
ಅಕ್ರಮ ಹಣ ಹೊಂದಿದ್ದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಹೆಸರು ಕೇಳಿಬಂದಿರುವ ನ್ಯಾ. ಯಶವಂತ್ ವರ್ಮಾ ಅವರನ್ನು ಇತ್ತೀಚೆಗೆ ದೆಹಲಿ ಹೈಕೋರ್ಟ್‌ನಿಂದ ಅಲಾಹಾಬಾದ್ ಉಚ್ಚ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಅಲಾಹಾಬಾದ್ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ಪಿಐಎಲ್‌ನಲ್ಲಿ ಹುರುಳಿಲ್ಲ ಎಂದು ನ್ಯಾಯಮೂರ್ತಿಗಳಾದ ಅಟ್ಟೌ ರೆಹಮಾನ್ ಮಸೂದಿ ಮತ್ತು ಅಜಯ್ ಕುಮಾರ್ ಶ್ರೀವಾಸ್ತವ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು. ಅಂತಹ ಪ್ರಕರಣಗಳಲ್ಲಿ ನ್ಯಾಯಾಂಗ ಹಸ್ತಕ್ಷೇಪ ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
"ನ್ಯಾಯಾಧೀಶರ ವರ್ಗಾವಣೆ, ಪ್ರಮಾಣ ವಚನ ಸ್ವೀಕಾರ ಮತ್ತು ಕಾರ್ಯನಿರ್ವಹಣೆಯು ಭಾರತದ ಸಂವಿಧಾನದ 217 (1) (ಬಿ) ವಿಧಿಯೊಂದಿಗೆ ಸಹವಾಚನ ಮಾಡಲಾದ 124 (4) ವಿಧಿಯಡಿ ರಕ್ಷಿಸಲ್ಪಟ್ಟ ಅಧಿಕಾರಾವಧಿಯ ಸಹವರ್ತಿಗಳಾಗಿವೆ. ರಿಟ್ ಅರ್ಜಿಯಲ್ಲಿ ಆಕ್ಷೇಪಿಸಲಾದ ಅಧಿಸೂಚನೆಯು ಕಾನೂನಿನ ದೃಷ್ಟಿಯಲ್ಲಿ ಉತ್ತಮವಾಗಿದ್ದರೆ, ಕಾರ್ಯವಿಧಾನವನ್ನು ಪಾಲಿಸಿದ್ದರೆ, ಸಂಬಂಧಿತ ಭಾಗಕ್ಕೆ ಸವಾಲು ಹಾಕದಂತೆ ಸಮಾನವಾಗಿ ರಕ್ಷಿಸಲಾಗುತ್ತದೆ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನ್ಯಾಯಾಧೀಶರ ಅಧಿಕಾರಾವಧಿಯ ರಕ್ಷಣೆ ಎಂಬುದು ಪ್ರಭುತ್ವದ ಅಂಗವಾಗಿರುವ ನ್ಯಾಯಾಂಗಕ್ಕೆ ಇರುವ ಸ್ವಾತಂತ್ರ್ಯದ ಭಾಗವಾಗಿದೆ ಎಂದು ಕೂಡ ನ್ಯಾಯಾಲಯ ಹೇಳಿದೆ.
ಮಾರ್ಚ್ 14ರ ಸಂಜೆ ನ್ಯಾ. ವರ್ಮಾ ಅವರ ಮನೆಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿತ್ತು. ಬೆಂಕಿ ನಂದಿಸಲು ಹೋದ ಅಗ್ನಿಶಾಮಕ ಸಿಬ್ಬಂದಿಗೆ ಅವರ ಮನೆಯಲ್ಲಿ ಸುಟ್ಟು ಕರಕಲಾದ ಅಪಾರ ಪ್ರಮಾಣದ ನಗದು ದೊರೆತಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಆನಂತರ ನ್ಯಾ. ವರ್ಮಾ ಅವರನ್ನು ಅಲಾಹಾಬಾದ್ ಹೈಕೋರ್ಟ್‌ಗೆ ವರ್ಗ ಮಾಡಿ ಸುಪ್ರೀಂ ಕೋರ್ಟ್ ಕೊಲಿಜಿಯಂ ಆದೇಶಿಸಿತ್ತು.
ನ್ಯಾ. ವರ್ಮಾ ವರ್ಗಾವಣೆ ವಿರೋಧಿಸಿ ವಕೀಲ ವಿಕಾಶ್ ಚತುರ್ವೇದಿ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು . ನ್ಯಾಯಮೂರ್ತಿ ವರ್ಮಾ ವರ್ಗಾವಣೆ ಮತ್ತು ಪ್ರಸ್ತಾವಿತ ಪ್ರಮಾಣ ವಚನ ಸ್ವೀಕಾರ ಸಂವಿಧಾನವನ್ನು ಉಲ್ಲಂಘಿಸುತ್ತದೆ ಎಂದು ಅವರು ದೂರಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಅಂತಿಮವಾಗಿ ಅವರ ಅರ್ಜಿಯನ್ನು ವಜಾಗೊಳಿಸಿದೆ.