
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಾತೀಯತೆ ಆಚರಿಸುತ್ತಿದ್ದಾರೆ ಎಂದು ದೂರಿದ್ದ ವಾಟ್ಸಾಪ್ ಸಂದೇಶವನ್ನು ಬೇರೆಯವರಿಗೆ ರವಾನೆ (ಫಾರ್ವರ್ಡ್) ಮಾಡಿದ್ದಕ್ಕಾಗಿ ಉತ್ತರ ಪ್ರದೇಶ ಸರ್ಕಾರ ವಜಾಗೊಳಿಸಿದ್ದ ಅಧಿಕಾರಿಯನ್ನು ಮರುನೇಮಕ ಮಾಡುವಂತೆ ಅಲಾಹಾಬಾದ್ ಹೈಕೋರ್ಟ್ ನಿರ್ದೇಶನ ನೀಡಿದೆ.
ರಾಜ್ಯ ಸಚಿವಾಲಯದಲ್ಲಿ ಹೆಚ್ಚುವರಿ ಖಾಸಗಿ ಕಾರ್ಯದರ್ಶಿಯಾಗಿದ್ದ ಅಮರ್ ಸಿಂಗ್ ಅವರನ್ನು ವಜಾಗೊಳಿಸಿರುವುದು ಅಪರಾಧದ ಸ್ವರೂಪಕ್ಕೆ ಅನುಗುಣವಾಗಿ ಇಲ್ಲ ಎಂದು ನ್ಯಾಯಮೂರ್ತಿ ಅಲೋಕ್ ಮಾಥುರ್ ತಿಳಿಸಿದ್ದಾರೆ.
ತಾನು ಅಜಾಗರೂಕತೆಯಿಂದ ಸಂದೇಶ ರವಾನಿಸಿದ್ದು ತಪ್ಪಿನ ಅರಿವಾದ ಬಳಿಕ ಅಳಿಸಿ ಹಾಕಿರುವುದಾಗಿ ಖುದ್ದು ಅವರು ಲಿಖಿತವಾಗಿ ಒಪ್ಪಿಕೊಂಡಿರುವುದು ಅವರಿಗೆ ಸಂಬಂಧಿಸಿದ ಏಕೈಕ ಸಾಕ್ಷಿಯಾಗಿದೆ ಎಂದು ನ್ಯಾಯಾಲಯ ಹೇಳಿದೆ.
" ಅರ್ಜಿದಾರರು ಉದ್ದೇಶಪೂರ್ವಕವಾಗಿ ಸರ್ಕಾರದ ಪ್ರತಿಷ್ಠೆಗೆ ಧಕ್ಕೆ ತರಲು ಸಂದೇಶ ಪ್ರಸಾರ ಮಾಡಿದ್ದಾರೆ ಎಂಬ ಹೇಳಿಕೆಯನ್ನು ಬೆಂಬಲಿಸಲು ವಿಚಾರಣಾ ಅಧಿಕಾರಿ ಅಥವಾ ತಾಂತ್ರಿಕ ಸಮಿತಿಯ ಮುಂದೆ ರಾಜ್ಯ ಸರ್ಕಾರ ಯಾವುದೇ ಗಣನೀಯ ಪುರಾವೆ ಸಲ್ಲಿಸಿಲ್ಲ" ಎಂದು ನ್ಯಾಯಾಲಯ ಹೇಳಿದೆ.
ಸಂದೇಶವನ್ನು ಓದಲಾಗಿದೆ ಅಥವಾ ವ್ಯಾಪಕವಾಗಿ ಪ್ರಸಾರ ಮಾಡಲಾಗಿದೆ ಎಂಬುದಕ್ಕೆ ಪುರಾವೆ ಒದಗಿಸಲು ಇಲಾಖೆ ವಿಫಲವಾದ ಕಾರಣ, ಸಂದೇಶ ರವಾನೆಯಿಂದ ಸರ್ಕಾರದ ಪ್ರತಿಷ್ಠೆಗೆ ಹಾನಿಯನ್ನುಂಟಾಗಿದೆ ಎಂದು ತೀರ್ಮಾನಿಸುವುದು ಊಹಾತ್ಮಕವಾಗಿದೆ ಎಂದು ನ್ಯಾಯಾಲಯ ಹೇಳಿದೆ.
2018ರಲ್ಲಿ, ಸಿಂಗ್ ವಾಟ್ಸಾಪ್ ಆಕ್ಷೇಪಾರ್ಹ ಸಂದೇಶ ಸ್ವೀಕರಿಸಿದ್ದರು. ಸಂದೇಶವನ್ನು ಸಿಂಗ್ ವಾಟ್ಸಾಪ್ ಗ್ರೂಪ್‌ಗೆ ಅಚಾತುರ್ಯದಿಂದ ರವಾನಿಸಿದ್ದರು.
ಸಿಂಗ್ ವಿರುದ್ಧ ಯಾವುದೇ ದೂರು ದಾಖಲಾಗಿರಲಿಲ್ಲ. ಆದರೂ, ಅವರು ಸ್ವಯಂಪ್ರೇರಣೆಯಿಂದ ಸಂದೇಶವನ್ನು ಅಳಿಸಲು ಪ್ರಯತ್ನಿಸಿದಾಗ ಅದನ್ನು ಅಜಾಗರೂಕತೆಯಿಂದ ಫಾರ್ವರ್ಡ್ ಮಾಡಿದ್ದಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದರು.
ಆಕ್ಷೇಪಾರ್ಹ ಸಂದೇಶವು ಸರ್ಕಾರದ ಪ್ರತಿಷ್ಠೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಸರ್ಕಾರವು ಅವರ ವಿರುದ್ಧ ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಿತು. 2020ರಲ್ಲಿ, ಅವರನ್ನು ಸೇವೆಯಿಂದ ವಜಾಗೊಳಿಸಿತ್ತು.
ವಿಚಾರಣೆ ನಡೆಸಿದ ನ್ಯಾಯಾಲಯ ಅವರ ವಜಾ ಆದೇಶ ರದ್ದುಗೊಳಿಸಿ ಅಧಿಕಾರಿಗೆ ಕಡಿಮೆ ಶಿಕ್ಷೆ ನೀಡುವುದನ್ನು ಪರಿಗಣಿಸಬೇಕು ಎಂದಿತು.