ಹೆಣ್ಣುಮಕ್ಕಳ ವಿರುದ್ಧ ತಂತ್ರಜ್ಞಾನ ಬಳಸಿಕೊಂಡು ನಡೆಸುವ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದ್ದು ಸಹಪಾಠಿಯೊಬ್ಬಳ ಸಾಮಾಜಿಕ ಮಾಧ್ಯಮ ಖಾತೆ ಹ್ಯಾಕ್ ಮಾಡಿ ಬೆದರಿಕೆಯೊಡ್ಡುತ್ತಿದ್ದ ವಿದ್ಯಾರ್ಥಿಗೆ ಜಾಮೀನು ನೀಡಲು ನಿರಾಕರಿಸಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 386 ಮತ್ತು 354 ಎ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66-ಸಿ ಅಡಿಯಲ್ಲಿ ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಆರೋಪಿ ಮತ್ತು ಸಂತ್ರಸ್ತೆ ವಿದ್ಯಾರ್ಥಿನಿ ನಳಂದ ಶಿಕ್ಷಣ ಸಂಸ್ಥಾನ್ ವಿದ್ಯಾ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿದ್ದರು. ಆರೋಪಿಯು ವಿದ್ಯಾರ್ಥಿನಿಯ ಮೊಬೈಲ್ ಸಂಖ್ಯೆಯನ್ನು ಪಡೆದು ಅದರ ಮೂಲಕ ಕೊಳಕು ಮತ್ತು ಅಶ್ಲೀಲ ಸಂದೇಶಗಳನ್ನು ಇತರ ವಿದ್ಯಾರ್ಥಿಗಳು/ಹುಡುಗರಿಗೆ ಕಳುಹಿಸಲು ಪ್ರಾರಂಭಿಸಿದ್ದ ಎಂದು ತಿಳಿದು ಬಂದಿದೆ. ಹೀಗೆ ಸಂದೇಶ ಕಳಿಸಲು ಆತ ವಿದ್ಯಾರ್ಥಿನಿಯ ಇನ್‌ಸ್ಟಾಗ್ರಾಮ್ ಮತ್ತು ಸ್ನ್ಯಾಪ್‌ಚಾಟ್ ಖಾತೆಗಳನ್ನು ಹ್ಯಾಕ್ ಮಾಡಿದ್ದ ಎನ್ನಲಾಗಿದೆ.
ಆಕೆಯ ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸುವಂತೆ ಆರೋಪಿ ವಿದ್ಯಾರ್ಥಿನಿಗೆ ಒತ್ತಡ ಹೇರಿದ್ದ. ಆಕೆ ಅದಕ್ಕೆ ಒಪ್ಪದಿದ್ದಾಗ, 2 ಲಕ್ಷ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ. ಹಣ ಕೊಡದೇ ಹೋದರೆ ಅಪಘಾತದಲ್ಲಿ ಆಕೆಯ ಕಿರಿಯ ಸಹೋದರನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಪ್ರಕರಣದ ಕುರಿತು ನ್ಯಾಯಮೂರ್ತಿ ದಿನೇಶ್ ಕುಮಾರ್ ಸಿಂಗ್ ಹೀಗೆ ಅಭಿಪ್ರಾಯಪಟ್ಟಿದ್ದಾರೆ:
"ಸಮಾಜದಲ್ಲಿ ಈ ರೀತಿಯ ಅಪರಾಧಗಳು ಹೆಚ್ಚುತ್ತಿವೆ. ವಿಶೇಷವಾಗಿ ಮಹಿಳೆಯರ ವಿರುದ್ಧದ ಅಪರಾಧವೆಸಗಲು ತಂತ್ರಜ್ಞಾನ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಅರ್ಜಿದಾರ ಆರೋಪಿಯ ಮೇಲೆ ಯುವತಿಯ ಜೀವನ ನಾಶಮಾಡುವ ಮತ್ತು ಧಕ್ಕೆ ತರುವ ಆರೋಪ ಇದೆ. ಆತ ಸಂತ್ರಸ್ತೆಗೆ ಬೆದರಿಕೆ ಮತ್ತು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. "
ಅಲಹಾಬಾದ್ ಹೈಕೋರ್ಟ್
ಅರ್ಜಿದಾರನ ವಿರುದ್ಧದ ಅಪರಾಧದ ಘೋರತೆಯನ್ನು ಪರಿಗಣಿಸಿದ ನ್ಯಾಯಾಲಯ ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದೆ. ವಿಚಾರಣೆ ಇನ್ನೂ ಆರಂಭವಾಗದಿರುವ ಮತ್ತು ಸಂತ್ರಸ್ತೆಯನ್ನು ವಿಚಾರಣೆಗೆ ಒಳಪಡಿಸುವ ಹಂತದಲ್ಲಿ ಪ್ರಕರಣವನ್ನು ಗಣನೆಗೆ ತೆಗೆದುಕೊಂಡು ಜಾಮೀನು ನಿರಾಕರಿಸಿದೆ.