
ಉತ್ತರ ಪ್ರದೇಶದ ಸಂಭಲ್‌ನಲ್ಲಿರುವ ಶರೀಫ್ ಗೋಸುಲ್ಬರಾ ರಾವಣ್ ಬುಜುರ್ಗ್ ಮಸೀದಿಯನ್ನು ಅಧಿಕಾರಿಗಳು ತೆರವುಗೊಳಿಸದಂತೆ ಆದೇಶಿಸಲು ಅಲಾಹಾಬಾದ್ ಹೈಕೋರ್ಟ್ ಶನಿವಾರ ನಿರಾಕರಿಸಿದೆ.
ತಹಶೀಲ್ದಾರ್ ಮಸೀದಿಯನ್ನು ಕೆಡವಲು ಆದೇಶಿಸಿದ್ದನ್ನು ಪ್ರಶ್ನಿಸಿ ಮಸೀದಿ ಆಡಳಿತ ಮಂಡಳಿ ನ್ಯಾಯಮೂರ್ತಿ ದಿನೇಶ್ ಪಾಠಕ್ ಅವರೆದುರು ಮನವಿ ಸಲ್ಲಿಸಿತು. ಆದರೆ ನ್ಯಾಯಮೂರ್ತಿಗಳು ಮನವಿ ತಿರಸ್ಕರಿಸಿದರು.
ನಂತರ ಆಡಳಿತ ಮಂಡಳಿ, ಉತ್ತರ ಪ್ರದೇಶ ಕಂದಾಯ ಸಂಹಿತೆ, 2006 ರ ಸೆಕ್ಷನ್ 67(5)ರ ಅಡಿಯಲ್ಲಿ ಜಿಲ್ಲಾ ದಂಡಾಧಿಕಾರಿ ನ್ಯಾಯಾಲಯದ ಮುಂದೆ ಪರ್ಯಾಯ ಪರಿಹಾರಕ್ಕಾಗಿ ಮೇಲ್ಮನವಿ ಸಲ್ಲಿಸುವ ಸ್ವಾತಂತ್ರ್ಯದೊಂದಿಗೆ ಅರ್ಜಿಯನ್ನು ಹಿಂಪಡೆಯಲು ಅನುಮತಿ ಕೋರಿತು. ಇದಲ್ಲದೆ, ಮಸೀದಿಗೆ ಮಧ್ಯಂತರ ರಕ್ಷಣೆ ನೀಡುವಂತೆಯೂ ಅದು ಇದೇ ವೇಳೆ ಮನವಿ ಮಾಡಿತು.
ಆದರೆ ನ್ಯಾಯಾಲಯ ಮಧ್ಯಂತರ ರಕ್ಷಣೆ ಅಗತ್ಯವಿದ್ದರೆ ಮೇಲ್ಮನವಿ ನ್ಯಾಯಾಲಯಕ್ಕೆ ಸೂಕ್ತ ಅರ್ಜಿ ಸಲ್ಲಿಸುವಂತೆ ಮಸೀದಿ ಆಡಳಿತ ಮಂಡಳಿಗೆ ಸಲಹೆ ನೀಡಿತು.
“ಅರ್ಜಿದಾರರು ತಾತ್ಕಾಲಿಕ ರಕ್ಷಣೆಗೆ ಸಂಬಂಧಿಸಿದಂತೆ ಸೂಕ್ತ ಅರ್ಜಿಯನ್ನು ಮೇಲ್ಮನವಿ ನ್ಯಾಯಾಲಯಕ್ಕೆ ಸಲ್ಲಿಸಲು ಸ್ವತಂತ್ರರು. ಅಂತಹ ಅರ್ಜಿ ಸಲ್ಲಿಕೆಯಾದರೆ ಮೇಲ್ಮನವಿ ನ್ಯಾಯಾಲಯ ತಾನು ನೀಡಿರುವ ಈ ಆದೇಶದಿಂದ ಪ್ರಭಾವಿತವಾಗದೆ ಅರ್ಜಿಯ ಅರ್ಹತೆ ಮೇಲೆ ನಿರ್ಣಯ ಕೈಗೊಳ್ಳಬೇಕು” ಎಂದು ಅದು ವಿವರಿಸಿತು.
ಮಸೀದಿಯನ್ನು ಕಾಂಪೋಸ್ಟ್ ಪಿಟ್ ಜಾಗ/ಕೊಳದಲ್ಲಿ ನಿರ್ಮಿಸಲಾಗಿದೆ ಎಂದು ಆರೋಪಿಸಲಾಗಿದೆ. ಮಸೀದಿ ಆಡಳಿತ ಮಂಡಳಿ ಕಾನೂನು ಪರಿಹಾರ ಪಡೆಯಲು ನಾಲ್ಕು ದಿನಗಳ ಕಾಲಾವಕಾಶ ಕೋರಿದ್ದ ಹಿನ್ನೆಲೆಯಲ್ಲಿ ಈ ಹಿಂದೆ ಅಧಿಕಾರಿಗಳು ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಮುಂದೂಡಲು ಒಪ್ಪಿದ್ದರು.
[ಆದೇಶದ ಪ್ರತಿ]