[ಬೆಡ್‌ ಬ್ಲಾಕಿಂಗ್ ಹಗರಣ] ತೇಜಸ್ವಿ ಸೂರ್ಯ ವಿರುದ್ಧ ಯುವ ಕಾಂಗ್ರೆಸ್‌ನ ಶ್ರೀವತ್ಸ ಮನವಿ ವಿಚಾರಣೆಗೆ ಹೈಕೋರ್ಟ್‌ ನಕಾರ

ಮನವಿಯು ರಾಜಕೀಯ ಪ್ರೇರಿತವಾಗಿದ್ದು, ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.
YB Srivatsa, Tejasvi Surya and Karnataka HC
YB Srivatsa, Tejasvi Surya and Karnataka HC
Published on

ಕೋವಿಡ್‌ ಹಾಸಿಗೆ ಹಗರಣದ ಆರೋಪದ ಹಿನ್ನೆಲೆಯಲ್ಲಿ ಅಮಾನತು ಶಿಕ್ಷೆಗೆ ಒಳಗಾಗಿದ್ದ 17 ಮಂದಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಿಬ್ಬಂದಿ ಪರವಾಗಿ ಸಂಸದ ತೇಜಸ್ವಿ ಸೂರ್ಯ ಮತ್ತು ಇತರರ ವಿರುದ್ಧ ಯುವ ಕಾಂಗ್ರೆಸ್‌ನ ವೈ ಬಿ ಶ್ರೀವತ್ಸ ಸಲ್ಲಿಸಿದ್ದ ಮನವಿ ವಿಚಾರಣೆಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರಾಕರಿಸಿದೆ.

ಅಕ್ರಮ ಹಾಸಿಗೆ ಹಗರಣವನ್ನು ಬಹಿರಂಗಗೊಳಿಸುವ ಉದ್ದೇಶದಿಂದ ಬಿಬಿಎಂಪಿ ವಾರ್‌ ರೂಮ್‌ಗೆ ನುಗ್ಗಿ ಅಲ್ಲಿದ್ದ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಅಧಿಕಾರಿಗಳ ಹೆಸರನ್ನು ಓದಿದ್ದ ತೇಜಸ್ವಿ ಸೂರ್ಯ ಹಾಗೂ ಇತರೆ ಬಿಜೆಪಿ ನಾಯಕರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಲಾಗಿತ್ತು. ಈ ಬೆಳವಣಿಗೆಯ ಬೆನ್ನಿಗೇ ಬಿಬಿಎಂಪಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಈ ಬೆಳವಣಿಗೆಯ ಬಗ್ಗೆ ಯುವ ಕಾಂಗ್ರೆಸ್‌ ಗಂಭೀರ ಕಳವಳ ಕೈಗೆತ್ತಿಕೊಂಡಿತ್ತು.

ಪ್ರಕರಣಕ್ಕೆ ಕೋಮು ಬಣ್ಣ ನೀಡುವುದರ ಜೊತೆಗೆ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಮನವಿಯಲ್ಲಿ ಯುವ ಕಾಂಗ್ರೆಸ್‌ನ ಶ್ರೀವತ್ಸ ದೂರಿದ್ದರು.

ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಮನವಿಯು ರಾಜಕೀಯ ಪ್ರೇರಿತವಾಗಿದ್ದು, ಅದರಲ್ಲಿ ಸಾರ್ವಜನಿಕ ಹಿತಾಸಕ್ತಿ ಕಾಣುತ್ತಿಲ್ಲ ಎಂದಿತ್ತು. “ಅಮಾನತುಗೊಂಡಿರುವವರು ಯಾವಾಗಬೇಕಾದರೂ ನ್ಯಾಯಾಲಯವನ್ನು ಸಂಪರ್ಕಿಸಬಹುದು. ಅರ್ಜಿದಾರರು ನಿಸ್ವಾರ್ಥ (ಪ್ರೊ ಬೊನೊ) ಅರ್ಜಿದಾರರಲ್ಲ. ಈ ಏಕೈಕ ಕಾರಣದ ಹಿನ್ನೆಲೆಯಲ್ಲಿ ನಾವು ಮನವಿಯನ್ನು ವಿಲೇವಾರಿ ಮಾಡುತ್ತಿದ್ದೇವೆ” ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

ಹಾಸಿಗೆ ಹಗರಣದ ಬಗ್ಗೆ ತನಿಖೆ ನಡೆಸಲಾಗುತ್ತಿರುವುದರಿಂದ ಮತ್ತು ಕೇಂದ್ರ ಅಪರಾಧ ವಿಭಾಗಕ್ಕೆ (ಸಿಸಿಬಿ) ವರದಿ ಸಲ್ಲಿಸುವಂತೆ ನಿರ್ದೇಶಿಸಲಾಗಿರುವುದರಿಂದ ತ್ವರಿತ ಮನವಿಯನ್ನು ಪರಿಶೀಲಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿತು.

Also Read
ಬೆಡ್‌ ಬ್ಲಾಕಿಂಗ್ ಹಗರಣ: ಹಿರಿಯ ಐಪಿಎಸ್‌ ಅಧಿಕಾರಿಯಿಂದ ತನಿಖೆಯ ನಿರಂತರ ಮೇಲ್ವಿಚಾರಣೆಗೆ ಹೈಕೋರ್ಟ್‌ ಆದೇಶ

ಬಿಬಿಎಂಪಿ ಅಧಿಕಾರಿಗಳು ಮತ್ತು ಆಸ್ಪತ್ರೆಗಳು ಸೇರಿಕೊಂಡು ಅಕ್ರಮವಾಗಿ ಹಣ ಮಾಡುವ ವ್ಯವಹಾರದಲ್ಲಿ ತೊಡಗಿದ್ದಾರೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದರು. ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಹಣ ಗಳಿಸಲು ನಕಲಿ ಹೆಸರಿನಲ್ಲಿ ಹಾಸಿಗೆಗಳನ್ನು ಕಾಯ್ದಿರಿಸುತ್ತಿದ್ದಾರೆ ಎಂದೂ ಅವರು ಆರೋಪಿಸಿದ್ದರು.

ರಾಜ್ಯದಲ್ಲಿ ಕೋವಿಡ್‌ ನಿರ್ವಹಣೆಗೆ ಸಂಬಂಧಿಸಿದಂತೆ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ವಿಚಾರಣೆ ನಡೆಸುತ್ತಿರುವಾಗ ವಕೀಲ ಜಿ ಆರ್‌ ಮೋಹನ್‌ ಅವರು ಹಾಸಿಗೆ ಹಗರಣವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

Kannada Bar & Bench
kannada.barandbench.com