
ಅನೇಕ ವ್ಯಕ್ತಿಗಳ ವಿರುದ್ಧ ಪದೇ ಪದೇ ಸುಳ್ಳು ಅತ್ಯಾಚಾರ ಇನ್ನಿತರ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದ ಮಹಿಳೆ ಮತ್ತು ಆಕೆಯ ಪರ ವಕೀಲರ ವಿರುದ್ಧ ಸಿಬಿಐ ತನಿಖೆಗೆ ಅಲಾಹಾಬಾದ್ ಹೈಕೋರ್ಟ್ ಈಚೆಗೆ ಆದೇಶಿಸಿದೆ.
ಮಹಿಳೆ ಮತ್ತು ಆಕೆಯ ಪರ ವಕೀಲರು ಶಾಮೀಲಾಗಿ ಅನೇಕ ವ್ಯಕ್ತಿಗಳ ವಿರುದ್ಧ ಸುಳ್ಳು ದೂರು ದಾಖಲಿಸಿ ಅವರಿಂದ ಹಣ ಕಸಿದುಕೊಳ್ಳುತ್ತಿರುವುದು ಸ್ಪಷ್ಟವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಅಂತಹ ಪ್ರಕರಣದಲ್ಲಿ ಆರೋಪಿಯಾಗಿರುವ ವ್ಯಕ್ತಿಯೊಬ್ಬರು ಬಂಧನದಿಂದ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಬ್ರಿಜ್ ರಾಜ್ ಸಿಂಗ್ ಮತ್ತು ವಿವೇಕ್ ಚೌಧರಿ ಅವರಿದ್ದ ಪೀಠ ಈ ವಿಚಾರ ತಿಳಿಸಿತು.
ಸಂತ್ರಸ್ತೆ ಅಥವಾ ಪ್ರಕರಣದ ಮಾಹಿತಿದಾರೆ ಪೂಜಾ ರಾವತ್ ಅವರು ತಮ್ಮ ವಕೀಲ ಪರಮಾನಂದ ಗುಪ್ತಾ ಅವರ ಮೂಲಕ ಇದೇ ರೀತಿ ಅನೇಕ ವ್ಯಕ್ತಿಗಳ ವಿರುದ್ಧ ಅನೇಕ ಕ್ರಿಮಿನಲ್ ದೂರು ದಾಖಲಿಸಿರುವ ಆರೋಪದ ಗಂಭೀರತೆ ಪರಿಗಣಿಸಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಿಬಿಐಗೆ ನಿರ್ದೇಶಿಸುವುದು ಸೂಕ್ತ ಎಂದು ನ್ಯಾಯಾಲಯ ವಿವರಿಸಿದೆ.
ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನ ವಿವಿಧ ಸೆಕ್ಷನ್‌ಗಳು ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಡಿ ಅಡಿಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಅರ್ಜಿದಾರರು ಜನವರಿ 30 ರಂದು ನ್ಯಾಯಾಲಯದ ಮೆಟ್ಟಿಲೇರುವ ಮೂಲಕ ಘಟನೆ ಬೆಳಕಿಗೆ ಬಂದಿತ್ತು. ಅರ್ಜಿದಾರರು ತಮ್ಮ ವಿರುದ್ಧ ಬಂಧನ, ಬಲವಂತದ ಕ್ರಮ ಅಥವಾ ಯಾವುದೇ ವಿಚಾರಣೆಯಿಂದ ರಕ್ಷಣೆ ನೀಡುವಂತೆಯೂ ಕೋರಿದ್ದರು.
ಮಾಹಿತಿದಾರರಾದ ಪೂಜಾ ರಾವತ್ ಸುಳ್ಳು ದೂರುಗಳನ್ನು ದಾಖಲಿಸುವ ಪ್ರವೃತ್ತಿಯನ್ನು ಹೊಂದಿದ್ದಾರೆ ಮತ್ತು ಅನೇಕ ವ್ಯಕ್ತಿಗಳ ವಿರುದ್ಧ ಈ ಹಿಂದೆ 11 ಎಫ್ಐಆರ್‌ಗಳನ್ನು ದಾಖಲಿಸಿದ್ದಾರೆ, ಪ್ರಸ್ತುತ ಪ್ರಕರಣ ಅವರ 12ನೇ ದೂರು ಎಂದು ವಾದಿಸಿದರು. ಅಲ್ಲದೆ ಅವರ ಎಲ್ಲಾ ದೂರುಗಳನ್ನು ಒಬ್ಬರೇ ವಕೀಲ ಪರಮಾನಂದ ಗುಪ್ತಾ ಅವರ ಮೂಲಕ ಸಲ್ಲಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದರು.
ವಾಸ್ತವಾಂಶಗಳನ್ನು ಪರಿಗಣಿಸಿದ ನಂತರ, ನ್ಯಾಯಾಲಯ ಹಣ ಸುಲಿಗೆ ಮಾಡುವ ಸಲುವಾಗಿ ದೂರು ದಾಖಲಿಸಲಾಗಿದೆ ಎಂದು ತಿಳಿಸಿತು. ಅಂತೆಯೇ ಏಪ್ರಿಲ್ 10ರೊಳಗೆ ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಿಬಿಐಗೆ ನಿರ್ದೇಶನ ನೀಡಿತು. ಜೊತೆಗೆ ಅರ್ಜಿದಾರರಿಗೆ ಬಂಧನದಿಂದ ರಕ್ಷಣೆಯನ್ನೂ ನೀಡಿತು.