹ ಮನವಿ ಸಲ್ಲಿಸಿತ್ತು. ಸಂಘದ ನಿಯಮಾವಳಿಯಗಳ ಅನ್ವಯ ಟಾಟಾ ಸಮೂಹಕ್ಕೆ ಮೊದಲು ತಿರಸ್ಕರಿಸುವ ಹಕ್ಕು (ಆರ್‌ಒಎಫ್‌ಆರ್) ಕಲ್ಪಿಸದೇ ಷೇರುಗಳನ್ನು ವರ್ಗಾಯಿಸುವ ಎಸ್‌ಪಿ ಸಮೂಹದ ನಿರ್ಧಾರವನ್ನು ಟಾಟಾ ಸಮೂಹ ವಿರೋಧಿಸಿತ್ತು.
ಟಾಟಾ ಸಮೂಹ ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ಎಸ್‌ಪಿ ಸಮೂಹ ಷೇರುಗಳನ್ನು ಮಾರಾಟ ಮಾಡುವ ಇಚ್ಛೆ ಹೊಂದಿದ್ದರೆ ಅವುಗಳನ್ನು ಖರೀದಿಸಲು ಟಾಟಾ ಸಮೂಹ ಸಿದ್ಧವಿದೆ. ಷೇರುಗಳನ್ನು ಇಟ್ಟುಕೊಂಡು ಅವುಗಳನ್ನು ಅಡವಿಟ್ಟು ಹಣ ಸಂಗ್ರಹಿಸಲು ಎಸ್‌ಪಿ ಸಮೂಹ ಮುಂದಾಗಿದೆ ಎಂದು ಹೇಳಿದರು.
ಅಡವಿಟ್ಟ ಷೇರುಗಳಿಗೆ ಮರು ಪಾವತಿ ಮಾಡದ ಪಕ್ಷದಲ್ಲಿ ಅವುಗಳು ಮಾರಾಟಕ್ಕಾಗಿ ಬ್ಲಾಕ್‌ಗೆ ವರ್ಗಾವಣೆಯಾಗುತ್ತವೆ. ಮೂರನೇ ವ್ಯಕ್ತಿ ಪ್ರೀಮಿಯಂ ಪಾವತಿಸಲು ಮುಂದಾದರೆ ಹೆಚ್ಚಿನ ಬೆಲೆಗೆ ಕೊಳ್ಳುವ ಅನಿವಾರ್ಯತೆ ಟಾಟಾ ಸನ್ಸ್ ಗೆ ಎದುರಾಗಲಿದೆ. “ಈ ಕಿಡಿಗೇಡಿ ಕೆಲಸವನ್ನು ಅವರು ಮಾಡುತ್ತಿದ್ದಾರೆ” ಎಂದ ಸಾಳ್ವೆ ಹೇಳಿದರು. ಮುಂದುವರೆದು ಷೇರುಗಳನ್ನು ಅಡವಿಡುವ ಅವಶ್ಯಕತೆ ಇಲ್ಲ ಎಂದು ಸಾಳ್ವೆ ಹಾಗೂ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದಿಸಿದರು.
ಸೈರಸ್ ಮಿಸ್ತ್ರಿ ಮತ್ತು ಎಸ್‌ಪಿ ಸಮೂಹವನ್ನು ಆರ್ಯಂ ಸುಂದರಂ ಹಾಗೂ ಜನಕ್ ದ್ವಾರಕಾದಾಸ್ ಪ್ರತಿನಿಧಿಸಿದ್ದರು. ನಾಲ್ಕು ವಾರ ಯಥಾಸ್ಥಿತಿ ಕಾಯ್ದುಕೊಳ್ಳಲು ಉಭಯ ಕಡೆಯವರು ಒಪ್ಪಿಕೊಂಡಿದ್ದು, ಪ್ರಕರಣವನ್ನು ಅಕ್ಟೋಬರ್ 28ಕ್ಕೆ ಮುಂದೂಡಲಾಗಿದೆ.