ಸುಳ್ಳು ಸುದ್ದಿ ಆರೋಪ: ಒಪ್‌ಇಂಡಿಯಾದ ನೂಪುರ್ ಶರ್ಮಾ ವಿರುದ್ಧದ ಎಫ್‌ಐಆರ್‌ ರದ್ದುಗೊಳಿಸಿದ ಮದ್ರಾಸ್‌ ಹೈಕೋರ್ಟ್‌

ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಯುತ್ತಿದೆ ಎಂದು ಒಪ್ಇಂಡಿಯಾ ಸುಳ್ಳು ಸುದ್ದಿ ಪ್ರಕಟಿಸಿದೆ ಎಂದು 2023ರಲ್ಲಿ ಡಿಎಂಕೆ ಪಕ್ಷದ ಸದಸ್ಯರೊಬ್ಬರು ನೀಡಿದ ದೂರು ಆಧರಿಸಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿತ್ತು.
OpIndia with Madras High Court
OpIndia with Madras High Court
Published on

ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಯುತ್ತಿದೆ ಎಂದು ಸುಳ್ಳು ಸುದ್ದಿ ಹರಡಿದ ಆರೋಪಕ್ಕೆ ಸಂಬಂಧಿಸಿದಂತೆ ಒಪ್‌ಇಂಡಿಯಾ ಜಾಲತಾಣದ ಸಂಪಾದಕಿ ನೂಪುರ್‌ ಶರ್ಮಾ ಮತ್ತು ಸಿಇಒ ರಾಹುಲ್‌ ರೌಶನ್‌ ವಿರುದ್ಧ ತಮಿಳುನಾಡು ಪೊಲೀಸರು ದಾಖಲಿಸಿಕೊಂಡಿದ್ದ ಎಫ್‌ಐಆರ್‌ ಅನ್ನು ಮದ್ರಾಸ್ ಹೈಕೋರ್ಟ್ ಮಂಗಳವಾರ ರದ್ದುಗೊಳಿಸಿದೆ [ನೂಪುರ್‌ ಜೆ ಶರ್ಮಾ ಮತ್ತಿತರರು ಹಾಗೂ ಪೊಲೀಸ್‌ ಇನ್‌ಸ್ಪೆಕ್ಟರ್‌ ನಡುವಣ ಪ್ರಕರಣ].

ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆ  ರದ್ದುಗೊಳಿಸುವಂತೆ ಶರ್ಮಾ ಮತ್ತು ರೌಶನ್ ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿ ಜಿ ಕೆ ಇಳಂತಿರಾಯನ್ ಪುರಸ್ಕರಿಸಿದರು.

Also Read
ವಲಸೆ ಕಾರ್ಮಿಕರ ಬಗ್ಗೆ ಸುಳ್ಳುಸುದ್ದಿ: ಪ್ರಶಾಂತ್ ಉಮ್ರಾವ್‌ಗೆ ಟ್ರಾನ್ಸಿಟ್‌ ಜಾಮೀನು ನೀಡಿದ ದೆಹಲಿ ಹೈಕೋರ್ಟ್‌

ಬಿಹಾರದ ಕೆಲವು ವಲಸೆ ಕಾರ್ಮಿಕರ ಮೇಲೆ ತಮಿಳುನಾಡಿನಲ್ಲಿ ದಾಳಿ ಮಾಡಲಾಗಿದೆ ಎಂದು ಒಪ್‌ಇಂಡಿಯಾ ಪ್ರಕಟಿಸಿದ ಸುಳ್ಳು ವರದಿ ಪ್ರಶ್ನಿಸಿ 2023ರಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಐಟಿ ವಿಭಾಗದ ಸದಸ್ಯರೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು.

ಪ್ರಕರಣ ರದ್ದುಗೊಳಿಸುವಂತೆ ಶರ್ಮಾ ಮತ್ತು ರೌಶನ್ ಸಲ್ಲಿಸಿದ್ದ ಅರ್ಜಿಯನ್ನು ಆರಂಭದಲ್ಲಿ ಮೇ 24, 2023ರಂದು ನ್ಯಾಯಮೂರ್ತಿ ಸತಿ ಕುಮಾರ್ ಸುಕುಮಾರ ಕುರುಪ್ ಅವರನ್ನೊಳಗೊಂಡ ಹೈಕೋರ್ಟ್‌ನ ರಜಾಕಾಲೀನ ಪೀಠದ ಮುಂದೆ ಪಟ್ಟಿ ಮಾಡಲಾಗಿತ್ತು . ಆದರೆ, ಆ ವರ್ಷದ ಜೂನ್‌ನಲ್ಲಿ ನ್ಯಾಯಾಲಯ ಮತ್ತೆ ಕಾರ್ಯಾರಂಭ ಮಾಡಿದಾಗ ಪ್ರಕರಣವನ್ನು ನಿಯಮಿತ ಪೀಠದ ವಿಚಾರಣೆಗೆ ಸಲ್ಲಿಸುವಂತೆ ಪೀಠ ನಿರ್ದೇಶಿಸಿತು.

Also Read
ವಲಸೆ ಕಾರ್ಮಿಕರಿಗೆ ಪಡಿತರ ಚೀಟಿ ನೀಡಲು ರಾಜ್ಯ ಸರ್ಕಾರಗಳು ವಿಫಲ: ಸುಪ್ರೀಂ ಕೋರ್ಟ್ ಮತ್ತೆ ಅಸಮಾಧಾನ

ಈ ಮಧ್ಯೆ, ಶರ್ಮಾ ಮತ್ತು ರೌಶನ್ ಪರಿಹಾರಕ್ಕಾ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋದರು. ಏಪ್ರಿಲ್ 21, 2023 ರಂದು ಹೊರಡಿಸಲಾದ ಆದೇಶದಲ್ಲಿ ಸುಪ್ರೀಂ ಕೋರ್ಟ್‌ ಅವರಿಗೆ ನಾಲ್ಕು ವಾರಗಳ ಕಾಲ ಬಂಧನದಿಂದ ರಕ್ಷಣೆ ನೀಡಿತು.

ಆದರೂ ಪ್ರಕರಣವನ್ನು ರದ್ದುಗೊಳಿಸುವ ಅರ್ಜಿಯನ್ನು ನೇರವಾಗಿ ಪರಿಗಣಿಸುವುದಿಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್, ಮದ್ರಾಸ್ ಹೈಕೋರ್ಟ್ ಮುಂದೆ ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು. ಮಂಗಳವಾರ ಹೈಕೋರ್ಟ್‌ ಅವರ ಮನವಿ ಪುರಸ್ಕರಿಸಿದೆ.

ಆದೇಶದ ಪೂರ್ಣ ವಿವರ ಲಭ್ಯವಾಗಬೇಕಿದೆ.

Kannada Bar & Bench
kannada.barandbench.com