ಮತಾಂತರ ನಿಷೇಧ ಕಾಯಿದೆ ಪಾಲಿಸದ ಮೂರು ವಿವಾಹಗಳನ್ನು ಕಾನೂನು ಬಾಹಿರ ಎಂದ ಅಲಾಹಾಬಾದ್ ಹೈಕೋರ್ಟ್: ರಕ್ಷಣೆ ನೀಡಲು ನಕಾರ

ಕುತೂಹಲಕಾರಿ ಸಂಗತಿಯೆಂದರೆ, ಇದೇ ನ್ಯಾಯಮೂರ್ತಿ ಸಿದ್ಧಾರ್ಥ್ ಅವರಿದ್ದ ಪೀಠ ಈ ಹಿಂದೆ ತಮ್ಮ ಕುಟುಂಬಗಳಿಂದ ಬೆದರಿಕೆ ಎದುರಿಸುತ್ತಿದ್ದ 26 ಜೋಡಿಗೆ ರಕ್ಷಣೆ ಒದಗಿಸಿತ್ತು.
Justice Siddhart and Allahabad HC, Couple
Justice Siddhart and Allahabad HC, Couple

ಇತ್ತೀಚೆಗೆ ಜಾರಿಗೆ ಬಂದ ಉತ್ತರ ಪ್ರದೇಶ ಅಕ್ರಮ ಮತಾಂತರ ನಿಷೇಧ ಕಾಯಿದೆಯ ಅಗತ್ಯತೆಗಳನ್ನು ಪೂರೈಸಿಲ್ಲ ಎಂಬ ಕಾರಣಕ್ಕೆ ಮೂರು ಅಂತರ್ಧರ್ಮೀಯ ಮದುವೆಗಳನ್ನು ಕಾನೂನು ಬಾಹಿರ ಎಂದು ಅಲಾಹಾಬಾದ್‌ ಹೈಕೋರ್ಟ್‌ ಇತ್ತೀಚೆಗೆ ಘೋಷಿಸಿದ್ದು ದಂಪತಿಗೆ ರಕ್ಷಣೆ ನೀಡಲು ನಿರಾಕರಿಸಿದೆ.

ಎರಡು ಪ್ರಕರಣಗಳಲ್ಲಿ, ಹಿಂದೂ ಪುರುಷರನ್ನು ಮದುವೆಯಾಗಲು ಮಹಿಳೆಯರು ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರೆ, ಮೂರನೆಯ ಪ್ರಕರಣದಲ್ಲಿ ಹಿಂದೂ ವ್ಯಕ್ತಿಯೊಬ್ಬರು ಮುಸ್ಲಿಂ ಮಹಿಳೆಯನ್ನು ಮದುವೆಯಾಗಲು ಇಸ್ಲಾಂಗೆ ಮತಾಂತರಗೊಂಡಿದ್ದಾರೆ.

ಕಾಯಿದೆಯ ಸೆಕ್ಷನ್‌ 8 ಮತ್ತು 9ನ್ನು ಪಾಲಿಸದೇ ಇರುವುದರಿಂದ ಮದುವೆ ಕಾನೂನು ಬಾಹಿರವಾಗುತ್ತದೆ ಎಂದು ತಿಳಿಸಿದ ನ್ಯಾಯಮೂರ್ತಿ ಸಿದ್ಧಾರ್ಥ್‌ ಅವರಿದ್ದ ಏಕಸದಸ್ಯ ಪೀಠ ಅಂತರ್ಧರ್ಮೀಯ ದಂಪತಿಗಳ ಮನವಿಯನ್ನು ತಿರಸ್ಕರಿಸಿದರು. ತಮ್ಮ ಕುಟುಂಬದವರು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ದಂಪತಿ ಹೈಕೋರ್ಟ್‌ ಮೊರೆ ಹೋಗಿದ್ದರು.

Also Read
ವಯಸ್ಕ ಮಹಿಳೆಗೆ ತನ್ನದೇ ಆದ ಜೀವನ ನಡೆಸುವ ಹಕ್ಕಿದೆ: ಅಂತರ್‌ಧರ್ಮೀಯ ದಂಪತಿಯನ್ನು ಒಗ್ಗೂಡಿಸಿದ ಅಲಾಹಾಬಾದ್ ಹೈಕೋರ್ಟ್

ಇಸ್ಲಾಂಗೆ ಮತಾಂತರವಾದ ಹಿಂದೂ ವ್ಯಕ್ತಿಯೊಬ್ಬರು ತಾವು ಇಸ್ಲಾಂ ಧರ್ಮ ಸ್ವೀಕರಿಸಿರುವ ಸಂಬಂಧ ಖಾಜಿ ಅವರು ಸಹಿ ಹಾಕಿರುವ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆದರೆ ಸೆಕ್ಷನ್‌ 8 ಮತ್ತು 9ನ್ನು ಪಾಲಿಸದೇ ಇರುವುದರಿಂದ ಖಾಜಿ ಅವರ ಪ್ರಮಾಣಪತ್ರ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪೀಠ ತಿಳಿಸಿತು. ಉಳಿದ ಎರಡು ಪ್ರಕರಣಗಳಲ್ಲೂ ಇಂಥದ್ದೇ ಕೆಲ ಕಾರಣಗಳನ್ನು ನೀಡಿ ಅರ್ಜಿದಾರರ ವಾದವನ್ನು ತಿರಸ್ಕರಿಸಿತು.

ಕುತೂಹಲಕಾರಿ ಸಂಗತಿಯೆಂದರೆ, ಇದೇ ನ್ಯಾಯಮೂರ್ತಿ ಸಿದ್ಧಾರ್ಥ್ ಅವರಿದ್ದ ಪೀಠ ಈ ಹಿಂದೆ ತಮ್ಮ ಕುಟುಂಬಗಳಿಂದ ಬೆದರಿಕೆ ಎದುರಿಸುತ್ತಿದ್ದ 26 ಜೋಡಿಗೆ ರಕ್ಷಣೆ ಒದಗಿಸಿತ್ತು.

ಉತ್ತರಪ್ರದೇಶ ಅಕ್ರಮ ಮತಾಂತರ ಕಾಯಿದೆಯನ್ನು ಆರಂಭದಲ್ಲಿ ಸುಗ್ರೀವಾಜ್ಞೆಯಾಗಿ ಜಾರಿಗೆ ತರಲಾಗಿತ್ತು. ನಂತರ ಇದನ್ನು ಉತ್ತರ ಪ್ರದೇಶ ವಿಧಾನಸಭೆ ಕಾಯಿದೆಯಾಗಿ ಅಂಗೀಕರಿಸಿತ್ತು.

ಅಕ್ರಮ ಮತಾಂತರದ ಏಕೈಕ ಉದ್ದೇಶಕ್ಕಾಗಿ ಅಥವಾ ಒಂದು ಧರ್ಮದ ವ್ಯಕ್ತಿ ಮತ್ತೊಂದು ಧರ್ಮದ ವ್ಯಕ್ತಿಯನ್ನು ಮದುವೆಯಾಗಲು ವಿವಾಹಕ್ಕೂ ಮೊದಲು ಅಥವಾ ನಂತರ ತಾನು ಮತಾಂತರವಾಗಿದ್ದರೆ ಅಥವಾ ಮತಾಂತರಗೊಳಿಸಿದ್ದರೆ ಅದನ್ನು ಕೌಟುಂಬಿಕ ನ್ಯಾಯಾಲಯ ಅನೂರ್ಜಿತವೆಂದು ಘೋಷಿಸತಕ್ಕದ್ದು ಅಥವಾ ಕೌಟುಂಬಿಕ ನ್ಯಾಯಾಲಯ ಸ್ಥಾಪಿತವಾಗದೇ ಇದ್ದರೆ ಸಂಬಂಧಪಟ್ಟ ನ್ಯಾಯಾಲಯ ಈ ಕ್ರಮ ಕೈಗೊಳ್ಳತಕ್ಕದ್ದು ಎಂದು ಕಾಯಿದೆಯ ಸೆಕ್ಷನ್‌ 6 ತಿಳಿಸುತ್ತದೆ.

ಸೆಕ್ಷನ್‌ 8ರ ಪ್ರಕಾರ ತನ್ನ ಅಥವಾ ತನ್ನ ಸಂಗಾತಿಯ ಮತಾಂತರಕ್ಕೆ ಮುಂದಾಗಲು ಇಚ್ಛಿಸುವವರು ಕನಿಷ್ಠ ಅರವತ್ತು ದಿನಗಳ ಮೊದಲು ಶೆಡ್ಯೂಲ್‌ Iರಲ್ಲಿ ನಿಗದಿಪಡಿಸಿರುವ ರೂಪದಲ್ಲಿ ಜಿಲ್ಲಾಧಿಕಾರಿ ಅಥವಾ ಜಿಲ್ಲಾಧಿಕಾರಿಯಿಂದ ವಿಶೇಷ ಅಧಿಕಾರ ಪಡೆದ ಹೆಚ್ಚುವರಿ ಜಿಲ್ಲಾಧಿಕಾರಿಗೆ ತಾನು ಯಾವುದೇ ಒತ್ತಡ, ಒತ್ತಾಯ ಅನಗತ್ಯ ಪ್ರಭಾವ ಅಥವಾ ಪ್ರಲೋಭನೆಗೆ ಒಳಗಾಗದೆ ಸ್ವಇಚ್ಛೆಯಿಂದ ಮತಾಂತರಗೊಳ್ಳುತ್ತಿರುವುದಾಗಿ ಮಾಹಿತಿ ನೀಡಬೇಕು.

ಸೆಕ್ಷನ್‌ 9 ಮತಾಂತರದ ನಂತರದ ವಿಧಾನವನ್ನು ತಿಳಿಸುತ್ತದೆ. ಶೆಡ್ಯೂಲ್‌ IIIರಲ್ಲಿ ವಿವರಿಸಿರುವಂತೆ ಮತಾಂತರಗೊಂಡ ವ್ಯಕ್ತಿ ಮತಾಂತರವಾದ ದಿನದಿಂದ 60 ದಿನಗಳ ಒಳಗಾಗಿ ತಾನು ವಾಸಿಸುವ ಜಿಲ್ಲೆಯ ಜಿಲ್ಲಾಧಿಕಾರಿಗೆ ಘೋಷಣೆಯನ್ನು ಕಳುಹಿಸಬೇಕು.

Related Stories

No stories found.
Kannada Bar & Bench
kannada.barandbench.com