ತಮ್ಮ ಆದೇಶವೊಂದರಲ್ಲಿ ಲವ್ ಜಿಹಾದ್ ಕುರಿತು ಉತ್ತರಪ್ರದೇಶ ಜಿಲ್ಲಾ ನ್ಯಾಯಾಧೀಶ ರವಿಕುಮಾರ್ ದಿವಾಕರ್ ವ್ಯಕ್ತಪಡಿಸಿದ್ದ ಅಭಿಪ್ರಾಯಗಳು ಚರ್ಚೆಗೆ ಗ್ರಾಸವಾಗಿದ್ದು ನ್ಯಾಯಾಂಗದ ಶಿಷ್ಟಾಚಾರದ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ತನ್ನನ್ನು ಹಿಂದೂ ಎಂದು ಬಿಂಬಿಸಿ ಸಂತ್ರಸ್ತೆಯನ್ನು ದೇವಸ್ಥಾನದಲ್ಲಿ ವಿವಾಹವಾಗಿದ್ದ ಮುಸ್ಲಿಂ ಯುವಕನೊಬ್ಬನಿಗೆ ಆಜೀವ ಪರ್ಯಂತ ಶಿಕ್ಷೆ ವಿಧಿಸಿದ್ದ ಅವರು ತೀರ್ಪಿನಲ್ಲಿ ಮುಸ್ಲಿಂ ಪುರುಷರು ತಾವು ಪ್ರೀತಿಸುವುದಾಗಿ ನಂಬಿಸಿ ಹಿಂದೂ ಮಹಿಳೆಯರನ್ನು ವಿವಾಹದ ಮೂಲಕ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿಕೊಳ್ಳುತ್ತಿದ್ದಾರೆ ಎಂದಿದ್ದರು.
ಲವ್ ಜಿಹಾದ್‌ನ ಮುಖ್ಯ ಉದ್ದೇಶ ನಿರ್ದಿಷ್ಟ ಧರ್ಮದ ಅರಾಜಕತಾವಾದಿಗಳು ಅಂತಾರಾಷ್ಟ್ರೀಯ ಸಂಚು ಮತ್ತು ಜನಾಂಗೀಯ ಯುದ್ಧದ ಮೂಲಕ ಭಾರತದ ಮೇಲೆ ಪ್ರಭುತ್ವ ಸಾರುವುದಾಗಿದೆ ಎಂದು ಅವರು ಹೇಳಿದ್ದರು.
ದಿವಾಕರ್ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಮಾರ್ಚ್‌ನಲ್ಲಿ ಅವರು ತಮ್ಮ ಆದೇಶವೊಂದರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದ್ದರು.
ಸಮರ್ಪಣೆ ಮತ್ತು ತ್ಯಾಗದಿಂದ ಅಧಿಕಾರ ನಡೆಸುತ್ತಿರುವ ಧಾರ್ಮಿಕ ವ್ಯಕ್ತಿಗೆ ಪರಿಪೂರ್ಣ ಉದಾಹರಣೆ ಎಂದರೆ ಅದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಂಬುದಾಗಿ ಅವರು ಹೇಳಿದ್ದರು.
"ಭಾರತದಲ್ಲಿನ ಗಲಭೆಗಳಿಗೆ ಮುಖ್ಯ ಕಾರಣವೆಂದರೆ ಇಲ್ಲಿನ ರಾಜಕೀಯ ಪಕ್ಷಗಳು ಒಂದು ನಿರ್ದಿಷ್ಟ ಧರ್ಮದ ತುಷ್ಟೀಕರಣದಲ್ಲಿ ತೊಡಗಿರುವುದು. ಇದರಿಂದಾಗಿ ಆ ನಿರ್ದಿಷ್ಟ ಧರ್ಮದ ಪ್ರಮುಖ ವ್ಯಕ್ತಿಗಳ ಸ್ಥೈರ್ಯ ತುಂಬಾ ಹೆಚ್ಚಿ ಗಲಭೆ ಇತ್ಯಾದಿಗಳನ್ನು ಮಾಡಿದರೂ, ಅಧಿಕಾರದ ಶ್ರೀರಕ್ಷೆ ಇರುವುದರಿಂದ ತಮ್ಮ ಒಂದು ಕೂದಲೂ ಕೊಂಕುವುದಿಲ್ಲ ಎಂದುಕೊಂಡಿದ್ದಾರೆ" ಎಂದು ಕೂಡ ಅವರು ಆಕ್ಷೇಪಿಸಿದ್ದರು.
ಮುಸ್ಲಿಂ ಧರ್ಮಗುರು ಮೌಲಾನಾ ತೌಕೀರ್ ರಝಾಮ್ ಅವರಿಗೆ 2010ರ ಬರೇಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ನೀಡುವ ವೇಳೆ ನ್ಯಾಯಾಧೀಶ ದಿವಾಕರ್ ಈ ಮಾತುಗಳನ್ನಾಡಿದ್ದರು.
ಅಲಾಹಾಬಾದ್ ಉಚ್ಚ ನ್ಯಾಯಾಲಯ ಈ ಹೇಳಿಕೆಗಳನ್ನು ಆದೇಶದಿಂದ ತೆಗೆದುಹಾಕಿತ್ತು. ಆದೇಶಗಳಲ್ಲಿ ನ್ಯಾಯಾಂಗ ಅಧಿಕಾರಿಯಾಗಿರುವವರು ವೈಯಕ್ತಿಕ ಅಥವಾ ಪೂರ್ವಗ್ರಹದ ಕಲ್ಪನೆ ವ್ಯಕ್ತಪಡಿಸುವುದನ್ನು ನಿರೀಕ್ಷಿಸಲಾಗದು ಎಂದಿತು.
ರಾಜಕೀಯ ಲೇಪನದ ಮತ್ತು ಅನಗತ್ಯ ಹೇಳಿಕೆಗಳನ್ನು ನ್ಯಾಯಾಧೀಶ ದಿವಾಕರ್ ನೀಡಿದ್ದಾರೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ ಮಿಶ್ರಾ ಅವರು ಅವಲೋಕಿಸಿದ್ದರು.
ಜ್ಞಾನವಾಪಿ-ಕಾಶಿ ವಿಶ್ವನಾಥ ಪ್ರಕರಣದಲ್ಲಿ ಆದೇಶ ನೀಡಿದ ನಂತರ ತನಗೆ ಬೆದರಿಕೆ ಇದೆ ಎಂದು ಅಲಾಹಾಬಾದ್ ಹೈಕೋರ್ಟ್‌ಗೆ ತಿಳಿಸುವ ಮೂಲಕವೂ ನ್ಯಾಯಾಧೀಶ ದಿವಾಕರ್ ಸುದ್ದಿಯಲ್ಲಿದ್ದರು. ಅವರು 2022ರಲ್ಲಿ ಜ್ಞಾನವಾಪಿ ಮಸೀದಿ ಆವರಣದ ವಿಡಿಯೋ ಸಮೀಕ್ಷೆಗೆ ಆದೇಶಿಸಿದ್ದರು.
ಸಮೀಕ್ಷೆ ವೇಳೆ ವಾರಾಣಸಿಯ ಜ್ಞಾನವಾಪಿ ಮಸೀದಿ ಆವರಣದಲ್ಲಿ ಶಿವಲಿಂಗ ಹೋಲುವ ಆಕೃತಿ ಪತ್ತೆಯಾದ ಹಿನ್ನೆಲೆಯಲ್ಲಿ ಆ ಪ್ರದೇಶವನ್ನು ನಿರ್ಬಂಧಿಸುವಂತೆ ಅವರು ಆದೇಶಿಸಿದ್ದರು. ಆದರೆ ಈ ಆದೇಶವನ್ನು ಬಳಿಕ ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್ ಪ್ರಕರಣವನ್ನು ಮತ್ತೊಬ್ಬ ನ್ಯಾಯಾಧೀಶರಿಗೆ ವರ್ಗಾಯಿಸಿತ್ತು.
ಸಮೀಕ್ಷೆಗೆ ತಾನು ಕರೆ ನೀಡಿದ್ದಕ್ಕಾಗಿ ಮುಸ್ಲಿಂ ಸಂಘಟನೆಯಿಂದ ಬೆದರಿಕೆ ಕರೆ ಬರುತ್ತಿವೆ ಎಂದು ಎರಡು ವರ್ಷಗಳ ಬಳಿಕ ನ್ಯಾ. ದಿವಾಕರ್ ಆರೋಪಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ ಎಂದು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು.
ಬಳಿಕ ನ್ಯಾಯಾಧೀಶ ದಿವಾಕರ್ ಅವರನ್ನು ಕೊಲ್ಲಲ್ಲು ಇನ್‌ಸ್ಟಾಗ್ರಾಂ ಖಾತೆಯೊಂದನ್ನು ನಡೆಸುತ್ತಿರುವ ಇಸ್ಲಾಮಿಕ್ ಮೂಲಭೂತ ವಾದಿಗಳು ಸಂಚು ನಡೆಸಿದ್ದಾರೆ ಎಂದು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಲಖನೌ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಅಲಹಾಬಾದ್ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೆ ಪತ್ರ ಬರೆದು ನ್ಯಾಯಾಧೀಶ ದಿವಾಕರ್ ಅವರಿಗೆ ಭದ್ರತೆ ನೀಡುವಂತೆ ಕೋರಿದ್ದರು.
ದಿವಾಕರ್ ಮೂಲತಃ ಉತ್ತರ ಪ್ರದೇಶದವರು. ʼದಿ ಪ್ರಿಂಟ್ʼ ವರದಿಯ ಪ್ರಕಾರ , ಅವರು ಬಿಜೆಪಿ ಮಾಜಿ ಸಚಿವ ಚಂದ್ರ ಕಿಶೋರ್ ಸಿಂಗ್ ಅವರ ಅಳಿಯ. ಸಿಂಗ್ ಅವರು ಯೋಗಿ ಆದಿತ್ಯನಾಥ್ ಅವರ ನಿಕಟವರ್ತಿ ಎನ್ನಲಾಗಿದೆ.
ನ್ಯಾಯಾಧೀಶ ದಿವಾಕರ್ ಅವರು ಸಾಮಾಜಿಕ ಮಾಧ್ಯಮಗಳಲ್ಲೂ ಸಕ್ರಿಯರಾಗಿದ್ದು ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರೇರಣೆ ನೀಡುವಂತಹ ಮತ್ತು ಧಾರ್ಮಿಕ ವಿಚಾರಗಳಿರುವ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ.