ಪೇಟಿಎಂಗೆ ₹1,081 ಕೋಟಿ ಜಿಎಸ್‌ಟಿ ಬೇಡಿಕೆ ಇರಿಸಿದ ಉತ್ತರ ಪ್ರದೇಶ ಸರ್ಕಾರದ ಅದೇಶಕ್ಕೆ ಅಲಾಹಾಬಾದ್ ಹೈಕೋರ್ಟ್ ತಡೆ

ರಾಜ್ಯದ ಹೊರಗೆ ಇರುವವರಿಗೆ ಮೊಬೈಲ್ ರಿಚಾರ್ಜ್ ಕೂಪನ್‌ಗಳು ಮತ್ತು ಡಿಟಿಎಚ್ ರಿಚಾರ್ಜ್ ವೋಚರ್‌ಗಳ ಪೂರೈಕೆಯು ಅಂತಾರಾಜ್ಯ ಪೂರೈಕೆ ಎಂದು ವ್ಯಾಖ್ಯಾನಿಸಲ್ಪಡುತ್ತದೆಯೋ ಅಥವಾ ರಾಜ್ಯದೊಳಗಿನ ಪೂರೈಕೆ ಎಂದೋ ಎಂಬ ಪ್ರಶ್ನೆ ಹುಟ್ಟುಹಾಕಿದೆ.
PAYTM, Allahabad High Court
PAYTM, Allahabad High Court
Published on

ಪಾವತಿ ಮತ್ತು ಹಣಕಾಸು ಸೇವಾ ಕಂಪೆನಿಯಾದ ಪೇಟಿಎಂಗೆ ₹1,081 ಕೋಟಿ ಸರಕು ಮತ್ತು ಸೇವಾ ತೆರಿಗೆ ವಿಧಿಸಬೇಕು ಎಂಬ ಬೇಡಿಕೆಗೆ ಅಲಾಹಾಹಾದ್‌ ಹೈಕೋರ್ಟ್‌ ಇತ್ತೀಚೆಗೆ ತಡೆ ನೀಡಿದೆ.

ಪೇಟಿಎಂನ ಮೂಲ ಕಂಪನಿಯಾದ ಒನ್ 97 ಕಮ್ಯುನಿಕೇಷನ್ಸ್ ಲಿಮಿಟೆಡ್ ಸಲ್ಲಿಸಿದ ಮನವಿಯ ಮೇರೆಗೆ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ನ್ಯಾಯಮೂರ್ತಿ ಜೆ ಜೆ ಮುನೀರ್ ಅವರಿದ್ದ ಪೀಠ ಈ ತಿಂಗಳ ಆರಂಭದಲ್ಲಿ ಆದೇಶ ನೀಡಿದೆ.

ರಾಜ್ಯದ ಹೊರಗೆ ಇರುವವರಿಗೆ ಮೊಬೈಲ್‌ ರಿಚಾರ್ಜ್ ಕೂಪನ್‌ಗಳು ಮತ್ತು ಡೈರೆಕ್ಟ್ ಟು ಹೋಮ್ (ಡಿಟಿಎಚ್‌) ರಿಚಾರ್ಜ್ ವೋಚರ್‌ಗಳ ಪೂರೈಕೆ ಮಾಡುವುದು ಅಂತಾರಾಜ್ಯ ವ್ಯಾಪ್ತಿಗೆ ಬರುತ್ತದೆಯೇ ಅಥವಾ ರಾಜ್ಯದೊಳಗಿನ ಪೂರೈಕೆಯಾಗುತ್ತದೆಯೇ ಎಂಬ ಪ್ರಶ್ನೆಯನ್ನು ಪ್ರಕರಣ ಹುಟ್ಟುಹಾಕಿದೆ.

ಅಂತಾರಾಜ್ಯ ಪೂರೈಕೆ ಮಾಡಿದರೆ ಸಮಗ್ರ ಸರಕು ಮತ್ತು ಸೇವಾ ತೆರಿಗೆ (ಐಜಿಎಸ್‌ಟಿ) ಅನ್ವಯವಾಗುತ್ತದೆ. ಇದನ್ನು ಕೇಂದ್ರ ಸರ್ಕಾರ ಸಂಗ್ರಹಿಸಿ ವಿತರಿಸುತ್ತದೆ. ಮತ್ತೊಂದೆಡೆ, ರಾಜ್ಯದೊಳಗಿನ ಪೂರೈಕೆಯು ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್‌ಟಿ) ಹಾಗೂ ರಾಜ್ಯ ಸರಕು ಮತ್ತು ಸೇವಾ ತೆರಿಗೆಗೆ  (ಎಸ್‌ಜಿಎಸ್‌ಟಿ)  ಸಂಬಂಧಿಸಿದ್ದಾಗಿದೆ.

Also Read
ನ್ಯಾಯಾಲಯದಲ್ಲಿ ವಕೀಲರಿಂದ ಭಕ್ಷೀಸು ಪಡೆಯಲು ಪೇಟಿಎಂ ಬಳಸಿದ ಜಮಾದಾರ್‌, ಅಮಾನತು ಮಾಡಿದ ಅಲಾಹಾಬಾದ್‌ ಹೈಕೋರ್ಟ್‌

ಈ ಸೇವೆಗಳನ್ನು ಒದಗಿಸುವುದಕ್ಕೆ ಸಂಬಂಧಿಸಿದಂತೆ ಬಾಕಿ ಇದ್ದ ತೆರಿಗೆಯ ಮೊತ್ತವನ್ನು ಈಗಾಗಲೇ  ಉತ್ತರ ಪ್ರದೇಶ ಸರ್ಕಾರಕ್ಕೆ ಅಂತಾರಾಜ್ಯ ಪೂರೈಕೆ ವರ್ಗದಡಿ ಪಾವತಿಸಲಾಗಿದೆ ಎಂದು ಪೇಟಿಎಂ ನ್ಯಾಯಾಲಯಕ್ಕೆ ತಿಳಿಸಿದೆ. ಆದರೆ, ಈ ವಹಿವಾಟುಗಳು ರಾಜ್ಯದೊಳಗಿನ ಸೇವಾ ಪೂರೈಕೆ ವ್ಯಾಪ್ತಿಗೆ ಬರುತ್ತದೆ ಆದ್ದರಿಂದ ತನಗೆ ತೆರಿಗೆ ಪಾವತಿಸುವಂತೆ ರಾಜ್ಯ ಸರ್ಕಾರ ಬೇಡಿಕೆ ಇಟ್ಟಿತು ಎಂದು  ಕಂಪೆನಿ ದೂರಿದೆ.

ಪೇಟಿಎಂ ಈಗಾಗಲೇ ಜಿಎಸ್‌ಟಿ ಪಾವತಿಸಿರುವುದರಿಂದ ಮತ್ತೆ ಜಿಎಸ್‌ಟಿ ಪಾವತಿಸುವುದಕ್ಕೆ ಸಂಬಂಧಿಸಿದಂತೆ ಮಧ್ಯಂತರ ತಡೆ ನೀಡುತ್ತಿರುವುದಾಗಿ ನ್ಯಾಯಾಲಯ ತಿಳಿಸಿತು.

ವ್ಯವಹಾರಕ್ಕೆ ಸಂಬಂಧಿಸಿದ ತೆರಿಗೆ ಮೊತ್ತವನ್ನು ಈಗಾಗಲೇ ಪಾವತಿಸಲಾಗಿದ್ದು ಅದನ್ನು ರಾಜ್ಯದೊಳಗಿನ ಮಾರಾಟ ಎಂದು ಪರಿಗಣಿಸಬೇಕೆ ಅಥವಾ ಅಂತಾರಾಜ್ಯ ಮಾರಾಟವೆಂದೇ ಎಂಬುದಷ್ಟೇ ಈಗಿರುವ ವ್ಯಾಜ್ಯವಾಗಿದೆ. ಡಿ. 3ರ ಆದೇಶದ ಮೂಲಕ ರಾಜ್ಯ ಸರ್ಕಾರವು ಇರಿಸಿದ ಬೇಡಿಕೆ ಆದೇಶಕ್ಕೆ ತಡೆ ನೀಡಲಾಗುತ್ತಿದೆ” ಎಂದು ನ್ಯಾಯಾಲಯ ಹೇಳಿತು.

Kannada Bar & Bench
kannada.barandbench.com