ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್ ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಮನವಿಯನ್ನು ಶುಕ್ರವಾರ ಅಲಾಹಾಬಾದ್ ಹೈಕೋರ್ಟ್‌ನ ಲಖನೌ ಪೀಠವು ವಜಾಗೊಳಿಸಿದೆ.
ಅಜಂ ಖಾನ್ ಈಗಾಗಲೇ ಬಂಧನದಲ್ಲಿದ್ದಾರೆ. ಅವರ ವಿರುದ್ಧ ಬಿ-ವಾರಂಟ್ ಹೊರಡಿಸಲಾಗಿದೆ ಎಂದು ನ್ಯಾಯಮೂರ್ತಿ ರಾಜೀವ್ ಸಿಂಗ್ ನೇತೃತ್ವದ ಏಕಸದಸ್ಯ ಪೀಠವು ಮನವಿ ತಿರಸ್ಕರಿಸಿತು.
“ಸದ್ಯದ ವಸ್ತುಸ್ಥಿತಿ ಮತ್ತು ಚರ್ಚೆಯನ್ನು ಆಧರಿಸಿ ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್‌ಪಿಸಿ ಸೆಕ್ಷನ್ 267(1)ರ ಅಡಿ ಸಮರ್ಥ ನ್ಯಾಯಾಲಯವು ಬಿ ವಾರೆಂಟ್ ಜಾರಿಗೊಳಿಸಿರುವುದರಿಂದ ಅರ್ಜಿದಾರರು ಕಸ್ಟಡಿಯಲ್ಲಿರುವುದು ಸೂಕ್ತ. ಹೆಚ್ಚುವರಿ ಸರ್ಕಾರಿ ವಕೀಲರು ಪ್ರಾಥಮಿಕ ತಕರಾರು ಎತ್ತಿದ್ದಾರೆ. ಹೀಗಾಗಿ, ಸಿಆರ್‌ಪಿಸಿ ಸೆಕ್ಷನ್ 438ರ ಅಡಿ ನಿರೀಕ್ಷಣಾ ಜಾಮೀನು ಮನವಿಯು ನಿರ್ವಹಣೆಗೆ ಅರ್ಹವಾಗಿಲ್ಲ. ಆದ್ದರಿಂದ ಮನವಿಯನ್ನು ವಜಾಗೊಳಿಸಿದ್ದೇವೆ” ಎಂದು ನ್ಯಾ. ಸಿಂಗ್ ಹೇಳಿದ್ದಾರೆ.
ಖಾನ್ ಅವರ ವಿರುದ್ದ ಐಪಿಸಿ ಸೆಕ್ಷನ್‌ಗಳಾದ 409 (ನಂಬಿಕೆ ದ್ರೋಹ), 420 (ವಂಚನೆ), 120ಬಿ (ಕ್ರಿಮಿನಲ್ ಪಿತೂರಿ), 201 (ಸಾಕ್ಷ್ಯ ನಾಶ) ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ ಸೆಕ್ಷನ್ 13(1)(ಡಿ)ರ (ಸಾರ್ವಜನಿಕ ಸೇವಕರಿಂದ ಅಪರಾಧ ದುರ್ನಡತೆ) ಅಡಿ ದೂರು ದಾಖಲಿಸಲಾಗಿದೆ.
ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಖಾನ್ ಅವರು ಸೀತಾಪುರ ಜಿಲ್ಲಾ ಕಾರಾಗೃಹದಲ್ಲಿದ್ದಾರೆ. ಹೀಗಾಗಿ, ಅರ್ಜಿ ನಿರ್ವಹಣೆ ಕುರಿತು ಸರ್ಕಾರಿ ವಕೀಲರು ನಿರೀಕ್ಷಣಾ ಜಾಮೀನಿಗೆ ವಿರೋಧಿಸಿದರು. ಕಳೆದ ವರ್ಷದ ಏಪ್ರಿಲ್‌ನಲ್ಲಿ ಖಾನ್ ವಿರುದ್ಧ ಬಿ-ವಾರೆಂಟ್ ಜಾರಿಗೊಳಿಸಲಾಗಿದೆ.
ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಐಬಿ ಸಿಂಗ್ ಅವರು ಅಜಂ ಖಾನ್ ಪರ ವಾದಿಸಿದರೆ ಹೆಚ್ಚುವರಿ ಸರ್ಕಾರಿ ವಕೀಲ ಸಂತೋಷ್ ಕುಮಾರ್ ಮಿಶ್ರಾ ಅವರು ಸರ್ಕಾರವನ್ನು ಪ್ರತಿನಿಧಿಸಿದ್ದರು