ನ್ಯಾಯಾಲಯಗಳಿರುವುದು ವಕೀಲರು, ನ್ಯಾಯಾಧೀಶರ ಜೀವನೋಪಾಯಕ್ಕಲ್ಲ: ನ್ಯಾಯವಾದಿಗಳ ಮುಷ್ಕರಕ್ಕೆ ಅಲಾಹಾಬಾದ್ ಹೈಕೋರ್ಟ್ ಬೇಸರ

ಹಾಪುರ್ ಜಿಲ್ಲೆಯಲ್ಲಿ ಇತ್ತೀಚೆಗೆ ವಕೀಲರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ ಘಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಆಗಸ್ಟ್ 30ರಿಂದ ರಾಜ್ಯದ ವಕೀಲರು ಮುಷ್ಕರ ನಡೆಸುತ್ತಿದ್ದಾರೆ.
Allahabad High Court, Lawyers
Allahabad High Court, Lawyers

ಉತ್ತರ ಪ್ರದೇಶದಲ್ಲಿ ವಕೀಲರು ಸತತವಾಗಿ ನಡೆಸುತ್ತಿರುವ ಮುಷ್ಕರಕ್ಕೆ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿರುವ ಅಲಾಹಾಬಾದ್‌ ಹೈಕೋರ್ಟ್‌ ನ್ಯಾಯಾಲಯದ ಮುಂದಿರುವ ಪ್ರಕರಣಗಳನ್ನು ಕೇವಲ ಅಂಕಿ ಅಂಶಗಳಂತೆ ನೋಡಬಾರದು, ಪ್ರತಿಯೊಂದು ಪ್ರಕರಣದ ಹಿಂದೆಯೂ ಜೀವನ, ಸ್ವಾತಂತ್ರ್ಯ ಅಥವಾ ಜೀವನೋಪಾಯಕ್ಕೆ ಸಂಬಂಧಿಸಿದ ಮಾನವೀಯ ವಿಚಾರಗಳಿರುತ್ತವೆ ಎಂದು ಬುದ್ಧಿಮಾತು ಹೇಳಿದೆ [ರಾಕೇಶ್ ಕುಮಾರ್ ಕೇಶರಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಹಾಪುರ್ ಜಿಲ್ಲೆಯಲ್ಲಿ ಇತ್ತೀಚೆಗೆ ವಕೀಲರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ ಘಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ  ಆಗಸ್ಟ್ 30ರಿಂದ ರಾಜ್ಯದ ವಕೀಲರು ಮುಷ್ಕರ ನಡೆಸುತ್ತಿದ್ದಾರೆ.

ನ್ಯಾಯಾಲಯದ ಪ್ರಕರಣಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಉದ್ದೇಶ ಎಂದರೆ ಅದು ವಕೀಲರಿಗೆ ಜೀವನೋಪಾಯವೆಂದಾಗಲಿ ಇಲ್ಲವೇ ನ್ಯಾಯಾಧೀಶರು ಇಂತಿಷ್ಟು ಪ್ರಕರಣಗಳನ್ನು ವಿಲೇವಾರಿ ಮಾಡುವ ಗುರಿ ಮುಟ್ಟುವಿಕೆಯೆಂದಾಗಲಿ ಅಲ್ಲ. ಬದಲಿಗೆ, ಇದು ದಾವೆದಾರರ ಕುಂದುಕೊರತೆಗಳು ಮತ್ತು ಸಮಸ್ಯೆಗಳನ್ನು ನಿವಾರಿಸುವುದಾಗಿದೆ ಎಂದು ನ್ಯಾ. ಕ್ಷಿತಿಜ್ ಶೈಲೇಂದ್ರ ಹೇಳಿದರು.

ಪ್ರಕರಣಗಳನ್ನು ವಿಲೇವಾರಿ ಮಾಡಬಹುದಾದ ಸರಕುಗಳ ಅಂಕಿಅಂಶಗಳಂತೆ ಭಾವಿಸದಿರಲು ನ್ಯಾಯಮೂರ್ತಿಗಳು ವಕೀಲ ಸಮುದಾಯಕ್ಕೆ ಕಿವಿಮಾತು ಹೇಳಿದರು. ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟಿರುವ ದಾವೆದಾರರ ನೋವಿಗಿಂತಲೂ ವಕೀಲರ ಅಹವಾಲುಗಳಿಗೆ ಹೆಚ್ಚಿನ ತೂಕ ಇಲ್ಲ ಎಂದು ತಿಳಿಹೇಳಿದರು.

ವೀಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಲು ಮತ್ತು ವಾದಿಸಲು ವಕೀಲರಿಗೆ ಅವಕಾಶ ನೀಡಿದ್ದರೂ,  ವಿಚಾರಣೆ ನಡೆಸುತ್ತಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದ ವಕೀಲರು ನ್ಯಾಯಾಲಯಕ್ಕೆ ಹಾಜರಾಗಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

Related Stories

No stories found.
Kannada Bar & Bench
kannada.barandbench.com