ಮುಡಾ ಅಕ್ರಮ: ಸ್ವಯಂ ಪ್ರೇರಿತ ಪಿಐಎಲ್‌ ದಾಖಲಿಸಿ ಸಿಬಿಐ ತನಿಖೆಗೆ ಒಪ್ಪಿಸಲು ಸಿಜೆ ಅಂಜಾರಿಯಾಗೆ ಶಾಸಕ ಯತ್ನಾಳ್‌ ಪತ್ರ

ಸಿಎಂ ಪತ್ನಿ ಪಾರ್ವತಿಗೆ ವಿಜಯನಗರ ಮೂರನೇ ಹಂತದಲ್ಲಿ 50x80ರ 5 ನಿವೇಶನ, 60x40ರ 2, ನಾಲ್ಕನೇ ಹಂತದಲ್ಲಿ 60x40ರ 5 ಹಾಗೂ 30x40ರ 2 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದ್ದು, ಇವು ನೂರಾರು ಕೋಟಿ ಬಾಳುತ್ತವೆ ಎಂದು ಪತ್ರದಲ್ಲಿ ಆರೋಪ.
Mysore Urban Development Authority & CM Siddaramaiah
Mysore Urban Development Authority & CM Siddaramaiah

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿರುವ ನಿವೇಶನಗಳ ಅಕ್ರಮ ಹಂಚಿಕೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು ಕೂಡಲೇ ನ್ಯಾಯಾಲಯವು ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ದಾಖಲಿಸಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಕರ್ನಾಟಕ ಹೈಕೋರ್ಟ್ ಮುಖ್ಯ‌ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾಗೆ ಪತ್ರ ಬರೆದಿದ್ದಾರೆ.

ಸಿಜೆಗೆ ಬರೆದಿರುವ ಎರಡು ಪುಟಗಳ ಪತ್ರದಲ್ಲಿ “ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಒಟ್ಟು 14 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿರುವುದು ಮಾಧ್ಯಮಗಳ ಮುಖಾಂತರ ಬೆಳಕಿಗೆ ಬರುತ್ತಿದ್ದಂತೆಯೇ  ರಾಜ್ಯದ ಸಂಪುಟ ದರ್ಜೆ ಸಚಿವರೊಬ್ಬರು ಮುಡಾದಲ್ಲಿದ್ದ ಕಡತಗಳನ್ನು ಬೆಂಗಳೂರಿಗೆ ತರಿಸಿಕೊಂಡಿದ್ದಾರೆ. ಇದು ಭಾರಿ ಭ್ರಷ್ಟಾಚಾರ ಮುಚ್ಚಿಹಾಕುವ ಪ್ರಯತ್ನ” ಎಂದು ಪತ್ರದಲ್ಲಿ ದೂರಲಾಗಿದೆ.

“ಮುಡಾ ವ್ಯಾಪ್ತಿಯಲ್ಲಿ 3 ಸಾವಿರ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದ್ದು, ಇದರಲ್ಲಿ ವಿಜಯನಗರ 3 ಮತ್ತು 4ನೇ ಹಂತದ ಪ್ರಮುಖ ನಿವೇಶನಗಳೂ ಸೇರಿವೆ. ಪಾರ್ವತಿ ಅವರಿಗೆ ವಿಜಯನಗರ ಮೂರನೇ ಹಂತದಲ್ಲಿ 50x80ರ 5 ನಿವೇಶನಗಳು, 60x40ರ 2, ನಾಲ್ಕನೇ ಹಂತದಲ್ಲಿ 60x40ರ 5 ಹಾಗೂ 30x40ರ 2 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದ್ದು ಇವು ನೂರಾರು ಕೋಟಿ ಬೆಲೆ ಬಾಳುತ್ತವೆ” ಎಂದು ವಿವರಿಸಲಾಗಿದೆ.

“ಮೈಸೂರು ಜಿಲ್ಲಾಧಿಕಾರಿ 2023ರ ನವೆಂಬರ್ 27ರಂದೇ ರಾಜ್ಯ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಮುಡಾ ನಿವೇಶನಗಳ ಅಕ್ರಮ ಹಂಚಿಕೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ₹1 ಸಾವಿರ ಕೋಟಿ ಆರ್ಥಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಿದ್ದಾರೆ. ಈ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಹಾಗೂ ಇತರೆ ಪ್ರಭಾವಿಗಳನ್ನು ರಕ್ಷಿಸಲು ರಾಜ್ಯ ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳು ಪ್ರಯತ್ನ‌ ಮಾಡುತ್ತಿದ್ದಾರೆ” ಎಂದು ಪತ್ರದಲ್ಲಿ ದೂರಲಾಗಿದೆ.

“ಮೈಸೂರಿನ‌ ಬಡವರು ಮತ್ತು ವಂಚಿತರಿಗೆ ನ್ಯಾಯಯುತವಾಗಿ ದಕ್ಕಬೇಕಾದ ಈ ನಿವೇಶನಗಳನ್ನು ಪ್ರಭಾವಿ ವ್ಯಕ್ತಿಗಳು ಕಬಳಿಸಿದ್ದಾರೆ. ಆದ್ದರಿಂದ, ಹಗರಣದ ಗಂಭೀರತೆಯನ್ನು ಪರಿಗಣಿಸಿ ತಾವು ಇದನ್ನು ಸ್ವಯಂ ಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ದಾಖಲಿಸಿಕೊಂಡು; ಕೂಡಲೇ ಸಿಬಿಐ ತನಿಖೆಗೆ ಒಪ್ಪಿಸಬೇಕು ಮತ್ತು ಈ ತನಿಖೆಯು ಹೈಕೋರ್ಟ್ ನಿಗಾದಲ್ಲಿ ನಡೆಯುವಂತಾಗಬೇಕು” ಎಂದು ಯತ್ನಾಳ್‌ ಮನವಿ ಮಾಡಿದ್ದಾರೆ.

Kannada Bar & Bench
kannada.barandbench.com