ಉತ್ತರಪ್ರದೇಶದಲ್ಲಿ ಜಾರಿಗೆ ತರಲಾದ 2021ರ ಕಾನೂನುಬಾಹಿರ ಮತಾಂತರ ನಿಷೇಧ ಕಾಯಿದೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಅಲಾಹಾಬಾದ್ ಹೈಕೋರ್ಟ್ ನೋಟಿಸ್ ನೀಡಿದೆ. (ಆನಂದ್ ಮಾಳವೀಯ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ).
ಕಾಯಿದೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಇತರೆ ಅರ್ಜಿಗಳೊಂದಿಗೆ ಈ ಮನವಿಯನ್ನೂ ಸೇರಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮುನೀಶ್ವರ್ ನಾಥ್ ಭಂಡಾರಿ ನೇತೃತ್ವದ ಪೀಠ ಮೂರು ವಾರಗಳ ಬಳಿಕ ವಿಚಾರಣೆ ನಡೆಸುವುದಾಗಿ ತಿಳಿಸಿತು.
ಅರ್ಜಿದಾರ ಆನಂದ್ ಮಾಳವೀಯ ಅವರು ವಕೀಲ ಶಾದನ್ ಫರಾಸತ್ ಮತ್ತು ತಲ್ಹಾ ಅಬ್ದುಲ್ ರೆಹಮಾನ್ ಅವರ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಮಾಳವೀಯ ಅವರು ನಿವೃತ್ತ ಸರ್ಕಾರಿ ಉದ್ಯೋಗಿಯಾಗಿದ್ದು, ಭಾರತೀಯ ಸರ್ಕಾರದ ರಾಷ್ಟ್ರೀಯ ಸರ್ವೇಕ್ಷಣಾ ಕಚೇರಿಯಲ್ಲಿ ಹಿರಿಯ ಸಂಖ್ಯಾಶಾಸ್ತ್ರ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಂವಿಧಾನದ ಜಾತ್ಯತೀತ ಸ್ವರೂಪಕ್ಕೆ ಕಾನೂನು ವಿರುದ್ಧವಾಗಿದ್ದು ಆಯ್ಕೆಯ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂದು ಅವರು ಅರ್ಜಿಯಲ್ಲಿ ವಿವರಿಸಿದ್ದಾರೆ.
ಕಾನೂನು ಮೂಲಭೂತವಾಗಿ ಈಗಿನ ಸಾಂವಿಧಾನಿಕ ನಿಲುವನ್ನು ತಿರಸ್ಕರಿಸಲು ಯತ್ನಿಸುತ್ತದೆ ಮತ್ತು ಮದುವೆಗೂ ಮುನ್ನ ಮತ್ತು ತಾರ್ಕಿಕ ವಿಸ್ತರಣೆಯಾಗಿ ಮಗುವನ್ನು ಪಡೆಯಲು ಸರ್ಕಾರದಿಂದ ʼಅನುಮತಿʼ ಅಗತ್ಯ ಎಂದು ಅನ್ಯ ಧರ್ಮೀಯ ವ್ಯಕ್ತಿಗಳನ್ನು ಒತ್ತಾಯಿಸುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಕಾಯಿದೆ ಕೋಮುದಳ್ಳುರಿಯನ್ನು ಹೆಚ್ಚಿಸುವ ಪರೋಕ್ಷ ಯತ್ನವಾಗಿದ್ದು ಸಮಾಜವನ್ನು ಜನಾಂಗೀಯ ಮತ್ತು ಧರ್ಮದ ಆಧಾರದ ಮೇಲೆ ವಿಭಜಿಸಲು ಮುಂದಾಗುತ್ತದೆ ಎಂದು ಮನವಿ ವಿವರಿಸಿದೆ. ಅಕ್ರಮ ಅಂತರಧರ್ಮೀಯ ವಿವಾಹಗಳನ್ನು ಪತ್ತೆ ಹಚ್ಚಲೆಂದು ಕಾನ್‌ಪುರದಲ್ಲಿ ರಚಿಸಲಾದ ವಿಶೇಷ ತನಿಖಾ ತಂಡಕ್ಕೆ ಲವ್ ಜಿಹಾದ್‌ನ ಯಾವುದೇ ಸಂಚು ಕಂಡುಬರಲಿಲ್ಲ ಎಂದು ಕೂಡ ಅರ್ಜಿ ಹೇಳಿದೆ.
ಕಾಯಿದೆಯನ್ನು ಪ್ರಶ್ನಿಸಿ ಈವರೆಗೆ ಸಲ್ಲಿಸಲಾದ ಅರ್ಜಿಗಳೊಂದಿಗೆ ಅಕ್ಟೋಬರ್ 5 ರಂದು ಈ ಪ್ರಕರಣವನ್ನು ನ್ಯಾಯಾಲಯ ವಿಚಾರಣೆ ನಡೆಸಲು ತೀರ್ಮಾನಿಸಿದೆ.