ಸಂಭಲ್ ಮಸೀದಿ ಸಮೀಕ್ಷೆ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಅಲಾಹಾಬಾದ್ ಹೈಕೋರ್ಟ್

ಮೊಘಲರ ಕಾಲದಲ್ಲಿ ಕೆಡವಲಾದ ಹಿಂದೂ ದೇವಾಲಯದ ಮೇಲೆ ಸಂಭಲ್‌ನಲ್ಲಿ ಇರುವ ಶಾಹಿ ಜಾಮಾ ಮಸೀದಿ ನಿರ್ಮಿಸಲಾಗಿದೆ ಎಂದು ದೂರಿದ್ದ ಅರ್ಜಿ ಆಲಿಸಿದ್ದ ವಿಚಾರಣಾ ನ್ಯಾಯಾಲಯ ಸಮೀಕ್ಷೆಗೆ ಆದೇಶಿಸಿತ್ತು.
Allahabad HC, Sambhal Mosque
Allahabad HC, Sambhal Mosque
Published on

ಉತ್ತರ ಪ್ರದೇಶದ ಸಂಭಲ್‌ನ ಶಾಹಿ ಜಾಮಾ ಮಸೀದಿಯ ಆವರಣದ ಸಮೀಕ್ಷೆಗೆ ಅಡ್ವೊಕೇಟ್‌ ಕಮಿಷನರ್‌ ನೇಮಿಸುವಂತೆ ನಿರ್ದೇಶಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಂಭಲ್‌ನ ಶಾಹಿ ಜಾಮಾ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಅಲಾಹಾಬಾದ್ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ.

ವಿಚಾರಣಾ ನ್ಯಾಯಾಲಯದ ಆದೇಶ ಎತ್ತಿಹಿಡಿದು ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್‌ವಾಲ್‌ ತೀರ್ಪು ನೀಡಿದರು.

Also Read
ಸಂಭಲ್‌ ಜುಮ್ಮಾ ಮಸೀದಿ ಬಾವಿಯಲ್ಲಿ ಪೂಜೆ ಪುನಸ್ಕಾರ ನಿರ್ಬಂಧಿಸಿದ ಸುಪ್ರೀಂ

ಮೊಘಲರ ಕಾಲದಲ್ಲಿ ಕೆಡವಲಾದ ಹಿಂದೂ ದೇವಾಲಯದ ಮೇಲೆ ಸಂಭಲ್‌ನಲ್ಲಿ ಇರುವ ಶಾಹಿ ಜಾಮಾ ಮಸೀದಿ ನಿರ್ಮಿಸಲಾಗಿದೆ ಎಂದು ಪ್ರತಿಪಾದಿಸಿದ್ದ ಅರ್ಜಿಯನ್ನು ಆಲಿಸಿದ್ದ ವಿಚಾರಣಾ ನ್ಯಾಯಾಲಯ ಸಮೀಕ್ಷೆಗೆ ಆದೇಶಿಸಿತ್ತು.

ವಕೀಲ ಹರಿಶಂಕರ್ ಜೈನ್ ಹಾಗೂ ಇತರ ಏಳು ಜನರು ಮೊಕದ್ದಮೆ ಹೂಡಿದ್ದರು. ಸಮೀಕ್ಷೆಗೆ ಅವಕಾಶ ನೀಡಿದ ಸಿವಿಲ್ ನ್ಯಾಯಾಲಯದ ಆದೇಶ ಸಂಭಲ್‌ನಲ್ಲಿ ಹಿಂಸಾತ್ಮಕ ಘರ್ಷಣೆಗೆ ಕಾರಣವಾಗಿತ್ತು.

1991ರ ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆಯ ಸಿಂಧುತ್ವವನ್ನು ನಿರ್ಧರಿಸುವಾಗ,  ಕಟ್ಟಡಗಳ ಧಾರ್ಮಿಕ ಸ್ವರೂಪವನ್ನು ವಿವಾದಿಸುವ ಮೊಕದ್ದಮೆಗಳಿಗೆ ಸಂಬಂಧಿಸಿದಂತೆ ಆದೇಶ  ಹೊರಡಿಸಕೂಡದು ಎಂದು ದೇಶದ ನ್ಯಾಯಾಲಯಗಳಿಗೆ ನಿರ್ದೇಶನ ನೀಡುವ ಆದೇಶವನ್ನು ಸುಪ್ರೀಂ ಕೋರ್ಟ್ ಹೊರಡಿಸಿರುವುದರಿಂದ ಸಿವಿಲ್ ನ್ಯಾಯಾಲಯದ ವಿಚಾರಣೆಗಳು ಪ್ರಸ್ತುತ ಸ್ಥಗಿತಗೊಂಡಿವೆ.

ಈ ಮಧ್ಯೆ, ಸಂಭಲ್ ಮಸೀದಿಯ ಆಡಳಿತ ಸಮಿತಿಯು ಮಸೀದಿಯಲ್ಲಿ ಯಾವುದೇ ಸಮೀಕ್ಷೆ ನಡೆಸುವುದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.

ಪ್ರಕರಣದಲ್ಲಿ ಎಎಸ್‌ಐ ಕೂಡ ಪ್ರತಿಕ್ರಿಯೆ ಸಲ್ಲಿಸಿದ್ದು, ಮಸೀದಿಯನ್ನು ಕೇಂದ್ರ ಸರ್ಕಾರದಿಂದ ಸಂರಕ್ಷಿತ ಸ್ಮಾರಕವೆಂದು ಗೊತ್ತುಪಡಿಸಲಾಗಿದೆ, ಹಾಗಿರುವಾಗ ಅದನ್ನು ಅದನ್ನು ಸಾರ್ವಜನಿಕ ಪೂಜಾ ಸ್ಥಳವೆಂದು ಗುರುತಿಸಲು ಸಾಧ್ಯವಿಲ್ಲ, ಇದಕ್ಕೆ ಯಾವುದೇ ಪೂರಕ ದಾಖಲೆಗಳು ಲಭ್ಯವಿಲ್ಲ ಎಂದಿದೆ.

Also Read
ಶಾಹಿ ಮಸೀದಿ ಸಮೀಕ್ಷೆ: ವಿಚಾರಣೆ ಮುಂದೂಡಲು ಸಂಭಲ್‌ ನ್ಯಾಯಾಲಯಕ್ಕೆ ಸುಪ್ರೀಂ ಸೂಚನೆ, ಹೈಕೋರ್ಟ್‌ನತ್ತ ಚಿತ್ತ

ಸ್ವಾತಂತ್ರ್ಯದ ನಂತರ, ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ತಾಣಗಳು ಮತ್ತು ಅವಶೇಷಗಳ ಕಾಯಿದೆ, 1958ರ (ಎಎಂಎಎಸ್‌ಆರ್‌ ಕಾಯಿದೆ) ಸೆಕ್ಷನ್‌ಗಳು ಅಂತಹ ತಾಣಗಳಿಗೆ ಅನ್ವಯವಾಗುತ್ತವೆ ಎಂದು ಅದು ಹೇಳಿದೆ. ಅಧಿಕೃತ ದಾಖಲೆಗಳು ಮಸೀದಿಯನ್ನು ಧಾರ್ಮಿಕ ಸ್ಥಳವೆಂದು ಗುರುತಿಸುವುದಿಲ್ಲ ಎಂದು ಎಎಸ್‌ಐ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರತಿಕ್ರಿಯೆಯಲ್ಲಿ ವಿವರಿಸಿದೆ.

ಮೇ 3ರಂದು ಪ್ರಕರಣದ ತೀರ್ಪು ಕಾಯ್ದಿರಿಸಿದ್ದ ನ್ಯಾಯಾಲಯ  ಇಂದು ಸಮೀಕ್ಷೆಯ ವಿರುದ್ಧ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.

Kannada Bar & Bench
kannada.barandbench.com