ಸಂಸದ ತೇಜಸ್ವಿ ಸೂರ್ಯ ವಿರುದ್ಧ ಚುನಾವಣಾ ಅಕ್ರಮ ಆರೋಪ: ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶ ರದ್ದುಪಡಿಸಿದ ಹೈಕೋರ್ಟ್‌

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ಪರವಾಗಿ ನಾರಾಯಣಪ್ಪ ಎಂಬವರು ಎರಡು ಸಾವಿರ ಚುನಾವಣಾ ಪ್ರಚಾರದ ಕರಪತ್ರ ಮುದ್ರಿಸಿದ್ದರು. ಆದರೆ, ಕರಪತ್ರದಲ್ಲಿ ಮುದ್ರಕರ ಹೆಸರು, ವಿಳಾಸ ನಮೂದಿಸಿರಲಿಲ್ಲ. ಇದು ಅಪರಾಧ ಎಂದು ದೂರಲಾಗಿತ್ತು.
M P Tejasvi Surya and Karnataka High Court

M P Tejasvi Surya and Karnataka High Court

Published on

ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮುದ್ರಿಸಲಾಗಿದ್ದ ಕರಪತ್ರದಲ್ಲಿ ಮುದ್ರಕರ ಹೆಸರು ಮತ್ತು ವಿಳಾಸ ಉಲ್ಲೇಖಿಸದ ಆರೋಪ ಸಂಬಂಧ ಬೆಂಗಳೂರು ದಕ್ಷಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ತನಿಖೆ ನಡೆಸಲು ಅನುಮತಿಸಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಪಡಿಸಿದೆ.

ತನ್ನ ವಿರುದ್ಧದ ದೋಷಾರೋಪ ಪಟ್ಟಿ ಮತ್ತು ಎರಡನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಸಂಸದ ಎಲ್ ಎಸ್ ತೇಜಸ್ವಿ ಸೂರ್ಯ ಸಲ್ಲಿಸಿದ್ದ ಕ್ರಿಮಿನಲ್ ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶ ಮಾಡಿದೆ.

ಪ್ರಕರಣದ ತನಿಖೆಗೆ ಹೊರಡಿಸಿದ್ದ ಆದೇಶದ ಪ್ರತಿಯಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಕೇವಲ ಅನುಮತಿಸಲಾಗಿದೆ ಎಂಬ ಪದ ಉಲ್ಲೇಖಿಸಿರುವುದು ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 155(2) ರ ಉಲ್ಲಂಘನೆಯಾಗಿದೆ. ಹೀಗಾಗಿ, ಪ್ರಕರಣದ ತನಿಖೆಗೆ ಅನುಮತಿಸಿ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಲಾಗಿದೆ. ಪ್ರಕರಣವನ್ನು ಹೊಸದಾಗಿ ಪರಿಗಣಿಸುವ ಸಂಬಂಧ ಅದನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಪುನಾ ಕಳುಹಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣದ ತನಿಖೆಗೆ ಆದೇಶಿಸುವ ಮುನ್ನ ವಿ ಗುರುಲಿಂಗ ಜಂಗಲಿಗಿ ಮತ್ತು ಕರ್ನಾಟಕ ಸರ್ಕಾರ ನಡುವಿನ ಪ್ರಕರಣದಲ್ಲಿ ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿನ ನಿರ್ದೇಶನಗಳನ್ನು (ಪ್ಯಾರ 20) ಗಮನಿಸಬೇಕು. ನಂತರ ಚುನಾವಣಾ ಪ್ರಚಾರದ ಕರಪತ್ರದಲ್ಲಿ ಮುದ್ರಕರ ಹೆಸರು ಉಲ್ಲೇಖಿಸಿಲ್ಲ (ಜನಪ್ರತಿನಿಧಿ ಕಾಯಿದೆ ಸೆಕ್ಷನ್ 127ಎ ಅಡಿ ಅಪರಾಧ ಕೃತ್ಯ) ಎಂಬ ಕಾರಣಕ್ಕೆ ಅರ್ಜಿದಾರರ ವಿರುದ್ಧ ತನಿಖೆಗೆ ಅನುಮತಿಸಬೇಕೆ ಎಂಬ ಬಗ್ಗೆ ವಿವೇಚನೆ ಬಳಸಿ ನಿರ್ಧಾರ ಕೈಗೊಳ್ಳಬೇಕು ಎಂದು ಪೀಠವು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.

Also Read
[ಬೆಡ್‌ ಬ್ಲಾಕಿಂಗ್ ಹಗರಣ] ತೇಜಸ್ವಿ ಸೂರ್ಯ ವಿರುದ್ಧ ಯುವ ಕಾಂಗ್ರೆಸ್‌ನ ಶ್ರೀವತ್ಸ ಮನವಿ ವಿಚಾರಣೆಗೆ ಹೈಕೋರ್ಟ್‌ ನಕಾರ

ಪ್ರಕರಣದ ಹಿನ್ನೆಲೆ

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ಅವರ ಪರವಾಗಿ ನಾರಾಯಣಪ್ಪ ಎಂಬವರು ಎರಡು ಸಾವಿರ ಚುನಾವಣಾ ಪ್ರಚಾರದ ಕರಪತ್ರ ಮುದ್ರಿಸಿದ್ದರು. ಆದರೆ, ಕರಪತ್ರದಲ್ಲಿ ಮುದ್ರಕರ ಹೆಸರು ಮತ್ತು ವಿಳಾಸ ನಮೂದಿಸಿರಲಿಲ್ಲ. ಇದು ಅಪರಾಧ ಕೃತ್ಯ ಎಂದು ಆರೋಪಿಸಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯು ನಗರದ ಸಿದ್ಧಾಪುರ ಪೊಲೀಸ್ ಠಾಣೆಗೆ 2019ರ ಏಪ್ರಿಲ್‌ 18ರಂದು ದೂರು ಸಲ್ಲಿಸಿದ್ದರು. ಪ್ರಕರಣ ಸಂಬಂಧ ಕ್ರಮ ಜರುಗಿಸಲು ಅನುಮತಿ ನಿಡುವಂತೆ ಪೊಲೀಸರು 2ನೇ ಎಸಿಎಂಎಂ ನ್ಯಾಯಾಲಯವನ್ನು ಕೋರಿದ್ದರು. ಇದನ್ನು ಪರಿಗಣಿಸಿದ್ದ ನ್ಯಾಯಾಲಯ ತನಿಖೆ ನಡೆಸಲು ಅನುಮತಿಸಿ ಆದೇಶಿಸಿತ್ತು.

ಅದರಂತೆ ತನಿಖೆ ನಡೆಸಿದ್ದ ಸಿದ್ಧಾಪುರ ಠಾಣಾ ಪೊಲೀಸರು 2019ರ ಜುಲೈ 2ರಂದು 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಜನ ಪ್ರತಿನಿಧಿ ಕಾಯಿದೆ ಸೆಕ್ಷನ್ 127ಎ ಅಡಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅದನ್ನು ಅಂಗೀಕರಿಸಿದ್ದ ನ್ಯಾಯಾಲಯವು ತೇಜಸ್ವಿ ಸೂರ್ಯ ವಿರುದ್ಧ 2021ರ ನವೆಂಬರ್‌ 17ರಂದು ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು. ಹೀಗಾಗಿ, ತೇಜಸ್ವಿ ಸೂರ್ಯ ಅವರು ತಮ್ಮ ವಿರುದ್ಧದ ದೋಷಾರೋಪ ಪಟ್ಟಿ ಮತ್ತು ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

Attachment
PDF
Tejasvi Surya V. State of Karnataka.pdf
Preview
Kannada Bar & Bench
kannada.barandbench.com