ರಹಸ್ಯವಾಗಿ ನ್ಯಾ. ವರ್ಮಾ ಪ್ರಮಾಣ ವಚನ ಸ್ವೀಕಾರ: ಅಲಾಹಾಬಾದ್ ಹೈಕೋರ್ಟ್ ವಕೀಲರ ಸಂಘ ಖಂಡನೆ

ಪ್ರಮಾಣವಚನ ಸ್ವೀಕಾರ ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ವಕೀಲರ ಸಂಸ್ಥೆ ಶನಿವಾರ ನಿರ್ಣಯ ಅಂಗೀಕರಿಸಿದೆ.
Justice Yashwant Varma with Allahabad High Court
Justice Yashwant Varma with Allahabad High Court
Published on

ತಮ್ಮ ಮನೆಯಲ್ಲಿ ಅಪಾರ ಪ್ರಮಾಣದ ನಗದು ದೊರೆತ ವಿವಾದದಲ್ಲಿ ಸಿಲುಕಿರುವ ಯಶವಂತ್ ವರ್ಮಾ ಅವರು ಶನಿವಾರ ಅಲಾಹಾಬಾದ್‌ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ರೀತಿಗೆ ಉಚ್ಚ ನ್ಯಾಯಾಲಯದ ವಕೀಲರ ಸಂಘ ​​(ಎಚ್‌ಸಿಬಿಎ) ಆಕ್ಷೇಪ ವ್ಯಕ್ತಪಡಿಸಿದೆ.

ಔಪಚಾರಿಕ ಸಾರ್ವಜನಿಕ ಸಮಾರಂಭದ ಬದಲು ಅವರ ಕಚೇರಿಯಲ್ಲಿ ಪ್ರಮಾಣ ವಚನ ಬೋಧಿಸುವ ಮೂಲಕ ರಹಸ್ಯವಾಗಿ ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆ ನಡೆದಿದೆ ಎಂದು ಸಂಘ ಆರೋಪಿಸಿದೆ.

Also Read
ನ್ಯಾ. ವರ್ಮಾ ಪ್ರಮಾಣ ವಚನ ಸ್ವೀಕಾರಕ್ಕೆ ತಡೆ ಕೋರಿ ಅಲಾಹಾಬಾದ್ ಹೈಕೋರ್ಟ್‌ನಲ್ಲಿ ಪಿಐಎಲ್

ಕಾರ್ಯಕ್ರಮವನ್ನು ಖಂಡಿಸಿ ಸಂಘದ ಕಾರ್ಯದರ್ಶಿ ವಿಕ್ರಾಂತ್ ಪಾಂಡೆ ಶನಿವಾರ ನಿರ್ಣಯವನ್ನು ಅಂಗೀಕರಿಸಿದ್ದಾರೆ. ಪ್ರಮಾಣವಚನ ಸ್ವೀಕಾರ ಸಂವಿಧಾನದ ಉಲ್ಲಂಘನೆಯಾಗಿದ್ದು ಇಂತಹ ಸಂವಿಧಾನಬಾಹಿರ ಪ್ರಮಾಣವಚನದೊಂದಿಗೆ ನಂಟು ಹೊಂದಲು ಸಂಘದ ಸದಸ್ಯರು ಬಯಸುವುದಿಲ್ಲ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

ರಹಸ್ಯವಾಗಿ ಏಕೆ ಪ್ರಮಾಣವಚನ ಬೋಧಿಸಲಾಗಿದೆ ಎಂಬುದು ಅರ್ಥವಾಗುತ್ತಿಲ್ಲ. ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಏಕೆ ವಕೀಲರಿಗೆ ತಿಳಿಸಿಲ್ಲ ಎಂಬುದು ನ್ಯಾಯಾಂಗ ವ್ಯವಸ್ಥೆಯಲ್ಲಿ ಜನರ ನಂಬಿಕೆಯನ್ನು ಮತ್ತೆ ಕುಗ್ಗಿಸುವ ಪ್ರಶ್ನೆಯಾಗಿದೆ. ವಕೀಲರಿಗೆ ತಿಳಿಯದಂತೆ ನ್ಯಾ. ವರ್ಮಾ ಪ್ರಮಾಣ ವಚನ ಸ್ವೀಕರಿಸಿದ ರೀತಿಯನ್ನು ಸಂಘ ನಿಸ್ಸಂದಿಗ್ಧವಾಗಿ ಖಂಡಿಸುತ್ತದೆ ಎಂದು ನಿರ್ಣಯ ತಿಳಿಸಿದೆ.

ಮಾರ್ಚ್ 14ರ ಸಂಜೆ ನ್ಯಾ. ವರ್ಮಾ ಅವರ ಮನೆಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿತ್ತು. ಬೆಂಕಿ ನಂದಿಸಲು ಹೋದ ಅಗ್ನಿಶಾಮಕ ಸಿಬ್ಬಂದಿಗೆ ಅವರ ಮನೆಯಲ್ಲಿ ಸುಟ್ಟು ಕರಕಲಾದ ಅಪಾರ ಪ್ರಮಾಣದ ನಗದು ದೊರೆತಿತ್ತು ಎಂಬ ಆರೋಪ ಕೇಳಿ ಬಂದಿತ್ತು.

Also Read
ನ್ಯಾ. ವರ್ಮಾ ವರ್ಗಾವಣೆಗೆ ಕೇಂದ್ರ ಅಧಿಸೂಚನೆ: ಕೆಲಸ ವಹಿಸದಂತೆ ಅಲಾಹಾಬಾದ್ ಹೈಕೋರ್ಟ್‌ಗೆ ಸುಪ್ರೀಂ ನಿರ್ದೇಶನ

ಇದರ ಬೆನ್ನಿಗೇ ಸುಪ್ರೀಂ ಕೋರ್ಟ್ ಕೊಲಿಜಿಯಂ ನ್ಯಾಯಮೂರ್ತಿ ವರ್ಮಾ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಅಲಾಹಾಬಾದ್‌ ಹೈಕೋರ್ಟ್‌ಗೆ ವರ್ಗಾವಣೆ ಮಾಡಲು ನಿರ್ಧರಿಸಿತ್ತು. ಕೇಂದ್ರ ಸರ್ಕಾರ ಮಾರ್ಚ್ 28ರಂದು ವರ್ಗಾವಣೆಗೆ ಸಮ್ಮತಿ ಸೂಚಿಸಿತ್ತು.

ಅಲಾಹಾಬಾದ್ ಮತ್ತು ಲಖನೌ ವಕೀಲರ ಸಂಘಗಗಳ ಪ್ರತಿಭಟನೆಯ ನಡುವೆಯೇ, ನ್ಯಾಯಮೂರ್ತಿ ವರ್ಮಾ ಶನಿವಾರ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅದಾದ ಕೆಲ ಗಂಟೆಗಳಲ್ಲಿ ನಿರ್ಣಯ ಅಂಗೀಕರಿಸಿರುವ ಅಲಾಹಾಬಾದ್‌ ಹೈಕೋರ್ಟ್‌ ವಕೀಲರ ಸಂಘ ಪ್ರಮಾಣ ವಚನ ಕಾರ್ಯಕ್ರಮದಿಂದ ವಕೀಲರು ಮತ್ತು ಉಳಿದ ನ್ಯಾಯಮೂರ್ತಿಗಳನ್ನು ಹೊರಗಿಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.

[ನಿರ್ಣಯದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Resolution
Preview
Kannada Bar & Bench
kannada.barandbench.com