ಭಾರಿ ಮಳೆ ಮತ್ತು ಸ್ಕೂಟರ್ ಪಂಕ್ಚರ್ ಆದ ಕಾರಣ ಪರೀಕ್ಷೆಗೆ ಎರಡು ನಿಮಿಷ ತಡವಾಗಿ ಹಾಜರಾದ ಮಹಿಳಾ ಅಭ್ಯರ್ಥಿ ಪರವಾಗಿ ಅಲಾಹಾಬಾದ್ ಹೈಕೋರ್ಟ್ ಈಚೆಗೆ ತೀರ್ಪು ನೀಡಿದೆ.
ಅಭ್ಯರ್ಥಿ ತನ್ನ ಕೈ ಮೀರಿದ ಕಾರಣಗಳಿಗಾಗಿ ನಿಗದಿತ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ತಲುಪಲು ಸಾಧ್ಯವಾಗಲಿಲ್ಲ ಎಂಬುದನ್ನು ಗಮನಿಸಿದ ನ್ಯಾ. ರಾಜೇಶ್ ಸಿಂಗ್ ಚೌಹಾಣ್ ಭಾರಿ ಮಳೆಗೆ ದೇವರು ಕಾರಣ. ಸೂಕ್ತ ಸಮಯಕ್ಕೆ ಪರೀಕ್ಷಾ ಕೇಂದ್ರ ತಲುಪಲು ಆಕೆ ಯತ್ನಿಸಿದರೂ ಸ್ಕೂಟರ್ ಪಂಕ್ಷರ್ ಆದ ಪರಿಣಾಮ ವಿಳಂಬ ಉಂಟಾಗಿತ್ತು ಎಂದರು.
ಹೀಗಾಗಿ ಇದನ್ನೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡುವಂತೆ ನ್ಯಾಯಾಲಯ ನಿರ್ದೇಶಿಸಿದೆ.
2023ನೇ ಸಾಲಿನ ಹೆಚ್ಚುವರಿ ಖಾಸಗಿ ಕಾರ್ಯದರ್ಶಿ ಹುದ್ದೆಗೆ ಸಂಬಂಧಿಸಿದಂತೆ ಹಿಂದಿ ಶೀಘ್ರ ಲಿಪಿ ಮತ್ತು ಕಂಪ್ಯೂಟರ್ ಟೈಪಿಂಗ್ ಪರೀಕ್ಷೆಯನ್ನು, ಆಕೆ ಪರೀಕ್ಷೆಗಳು ಮುಕ್ತಾಯಗೊಳ್ಳುವ ದಿನದಂದು ಬರೆಯಲು ಅವಕಾಶ ನೀಡಬಹುದು ಎಂದು ಅದು ತಿಳಿಸಿದೆ.
ಪರೀಕ್ಷೆಗೆ ಎರಡು ನಿಮಿಷ ತಡವಾಗಿ ಬಂದ ಮಹಿಳಾ ಅಭ್ಯರ್ಥಿಯ ಮನವಿಯ ಮೇರೆಗೆ ನ್ಯಾಯಾಲಯ ಈ ಆದೇಶ ನೀಡಿದೆ.
ಪ್ರಕರಣವನ್ನು ಸಹಾನುಭೂತಿಯಿಂದ ಪರಿಗಣಿಸಿ ಉತ್ತರ ಪ್ರದೇಶ ಲೋಕಸೇವಾ ಆಯೋಗ (UPPSC) ಆಕೆಗೆ ಮತ್ತೊಮ್ಮೆ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡುವಂತೆ ಆಕೆಯ ಪರ ವಕೀಲರು ಕೋರಿದ್ದರು. ಆದರೆ ಹಾಗೆ ಅನುಮತಿಸಿದರೆ ಪರೀಕ್ಷೆಗೆ ತಡವಾಗಿ ಹಾಜರಾಗಲು ಇದು ಮೇಲ್ಪಂಕ್ತಿ ಹಾಕಿಕೊಡಲಿದೆ ಎಂಬುದು ಆಯೋಗದ ಪರ ವಕೀಲರ ವಾದವಾಗಿತ್ತು.
ಈ ಕಳವಳವನ್ನು ಒಪ್ಪಿದ ನ್ಯಾಯಾಲಯ ಅಭ್ಯರ್ಥಿಗಳು ಪರೀಕ್ಷೆಗಳಿಗೆ ನಿಗದಿತ ಸಮಯದಲ್ಲಿ ಹಾಜರಿರಬೇಕು ಎಂದು ಸೂಚಿಸಿತು. ಆದರೆ ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾನುಭೂತಿಯ ನಿಲುವು ತಳೆದ ನ್ಯಾಯಾಲಯ ಪರೀಕ್ಷೆ ಬರೆಯಲು ಆಕೆಗೆ ಅವಕಾಶ ನೀಡುವಂತೆ ಯುಪಿಎಸ್‌ಸಿಗೆ ಸೂಚಿಸಿತು.