Uttar Pradesh Police with Allahabad High Court
Uttar Pradesh Police with Allahabad High Court

ಎನ್‌ಕೌಂಟರ್‌ ಎಂದು ಬಿಂಬಿಸುವ ಪ್ರಕರಣಗಳ ಹೆಚ್ಚಳ: ಉ. ಪ್ರದೇಶ ಪೊಲೀಸರಿಗೆ ಅಲಾಹಾಬಾದ್ ಹೈಕೋರ್ಟ್ ತೀವ್ರ ತರಾಟೆ

ಆರೋಪಿತರ ಕಾಲಿಗೆ ಗುಂಡು ಹಾರಿಸುವ ಪೊಲೀಸ್ ಎನ್‌ಕೌಂಟರ್‌ಗಳ ಪದ್ಧತಿ ಇತ್ತೀಚೆಗೆ ರೂಢಿಯಂತಾಗಿರುವುದು ಕಾಣುತ್ತಿದೆ ಎಂದು ಜನವರಿ 28ರಂದು ನೀಡಿದ ಆದೇಶದಲ್ಲಿ, ಪೀಠ ಹೇಳಿದೆ.
Published on

ಆರೋಪಿತರ ಕಾಲಿಗೆ ಗುಂಡು ಹಾರಿಸಿ ನಂತರ ಅದನ್ನು ಎನ್‌ಕೌಂಟರ್ ಎಂದು ಬಿಂಬಿಸುವ ಪ್ರಕರಣಗಳು ಹೆಚ್ಚುತ್ತಿರುವ ಸಂಬಂಧ ಉತ್ತರ ಪ್ರದೇಶ ಪೊಲೀಸರ ವಿರುದ್ಧ ಅಲಾಹಾಬಾದ್‌ ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ [ರಾಜು ಅಲಿಯಾಸ್‌ ರಾಜಕುಮಾರ್‌ ಮತ್ತು ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ] .

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಮತ್ತು ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಅವರು ಜನವರಿ 30 ರ ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ತನ್ನ ಮುಂದೆ ಹಾಜರಾಗಬೇಕು ಎಂದು ನ್ಯಾಯಮೂರ್ತಿ ಅರುಣ್ ಕುಮಾರ್ ಸಿಂಗ್ ದೇಶ್ವಾಲ್ ಅವರಿದ್ದ ಪೀಠ ಜನವರಿ 28 ರಂದು ತಾಕೀತು ಮಾಡಿದೆ.

Also Read
ಸಿದ್ಧತೆ ಮಾಡಿಕೊಳ್ಳದೆ ನ್ಯಾಯಾಲಯಕ್ಕೆ ಹಾಜರಾಗುವ ಸರ್ಕಾರದ ವಕೀಲರು ವಿಚಾರಣೆ ವೇಳೆ ಬಾಯಿ ಬಿಡಲ್ಲ: ಸಿಎಂ ಅಸಮಾಧಾನ

ಆರೋಪಿತರ ಕಾಲಿಗೆ ಅಥವಾ ಇತರೆ ರೀತಿಯಲ್ಲಿ ಗುಂಡು ಹಾರಿಸಲು ಪೊಲೀಸ್ ಅಧಿಕಾರಿಗಳಿಗೆ ಮೌಖಿಕವಾಗಿಯೇ ಆಗಲಿ ಅಥವಾ ಲಿಖಿತವಾಗಿಯೇ ಆಗಲಿ ನಿರ್ದೇಶನ ನೀಡಲಾಗಿದೆಯೇ ಎಂಬುದನ್ನು ಡಿಜಿಪಿ ಮತ್ತು ಗೃಹ ಕಾರ್ಯದರ್ಶಿಗಳು ನ್ಯಾಯಾಲಯಕ್ಕೆ ತಿಳಿಸಬೇಕೆಂದು ಸೂಚಿಸಲಾಗಿದೆ.

ಮೇಲಧಿಕಾರಿಗಳನ್ನು ಮೆಚ್ಚಿಸಲು ಅಥವಾ ಆರೋಪಿತರಿಗೆ ಶಿಕ್ಷೆಯ ಹೆಸರಿನಲ್ಲಿ “ಪಾಠ ಕಲಿಸಲು” ಹೀಗೆ ಮಾಡಲಾಗುತ್ತಿದೆ ಎಂಬುದು ಪೀಠ ಬೇಸರ ವ್ಯಕ್ತಪಡಿಸಿದೆ.

“ಇಂತಹ ವರ್ತನೆ ಸಂಪೂರ್ಣ ಅಸ್ವೀಕಾರಾರ್ಹ. ಶಿಕ್ಷೆ ವಿಧಿಸುವ ಅಧಿಕಾರ ಸಂಪೂರ್ಣವಾಗಿ ನ್ಯಾಯಾಂಗಕ್ಕೆ ಸೀಮಿತವಾಗಿದ್ದು, ಪೊಲೀಸರಿಗೆ ಅಲ್ಲ. ಕಾನೂನಾತ್ಮಕ ಆಡಳಿತದ ಮೂಲಕ ನಡೆಯುವ ಪ್ರಜಾಸತ್ತಾತ್ಮಕ ರಾಷ್ಟ್ರವಾಗಿರುವ ಭಾರತದಲ್ಲಿ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳ ಕರ್ತವ್ಯಗಳು ಸ್ಪಷ್ಟವಾಗಿ ನಿರ್ದಿಷ್ಟಗೊಂಡಿವೆ. ಪೊಲೀಸ್ ಇಲಾಖೆ ನ್ಯಾಯಾಂಗ ಕ್ಷೇತ್ರವನ್ನು ಅತಿಕ್ರಮಿಸುವುದನ್ನು ಯಾವುದೇ ರೀತಿಯಲ್ಲಿ ಸಹಿಸಲಾಗದು” ಎಂದು ನ್ಯಾಯಾಲಯ ಗುಡುಗಿದೆ.

ಕಳ್ಳತನದಂತಹ ಸಣ್ಣ ಪ್ರಕರಣಗಳಲ್ಲಿ ಆರೋಪಿತರಾದವರ ಮೇಲೂ ಮನಸೋಇಚ್ಛೆಯಾಗಿ ಗುಂಡು ಹಾರಿಸುತ್ತಿರುವ ಪ್ರಕರಣಗಳು ಮತ್ತೆ ಮತ್ತೆ ಕಂಡುಬರುತ್ತಿವೆ ಎಂದು ಅದು ಹೇಳಿದೆ.

ಪ್ರತ್ಯೇಕ ಎನ್‌ಕೌಂಟರ್‌ ಪ್ರಕರಣಗಳಲ್ಲಿ ಗಾಯಗೊಂಡಿದ್ದ ಮೂವರು ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನ್ಯಾಯಾಲಯ ಈ ವಿಚಾರ ಹಂಚಿಕೊಂಡಿತು. ಗಮನಾರ್ಹ ಅಂಶವೆಂದರೆ, ಯಾವುದೇ ಪೊಲೀಸ್‌ ಅಧಿಕಾರಿ ಗಾಯಗೊಳ್ಳದೇ ಇರುವಾಗ ಪೊಲೀಸರು ಶಸ್ತ್ರಾಸ್ತ್ರ ಬಳಸುವ ಅಗತ್ಯತೆ ಮತ್ತು ಸಮಂಜಸತೆಯಾದರೂ ಏನಿತ್ತು ಎಂದು ಅದು ಕೇಳಿದೆ.

Also Read
'ಬಂಗಾಳಿ ಮಾತನಾಡಿದ ಮಾತ್ರಕ್ಕೆ ಬಾಂಗ್ಲಾದೇಶಿ ಎಂದು ಸರ್ಕಾರ ಭಾವಿಸಬಹುದೇ?' ಸುಪ್ರೀಂ ಕೋರ್ಟ್ ಪ್ರಶ್ನೆ

ಅಲ್ಲದೆ, ಪ್ರಕರಣವೊಂದರಲ್ಲಿ ಎಫ್‌ಐಆರ್ ದಾಖಲಾಗಿದ್ದರೂ, ಗಾಯಗೊಂಡ ಆರೋಪಿತನ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಅಥವಾ ವೈದ್ಯಾಧಿಕಾರಿಯ ಮುಂದೆ ದಾಖಲಿಸಿಲ್ಲ ಎಂಬುದನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಅಲ್ಲದೆ ಪಿಯುಸಿಎಲ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿಗಳನ್ನು ಸರ್ಕಾರ ಪಾಲಿಸಿಲ್ಲ ಎಂದು ಹೈಕೋರ್ಟ್‌ ಛೀಮಾರಿ ಹಾಕಿದೆ.

ಈ ಹಿನ್ನೆಲೆಯಲ್ಲಿ, ಪೊಲೀಸ್ ಎನ್‌ಕೌಂಟರ್ ಪ್ರಕರಣಗಳಲ್ಲಿ ಎಫ್‌ಐಆರ್ ನೋಂದಣಿ, ಗಾಯಗೊಂಡವರ ಹೇಳಿಕೆ ದಾಖಲಿಸುವುದು ಹಾಗೂ ಹಿರಿಯ ಅಧಿಕಾರಿ ತನಿಖೆ ನಡೆಸುವ ಕುರಿತು ಸುಪ್ರೀಂ ಕೋರ್ಟ್‌ ನಿರ್ದೇಶನಗಳನ್ನು ಪಾಲಿಸಲು ಏನಾದರೂ ಸೂಚನೆ ನೀಡಲಾಗಿದೆಯೇ ಎಂಬುದನ್ನು ಡಿಜಿಪಿ ಮತ್ತು ಗೃಹ ಕಾರ್ಯದರ್ಶಿಗಳು ಸ್ಪಷ್ಟಪಡಿಸಬೇಕು ಎಂದು ಅಲಾಹಾಬಾದ್‌ ಹೈಕೋರ್ಟ್‌ ಆದೇಶಿಸಿದೆ.

Kannada Bar & Bench
kannada.barandbench.com