Mohammed Zubair, Yati Narsinghanand and Allahabad High Court
Mohammed Zubair, Yati Narsinghanand and Allahabad High Court

ಎಫ್‌ಐಆರ್‌ ರದ್ದುಪಡಿಸಲು ಕೋರಿಕೆ: ಪತ್ರಕರ್ತ ಜುಬೈರ್ ಮನವಿಯ ತೀರ್ಪು ಕಾಯ್ದಿರಿಸಿದ ಅಲಾಹಾಬಾದ್ ಹೈಕೋರ್ಟ್

ತೀರ್ಪು ಕಾಯ್ದಿರಿಸಿದ ಪೀಠ ಡಿಸೆಂಬರ್ 2024ರಲ್ಲಿ ಜುಬೈರ್ ಅವರಿಗೆ ಬಂಧನದಿಂದ ನೀಡಿದ್ದ ಮಧ್ಯಂತರ ರಕ್ಷಣೆಯನ್ನು ವಿಸ್ತರಿಸಿದೆ.
Published on

ಗಾಜಿಯಾಬಾದ್‌ನ ದಾಸ್ನಾ ದೇವಿ ದೇವಸ್ಥಾನದ ಅರ್ಚಕ ಯತಿ ನರಸಿಂಹಾನಂದ ಅವರನ್ನು ಟೀಕಿಸಿದ್ದಕ್ಕಾಗಿ ಉತ್ತರ ಪ್ರದೇಶ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚುವ ಜಾಲತಾಣ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ಅವರು ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಅಲಾಹಾಬಾದ್ ಹೈಕೋರ್ಟ್ ಸೋಮವಾರ ಕಾಯ್ದಿರಿಸಿದೆ.

ಎಫ್‌ಐಆರ್‌ ಅನ್ನು ಭಾಗಶಃ ರದ್ದುಗೊಳಿಸಲಾಗದು. ಯಾವುದೇ ಸಂಜ್ಞೇಯ ಅಪರಾಧ ಸಾಬೀತಾದರೆ ನ್ಯಾಯಾಲಯ ಅರ್ಜಿ ಪರಿಗಣಿಸುವಂತಿಲ್ಲ ಎಂದು ಸರ್ಕಾರ ವಾದಿಸಿತು.

Also Read
ಯತಿ ನರಸಿಂಹಾನಂದ ಬೆಂಬಲಿಗರ ಮೊಕದ್ದಮೆ: ಪತ್ರಕರ್ತ ಜುಬೇರ್‌ಗೆ ಬಂಧನದಿಂದ ರಕ್ಷಣೆ ನೀಡಿದ ಅಲಾಹಾಬಾದ್ ಹೈಕೋರ್ಟ್

ಬಳಿಕ ತೀರ್ಪು ಕಾಯ್ದಿರಿಸಿದ ನ್ಯಾಯಮೂರ್ತಿಗಳಾದ ಸಿದ್ಧಾರ್ಥ ವರ್ಮಾ ಮತ್ತು ಯೋಗೇಂದ್ರ ಕುಮಾರ್ ಶ್ರೀವಾಸ್ತವ ಅವರಿದ್ದ ಪೀಠ ಡಿಸೆಂಬರ್ 2024ರಲ್ಲಿ ಜುಬೈರ್ ಅವರಿಗೆ ಬಂಧನದಿಂದ  ನೀಡಿದ್ದ ಮಧ್ಯಂತರ ರಕ್ಷಣೆಯನ್ನು ವಿಸ್ತರಿಸಿತು.

ಯತಿ ನರಸಿಂಹಾನಂದರ ಭಾಷಣ "ಅವಹೇಳನಕಾರಿ ಮತ್ತು ದ್ವೇಷಪೂರಿತ" ಎಂದು ಜುಬೈರ್‌ ಮಾಡಿದ್ದ ಟ್ವೀಟ್‌ ಹಿನ್ನೆಲೆಯಲ್ಲಿ ಅವರ ವಿರುದ್ಧ ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡಿದ್ದಾರೆ ಎಂದು ಆರೋಪಿಸಿ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 152 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಅನೇಕ ಸಂದರ್ಭಗಳಲ್ಲಿ ದ್ವೇಷ ಭಾಷಣ ಮಾಡಿರುವ ಆರೋಪ ಹೊತ್ತಿರುವ ನರಸಿಂಹಾನಂದ ಅವರು ಸೆಪ್ಟೆಂಬರ್ 29 ರಂದು ಸಾರ್ವಜನಿಕ ಭಾಷಣವೊಂದರಲ್ಲಿ ಪ್ರವಾದಿ ಮುಹಮ್ಮದ್ ವಿರುದ್ಧ ಟೀಕೆಗಳನ್ನು ಮಾಡಿದ್ದರು. ಭಾಷಣವನ್ನು ಅವಹೇಳನಕರ ಮತ್ತು ದ್ವೇಷಪೂರಿತ ಎಂದು ಜುಬೇರ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಜರೆದಿದ್ದರು.

ನಂತರ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ನರಸಿಂಹಾನಂದ್ ವಿರುದ್ಧ ಕೋಮು ದ್ವೇಷಕ್ಕೆ ಕುಮ್ಮಕ್ಕು ನೀಡಿದ ಮಾತ್ತು ಧಾರ್ಮಿಕ ಭಾವನೆಗೆ ಘಾಸಿ ತಂದ ಆರೋಪದಡಿ ಎಫ್‌ಐಆರ್‌ ದಾಖಲಿಸಲಾಗಿತ್ತು. ನರಸಿಂಹಾನಂದರನ್ನು ಬಂಧಿಸದಿದ್ದರೂ ಅವರನ್ನು ಪೊಲೀಸರು ಕರೆದೊಯ್ದಿದ್ದರು ಎಂದು ಅವರ ಅನುಯಾಯಿಗಳು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ದಾಸ್ನಾದೇವಿ ದೇವಸ್ಥಾನದಲ್ಲಿ ಪ್ರತಿಭಟನೆ ನಡೆದಿತ್ತು. ಈ ಮಧ್ಯೆ ಜುಬೈರ್‌ ಟ್ವೀಟ್‌ ಮಾಡಿದ್ದರು.

Also Read
ಆಲ್ಟ್‌ನ್ಯೂಸ್‌ನ ಜುಬೈರ್‌ಗೆ 'ಜಿಹಾದಿ' ಹಣೆಪಟ್ಟಿ: ಕ್ಷಮೆಯಾಚಿಸಲು ವ್ಯಕ್ತಿಯೊಬ್ಬರಿಗೆ ಹೈಕೋರ್ಟ್ ಆದೇಶ

ಯತಿ ನರಸಿಂಹಾನಂದ ಸರಸ್ವತಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಉದಿತಾ ತ್ಯಾಗಿ ಅವರು ಸಲ್ಲಿಸಿದ ದೂರಿನ ಮೇರೆಗೆ ಜುಬೇರ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು. ತನ್ನ ವಿರುದ್ಧ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವ ಉದ್ದೇಶದಿಂದ ಅಕ್ಟೋಬರ್ 3 ರಂದು ಜುಬೇರ್ ನರಸಿಂಹಾನಂದ ಅವರ ಹಳೆಯ ವಿಡಿಯೋ ಕ್ಲಿಪ್  ಹಂಚಿಕೊಂಡಿದ್ದಾರೆ ಎಂದು ತ್ಯಾಗಿ ಆರೋಪಿಸಿದ್ದರು.

ನರಸಿಂಹಾನಂದ ಅವರ ಕ್ರಿಮಿನಲ್ ಚಟುವಟಿಕೆಗಳನ್ನು ಬಹಿರಂಗಪಡಿಸದಂತೆ ತಡೆಯುವ ದುರುದ್ದೇಶಪೂರಿತ ಯತ್ನವಾಗಿ ತಮ್ಮ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಜುಬೈರ್ ಹೇಳಿದ್ದರು.

Kannada Bar & Bench
kannada.barandbench.com