ಲಿವ್- ಇನ್ ಸಂಬಂಧ ಸಾಮಾನ್ಯವಾಗಿರುವ ಪಾಶ್ಚಾತ್ಯ ದೇಶದಲ್ಲಿ ನಾವಿಲ್ಲ: ಅಲಾಹಾಬಾದ್ ಹೈಕೋರ್ಟ್

ತನ್ನ ಸಂಗಾತಿಯನ್ನು ಬಲವಂತವಾಗಿ‌ ಬಂಧಿಸಿಡಲಾಗಿದೆ ಎಂದು ವ್ಯಕ್ತಿಯೊಬ್ಬ ಸಲ್ಲಿಸಿದ್ದ ಮನವಿಯನ್ನು ವಜಾ ಗೊಳಿಸುವಾಗ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು. ಈ ಮನವಿಯು ಮಹಿಳೆಯನ್ನು ದೂಷಿಸುವ 'ತಂತ್ರ'ವಷ್ಟೇ ಎಂದು ನ್ಯಾಯಾಲಯ ನುಡಿಯಿತು.
ಅಲಾಹಾಬಾದ್ ಹೈಕೋರ್ಟ್, ದಂಪತಿ
ಅಲಾಹಾಬಾದ್ ಹೈಕೋರ್ಟ್, ದಂಪತಿ

ಪಾಶ್ಚಾತ್ಯ ದೇಶಗಳಂತೆ ಭಾರತದಲ್ಲಿ ಲಿವ್-ಇನ್ ಸಂಬಂಧಗಳು ಸಾಮಾನ್ಯವಲ್ಲ. ಜನರು ಭಾರತದಲ್ಲಿ ಅನುಸರಿಸುವ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಗೌರವಿಸಬೇಕು ಎಂದು ಅಲಾಹಾಬಾದ್ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ.

ತನ್ನ ಸಂಗಾತಿ, 29 ವರ್ಷದ ಯುವತಿಯನ್ನು ಆಕೆಯ ಕುಟುಂಬ ಬಲವಂತವಾಗಿ ಬಂಧನದಲ್ಲಿರಿಸಿದೆ ಎಂದು ಆರೋಪಿಸಿ 32 ವರ್ಷದ ವ್ಯಕ್ತಿ (ಅರ್ಜಿದಾರರು) ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಜಾಗೊಳಿಸುವಾಗ ನ್ಯಾಯಮೂರ್ತಿ ಶಮೀಮ್ ಅಹ್ಮದ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಘಟನೆ ಬಗ್ಗೆ ಅರ್ಜಿದಾರರರು ನೀಡಿದ ಹೇಳಿಕೆಗಳು ನ್ಯಾಯಾಲಯದ ಮನವೊಲಿಸಲಿಲ್ಲ. ಆತನ ಪರ ವಕೀಲರ ವಾದಗಳನ್ನುಉಲ್ಲೇಖಿಸಿದ ನ್ಯಾಯಾಲಯ ಭಾರತದಲ್ಲಿ ಲಿವ್-ಇನ್ ಸಂಬಂಧಗಳು ಸಾಮಾನ್ಯವಲ್ಲ ಎಂದು ಅಭಿಪ್ರಾಯಪಟ್ಟಿತು.

"ಈ ರೀತಿಯ ಸಂಬಂಧಗಳು ಜನಪ್ರಿಯವಾಗಿರುವ ಪಾಶ್ಚಿಮಾತ್ಯ ದೇಶದಲ್ಲಿ ನಾವು ವಾಸಿಸುತ್ತಿಲ್ಲ ಎಂಬುದು ಈ ನ್ಯಾಯಾಲಯದ ಅಭಿಪ್ರಾಯವಾಗಿದೆ. ದೇಶದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ನಂಬುವ ಜನರಿರುವ ದೇಶದಲ್ಲಿ ನಾವು ವಾಸಿಸುತ್ತಿದ್ದೇವೆ. ಆದ್ದರಿಂದ ನಾವು ನಮ್ಮ ದೇಶದ ಸಂಪ್ರದಾಯಗಳು ಮತ್ತು ಸಂಸ್ಕೃತಿಯನ್ನು ಗೌರವಿಸಬೇಕು " ಎಂದು ಪೀಠ ಜನವರಿ 11ರಂದು ನೀಡಿದ ಆದೇಶದಲ್ಲಿ ತಿಳಿಸಿದೆ.

ಅರ್ಜಿದಾರ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯು ಹುಡುಗಿ ಮತ್ತು ಅವಳ ಕುಟುಂಬಕ್ಕೆ ಸಮಾಜದಲ್ಲಿ ಕೆಟ್ಟ ಹೆಸರು ತರುವ ಉದ್ದೇಶವನ್ನು ಮಾತ್ರ ಹೊಂದಿದೆ ಎಂದು ನ್ಯಾಯಾಲಯ ತೀರ್ಮಾನಿಸಿತು. ಮಹಿಳೆಯ ಕುಟುಂಬಕ್ಕೆ ಒತ್ತಡ ಹೇರಿ ಅವಮಾನ ಉಂಟಾಗುತ್ತದೆ ಎಂದು ಭೀತಿ ತುಂಬಿ ಅವರಿಂದ ರಾಜಿ ಮಾಡಿಸಿಕೊಳ್ಳಲೆಂದಷ್ಟೇ ಅರ್ಜಿ ಸಲ್ಲಿಸಲಾಗಿದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.

"ಈ ರೀತಿಯ ಅರ್ಜಿಯನ್ನು ಪರಿಗಣಿಸಲು ನ್ಯಾಯಾಲಯಕ್ಕೆ ಯಾವುದೇ ಸಮರ್ಥನೆ ತೋರುತ್ತಿಲ್ಲ. ಸಮಾಜದಲ್ಲಿ ವಾಸಿಸುವ ಹುಡುಗಿ ಅಥವಾ ಅವಳ ಕುಟುಂಬ ಸದಸ್ಯರ ವ್ಯಕ್ತಿತ್ವ ದೂಷಿಸುವ ಉದ್ದೇಶದಿಂದ ಭವಿಷ್ಯದಲ್ಲಿ ಇಂತಹ ಅರ್ಜಿ ಸಲ್ಲಿಸುವ ಯಾವುದೇ ವ್ಯಕ್ತಿಯನ್ನು ನಿರಾಶೆಗೊಳಿಸಬೇಕಿದೆ. ನ್ಯಾಯಾಲಯ ಈ ರೀತಿಯ ಅರ್ಜಿ ಪರಿಗಣಿಸಿದರೆ, ಕುಟುಂಬದ ಸದಸ್ಯರು ಮತ್ತು ಹುಡುಗಿಯ ವ್ಯಕ್ತಿತ್ವ ಹಾಗೂ ಪ್ರತಿಷ್ಠೆ ಖಂಡಿತವಾಗಿಯೂ ನಾಶವಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಸಿಲುಕಿದ ಕುಟುಂಬವು ಮುಂದೆ ಆ ಹುಡುಗಿಯ ಮದುವೆ ಮಾಡುವುದು ಕಷ್ಟವಾಗುತ್ತದೆ" ಎಂದು ನ್ಯಾ. ಅಹ್ಮದ್‌ ಅಭಿಪ್ರಾಯಪಟ್ಟರು.

ನ್ಯಾಯಮೂರ್ತಿ ಶಮೀಮ್ ಅಹ್ಮದ್
ನ್ಯಾಯಮೂರ್ತಿ ಶಮೀಮ್ ಅಹ್ಮದ್

ಆದ್ದರಿಂದ ನ್ಯಾಯಾಲಯ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಜಾಗೊಳಿಸಿ ಅರ್ಜಿದಾರನಿಗೆ ರೂ.25,000 ದಂಡ ವಿಧಿಸಿತು.

ತಾನು ಹುಡುಗಿಯೊಂದಿಗೆ 2011ರಿಂದ ಸಂಬಂಧ ಹೊಂದಿದ್ದು ತಾವಿಬ್ಬರೂ ವಿವಾಹವಾಗಲು ಬಯಸಿದರೂ ಆಕೆಯ ಮನೆಯವರು ವಿರೋಧಿಸಿ ಆಕೆಯನ್ನು ಬಂಧನದಲ್ಲಿರಿಸಿದ್ದಾರೆ. ಆಕೆಯನ್ನು ಭೇಟಿಯಾಗದಂತೆ ತಡೆಯುತ್ತಿದ್ದಾರೆ ಎಂದು ಆರೋಪಿಸಿದ್ದ 32 ವರ್ಷದ ಆಶಿಶ್ ಕುಮಾರ್ ಪೂರಕ ಸಾಕ್ಷ್ಯಗಳನ್ನು ಸಲ್ಲಿಸಿದ್ದರು. ಆದರೆ ಸರ್ಕಾರ ಈ ವಾದವನ್ನು ಅಲ್ಲಗಳೆದಿತ್ತು.

ಸರ್ಕಾರದ ವಾದದಲ್ಲಿ ಹುರುಳಿರುವುದನ್ನು ಕಂಡುಕೊಂಡ ನ್ಯಾಯಾಲಯ ಅರ್ಜಿದಾರರು ಹಾಜರುಪಡಿಸಿದ ಛಾಯಾಚಿತ್ರಗಳನ್ನು ತಿರುಚಲಾಗಿದ್ದು ಮಹಿಳೆ ಬರೆದಿದ್ದಾಳೆಂದು ಹೇಳಲಾದ ಪತ್ರ ನಕಲಿ ಎಂದು ತೋರುತ್ತದೆ ಎಂಬುದಾಗಿ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು. ಕಳೆದ ಹದಿಮೂರು ವರ್ಷಗಳಿಂದ ಸಂಬಂಧದಲ್ಲಿದ್ದರೂ ಜೋಡಿ ಇನ್ನೂ ಏಕೆ ಮದುವೆಯಾಗಿಲ್ಲ ಎಂದು ಅವರು ಪ್ರಶ್ನಿಸಿದರು.

ಕುಮಾರ್‌ ಅವರ ರಿಟ್‌ ಅರ್ಜಿಯಲ್ಲಿ ಲಿವ್‌- ಇನ್‌ ಸಂಬಂಧದ ಉಲ್ಲೇಖವಿಲ್ಲ. ಅನುಕೂಲಕರ ತೀರ್ಪು ಪಡೆಯಲೆಂದೇ ಆತ ತಮ್ಮ ವಾದಗಳನ್ನು ಹೆಣೆದಿದ್ದಾರೆ ಎಂದು ನ್ಯಾಯಾಲಯ ತೀರ್ಮಾನಿಸಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
X v State.pdf
Preview

Related Stories

No stories found.
Kannada Bar & Bench
kannada.barandbench.com