
ಸಂವಿಧಾನಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಮತ್ತು ದಲಿತ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಕಿರು ವಿಡಂಬನಾತ್ಮಕ ನಾಟಕ ಪ್ರದರ್ಶಿಸಿದ ಆರೋಪದ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ ಅಡಿ ಬೆಂಗಳೂರು ಜೈನ್ ಯೂನಿವರ್ಸಿಟಿ ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ನಿರ್ದೇಶಕರು ಮತ್ತು ಏಳು ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ವಜಾ ಮಾಡಿದೆ.
ಜೈನ್ ಯೂನಿವರ್ಸಿಟಿ ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ನಿರ್ದೇಶಕ ದಿನೇಶ್ ನೀಲಕಂಠ್ ಬೋರ್ಕರ್, ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಪಿ ಪ್ರತೀಕ್ ಥೋಡ್ಕರ್ ಹಾಗೂ ಏಳು ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
“ಅರ್ಜಿದಾರರು ಪ್ರಸ್ತುತಪಡಿಸಿರುವ ಕಿರು ವಿಡಂಬನಾ ನಾಟಕವು ಮನೋರಂಜನೆಯ ರೂಪದಲ್ಲಿದ್ದು, ಅದಕ್ಕೆ ಸಂವಿಧಾನದ 19ನೇ ವಿಧಿಯಡಿ ರಕ್ಷಣೆ ಇದೆ. ಸಂವಿಧಾನದ 19ನೇ ವಿಧಿಯು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಾತರಿಪಡಿಸಿದ್ದು, ಆಕ್ಷೇಪಾರ್ಹವಾದ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ಅಪರಾಧಗಳು ಸ್ಪಷ್ಟವಾಗಿ ಅರ್ಜಿದಾರರಿಗೆ ಅನ್ವಯಿಸುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.
“ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿ ದೂರು ನೀಡಿಲ್ಲ. ಅಲ್ಲದೇ, ಅರ್ಜಿದಾರರು ಉದ್ದೇಶಪೂರ್ವಕವಾಗಿ ನಿರ್ದಿಷ್ಟವಾಗಿ ಎಸ್‌ಸಿ/ಎಸ್‌ಟಿ ಸಮುದಾಯವನ್ನು ನಿಂದಿಸುವ ಉದ್ದೇಶ ಹೊಂದಿದ್ದರು ಎಂಬುವುದಕ್ಕೆ ಯಾವುದೇ ಪುರಾವೆ ಇಲ್ಲ” ಎಂದು ನ್ಯಾಯಾಲಯ ಹೇಳಿದೆ.
“ವಿಡಂಬನಾತ್ಮಕ ಕಿರು ನಾಟಕವನ್ನು ಮನೋರಂಜನೆಗಾಗಿ ಪ್ರಸ್ತುತಪಡಿಸಲಾಗಿದ್ದು, ಯಾವುದೇ ಸಮುದಾಯ ಅಥವಾ ಜಾತಿ ಅಥವಾ ವರ್ಣ, ನಿರ್ದಿಷ್ಟ ಧರ್ಮ ಮತ್ತು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಅಥವಾ ಅವಮಾನಿಸುವ ಉದ್ದೇಶವಿಲ್ಲ” ಎಂದು ನಾಟಕದ ಸಂಭಾಷಣೆಯನ್ನು ಪರಿಶೀಲಿಸಿದ ಪೀಠ ಹೇಳಿದೆ.
ಅರ್ಜಿದಾರರ ಪರವಾಗಿ ವಕೀಲೆ ಸುಮನಾ ನಾಗಾನಂದ್ ವಕಾಲತ್ತು ವಹಿಸಿದ್ದು, ಹಿರಿಯ ವಕೀಲ ಎಸ್ ಶ್ರೀರಂಗ ವಾದಿಸಿದ್ದರು. ರಾಜ್ಯ ಸರ್ಕಾರವನ್ನು ಹೆಚ್ಚುವರಿ ಸರ್ಕಾರಿ ಅಭಿಯೋಜಕಿ ರಶ್ಮಿ ಜಾಧವ್ ಪ್ರತಿನಿಧಿಸಿದ್ದರು.
ಪ್ರಕರಣದ ಹಿನ್ನೆಲೆ: ಜೈನ್ ಕಾಲೇಜು ವತಿಯಿಂದ ನಗರದ ನಿಮ್ಹಾನ್ಸ್ ಸಭಾಂಗಣದಲ್ಲಿ 2023ರ ಫೆಬ್ರವರಿ 8ರಂದು ಹಮ್ಮಿಕೊಂಡಿದ್ದ ಯುವ ಜನೋತ್ಸವದ ಅಂಗವಾಗಿ ಅರ್ಜಿದಾರ ವಿದ್ಯಾರ್ಥಿಗಳು ಸಮಾಜದಲ್ಲಿ ಚಾಲ್ತಿಯಲ್ಲಿರುವ ಮೀಸಲಾತಿ ವ್ಯವಸ್ಥೆ ಕುರಿತು ವಿಡಂಬನಾತ್ಮಕ ಕಿರು ನಾಟಕ (ಮ್ಯಾಡ್- ಆ್ಯಡ್ ಸ್ಕಿಟ್) ಪ್ರದರ್ಶನ ನೀಡಿದ್ದರು. ಅದರಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಮತ್ತು ದಲಿತ ಸಮುದಾಯದ ಬಗ್ಗೆ ಆಕ್ಷೇಪಾರ್ಹ ಸಂಭಾಷಣೆಗಳನ್ನು ವಿದ್ಯಾರ್ಥಿಗಳು ಹೇಳಿದ್ದರು ಎನ್ನಲಾಗಿತ್ತು. ಕಿರು ನಾಟಕದ ವಿಡಿಯೊ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡಿದ್ದು, ಅದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.
ಘಟನೆ ಕುರಿತಂತೆ ರಾಜ್ಯ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು 2023ರ ಫೆಬ್ರವರಿ 10ರಂದು ಜಯನಗರದ ಸಿದ್ಧಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ್ದ ಪೊಲೀಸರು, ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯಿದೆ ಸೆಕ್ಷನ್‌ಗಳಾದ 3(1)(r), 3(1)(s) ಮತ್ತು 3(1)(v) ಮತ್ತು ಐಪಿಸಿ ಸೆಕ್ಷನ್‌ಗಳಾದ 153A, 149 ಮತ್ತು 295A ಅಡಿ ಎಫ್‌ಐಆರ್ ದಾಖಲಿಸಿ, ವಿದ್ಯಾರ್ಥಿಗಳನ್ನು ಬಂಧಿಸಿದ್ದರು. ನಂತರ ಜಾಮೀನಿನ ಮೇಲೆ ಅವರು ಬಿಡುಗಡೆಯಾಗಿದ್ದರು.