ಭಿನ್ನ ಲೈಂಗಿಕ ಮನೋಧರ್ಮ ಹೊಂದಿದ್ದಕ್ಕೆ ಬೆದರಿಕೆಗೆ ಒಳಗಾದ ಪ್ರಜೆಗಳ ಹಕ್ಕುಗಳ ನಿಗಾಕ್ಕೆ ಬದ್ಧ: ಅಲಾಹಾಬಾದ್ ಹೈಕೋರ್ಟ್

ಭಿನ್ನ ಲೈಂಗಿಕ ಮನೋಧರ್ಮ ಹೊಂದಿರುವ ಕಾರಣಕ್ಕೆ ಸಮಾಜದಲ್ಲಿ ತಾರತಮ್ಯ ಎದುರಿಸುತ್ತಿರುವ ವಾಸ್ತವ ಪರಿಸ್ಥಿತಿಯ ಬಗ್ಗೆ ಅರ್ಜಿಯು ಬೆಳಕುಚೆಲ್ಲುತ್ತದೆ ಎಂದು ನ್ಯಾಯಾಲಯ ಹೇಳಿದೆ.
Same-Sex Couple
Same-Sex Couple

ಭಿನ್ನ ಲೈಂಗಿಕ ಮನೋಧರ್ಮ ಹೊಂದಿರುವುದಕ್ಕೆ ಬೆದರಿಕೆ ಎದುರಿಸುತ್ತಿರುವ ಪ್ರಜೆಗಳ ಹಕ್ಕುಗಳ ಮೇಲೆ ನಿಗಾ ಇಡುವುದು ತನ್ನ ಕರ್ತವ್ಯ ಎಂದಿರುವ ಅಲಾಹಾಬಾದ್‌ ಹೈಕೋರ್ಟ್‌, ಸಲಿಂಗ ದಂಪತಿಗೆ ಭದ್ರತೆ ಒದಗಿಸುವಂತೆ ಪೊಲೀಸರಿಗೆ ಸೂಚಿಸಿದೆ.

ತಮ್ಮ ವಿರುದ್ಧ ಯಾವುದೇ ತೆರನಾದ ದುರುದ್ದೇಶಪೂರಿತವಾದ ಕ್ರಮಕೈಗೊಳ್ಳದಂತೆ ಹಾಗೂ ಶಾಂತಿಯುತವಾಗಿ ಬದುಕುತ್ತಿರುವ ತಮ್ಮ ಬದುಕಿನಲ್ಲಿ ಮಧ್ಯಪ್ರವೇಶಿಸದಂತೆ ತಮ್ಮ ಕುಟುಂಬ ಸದಸ್ಯರಿಗೆ ಸೂಚಿಸುವಂತೆ ಕೋರಿ ಇಬ್ಬರು ಮಹಿಳೆಯರು ಅಲಾಹಾಬಾದ್‌ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು.

ಅರ್ಜಿಯಲ್ಲಿ ಉಲ್ಲೇಖಿಸಿರುವ ಪರಿಸ್ಥಿತಿಯನ್ನು ಆಧರಿಸಿ ನ್ಯಾಯಮೂರ್ತಿಗಳಾದ ಮಹೇಶ್‌ ಚಂದ್ರ ತ್ರಿಪಾಠಿ ಮತ್ತು ಸಂಜಯ್‌ ಕುಮಾರ್‌ ಪಚೋರಿ ಅವರು “ಲೈಂಗಿಕ ಮನೋಧರ್ಮವು ವ್ಯಕ್ತಿಯ ಅಂತರ್ಗತ ವಿಚಾರ ಎಂಬ ವಿಚಾರ ಗೊತ್ತಿದ್ದರೂ ಭಿನ್ನ ಲೈಂಗಿಕ ಮನೋಧರ್ಮ ಹೊಂದಿರುವ ಕಾರಣಕ್ಕೆ ನಾಗರಿಕರು ಸಮಾಜದಿಂದ ತಾರತಮ್ಯ ಎದುರಿಸುತ್ತಿರುವ ವಾಸ್ತವ ಪರಿಸ್ಥಿತಿಯನ್ನು ಅರ್ಜಿಯಲ್ಲಿ ವಿವರಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಇಬ್ಬರೂ ಅರ್ಜಿದಾರರು ಪ್ರೌಢರಾಗಿದ್ದು, ಸ್ವತಃ ಸಾಕಷ್ಟು ಸಂಪಾದನೆ ಮಾಡುತ್ತಿದ್ದಾರೆ ಎಂಬ ಅಂಶವನ್ನು ನ್ಯಾಯಾಲಯ ಪರಿಗಣಿಸಿದೆ. “ಇಬ್ಬರೂ ಅರ್ಜಿದಾರರು ಹಲವು ವರ್ಷಗಳಿಂದ ಸಹ ಜೀವನ (ಲಿವ್‌ ಇನ್‌ ರಿಲೇಷನ್‌ಶಿಪ್‌) ನಡೆಸುತ್ತಿದ್ದಾರೆ. ತಮ್ಮ ಲೈಂಗಿಕ ಮನೋಧರ್ಮಕ್ಕೆ ಅನುಗುಣವಾಗಿ ಸ್ವಯಂಪ್ರೇರಣೆಯಿಂದ ಜೊತೆಯಾಗಿ ಬದುಕುತಿದ್ದಾರೆ. ಕುಟುಂಬ ಸದಸ್ಯರಿಂದ ತೀವ್ರ ವಿರೋಧವನ್ನು ಇಬ್ಬರೂ ಎದುರಿಸುತ್ತಿದ್ದಾರೆ” ಎಂದು ಪೀಠ ಹೇಳಿದೆ.

Also Read
ಸಲಿಂಗ ವಿವಾಹ ಪ್ರಕರಣ: ಕಾನೂನಿಗೆ ಲಿಂಗಭೇದ ಇಲ್ಲ ಎಂದ ದೆಹಲಿ ಹೈಕೋರ್ಟ್; ಕೇಂದ್ರ ಹಾಗೂ ದೆಹಲಿ ಸರ್ಕಾರಕ್ಕೆ ನೋಟಿಸ್

“…ಸಾಂವಿಧಾನಿಕ ನೈತಿಕತೆಯ ಜೊತೆಗೆ ಲೈಂಗಿಕ ಮನೋಧರ್ಮದ ಕಾರಣಕ್ಕಾಗಿ ಪ್ರಜೆಗಳ ಹಕ್ಕುಗಳಿಗೆ ಬೆದರಿಕೆ ಎದುರಾದಾಗ ಅದರ ಮೇಲೆ ನಿಗಾ ಇಡುವುದು ಸಾಂವಿಧಾನಿಕ ನ್ಯಾಯಾಲಯದ ಕರ್ತವ್ಯವಾಗಿದೆ” ಎಂದು ಸುಪ್ರೀಂ ಕೋರ್ಟ್‌ನ ನವತೇಜ್‌ ಸಿಂಗ್‌ ಜೋಹರ್‌ ಪ್ರಕರಣವನ್ನು ಆಧರಿಸಿ ಹೈಕೋರ್ಟ್‌ ಮೇಲಿನಂತೆ ಹೇಳಿದೆ.

ಅರ್ಜಿದಾರರು ಭದ್ರತೆ ಕೋರಿ ತಮ್ಮ ಬಳಿ ಬಂದರೆ ಅವರಿಗೆ ಕಿರುಕುಳವಾಗದಂತೆ ನೋಡಿಕೊಳ್ಳುವಂತೆ ಸಹರಾನ್‌ಪುರದ ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿಗೆ ಪೀಠ ನಿರ್ದೇಶಿಸಿದ್ದು, ಅರ್ಜಿಯನ್ನು ವಿಲೇವಾರಿ ಮಾಡಿತು.

Related Stories

No stories found.
Kannada Bar & Bench
kannada.barandbench.com