[ಚುನಾವಣಾ ಅಕ್ರಮ ಪ್ರಕರಣ] ಬಿಜೆಪಿ ಮಾಜಿ ಶಾಸಕ ಸಂಜಯ್‌ ಪಾಟೀಲ್‌, ಬೆಂಬಲಿಗರನ್ನು ಖುಲಾಸೆಗೊಳಿಸಿದ ವಿಶೇಷ ನ್ಯಾಯಾಲಯ

ಅಪರಾಧ ನಡೆದಿದ್ದ ಬೆಂಡೆಕೇರಿ ಗ್ರಾಮದಲ್ಲಿ ವಿದೇಶಿಯರು ನೆಲೆಸಿದ್ದಾರೆ ಎಂಬುದು ಪ್ರಾಸಿಕ್ಯೂಷನ್‌ ವಾದವಾಗಿರಲಿಲ್ಲ. ಆದ್ದರಿಂದ, ಮತದಾರರಿಗೆ ಹಂಚಲು ಆರೋಪಿಗಳು ವಿದೇಶಿ ಕರೆನ್ಸಿ ಹೊಂದಿದ್ದರು ಎಂಬ ಆರೋಪ ಇಲ್ಲಿ ನಿಲ್ಲದು ಎಂದು ಪೀಠ ಹೇಳಿದೆ.
BJP ex MLA Sanjay Patil
BJP ex MLA Sanjay PatilFacebook

ಮೌಖಿಕ ಮತ್ತು ದಾಖಲೆಯ ರೂಪದಲ್ಲಿನ ಸಾಕ್ಷಿಯ ಕೊರತೆ ಮತ್ತು ಕಾನೂನು ಪ್ರಕ್ರಿಯೆಯನ್ನು ಸರಿಯಾಗಿ ಪಾಲಿಸಲಾಗಿಲ್ಲ ಎಂದು ಚುನಾವಣಾ ಅಕ್ರಮ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಬಿಜೆಪಿಯ ಮಾಜಿ ಶಾಸಕ ಸಂಜಯ್‌ ಪಾಟೀಲ್ ಹಾಗೂ ಅವರ ನಾಲ್ವರು ಬೆಂಬಲಿಗರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲವು ಈಚೆಗೆ ಖುಲಾಸೆಗೊಳಿಸಿದೆ.

ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣದ ವಿಚಾರಣೆ ನಡೆಸಿದ್ದ ಹಾಲಿ ಮತ್ತು ಮಾಜಿ ಸಂಸದರು, ಶಾಸಕರ ವಿರುದ್ಧದ ಪ್ರಕರಣಗಳ ಮ್ಯಾಜಿಸ್ಟ್ರೇಟ್‌ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಪ್ರೀತ್‌ ಜೆ ಅವರು ತೀರ್ಪು ನೀಡಿದ್ದಾರೆ.

ಸಿಆರ್‌ಪಿಸಿ ಸೆಕ್ಷನ್‌ 255(1)ರ ಅಡಿ ಮಾಜಿ ಶಾಸಕ ಸಂಜಯ್‌ ಪಾಟೀಲ್‌, ದಿಲೀಪ್‌ ಬಾಬುರಾವ್‌ ಪಾಟೀಲ್‌, ಅಂಕುಶ್‌ ಅಶೋಕ್‌ರಾವ್‌ ಪಾಟೀಲ್‌, ಮಹೇಂದ್ರ ಲಕ್ಷ್ಮಣ್‌ ನಂದ್ರೇಕರ್‌ ಮತ್ತು ಪ್ರದೀಪ್‌ ಜಿನ್ನಪ್ಪ ಡಿಗ್ಗಿ ಅವರನ್ನು ಭಾರತೀಯ ದಂಡ ಸಂಹಿತೆ ಸೆಕ್ಷನ್‌ 171(ಇ) (ಲಂಚ) ಮತ್ತು 171(ಎಚ್)‌ (ಕಾನೂನುಬಾಹಿರವಾಗಿ ಹಣ ಹಂಚುವುದು) ಅಡಿ ದಾಖಲಾಗಿದ್ದ ಪ್ರಕರಣದಲ್ಲಿ ಖುಲಾಸೆಗೊಳಿಸಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಆರೋಪಿಗಳು ಸ್ಕಾರ್ಪಿಯೊ ಕಾರಿನಲ್ಲಿ ದೇಶ ಮತ್ತು ವಿದೇಶಗಳ ಕರೆನ್ಸಿಗಳನ್ನು ಇಟ್ಟುಕೊಂಡಿದ್ದರು ಎಂದು ಪ್ರಾಸಿಕ್ಯೂಷನ್‌ ಹೇಳಿದೆ. ಆದರೆ, ಅದನ್ನು ಸ್ಥಳೀಯ ಮತದಾರರಿಗೆ ಹಂಚಲಾಗಿದೆ ಎಂದು ಪ್ರಾಸಿಕ್ಯೂಷನ್‌ ಹೇಳಿಲ್ಲ. ಬದಲಿಗೆ ಮತದಾರರಿಗೆ ಆರೋಪಿಗಳು ಆ ಹಣವನ್ನು ಹಂಚಲು ಪ್ರಯತ್ನಿಸುತ್ತಿದ್ದರು ಎಂಬುದು ಪ್ರಾಸಿಕ್ಯೂಷನ್‌ ವಾದವಾಗಿದೆ. ಕಾರಿನಲ್ಲಿದ್ದ ಹಣ 50,000 ರೂಪಾಯಿ ದಾಟುತ್ತಿರಲಿಲ್ಲ ಎಂದು ಪ್ರಾಸಿಕ್ಯೂಷನ್‌ ಹೇಳಿದ್ದು, ಸಾಕ್ಷಿ ನುಡಿದಿರುವ ಅಧಿಕಾರಿಗಳ ಪ್ರಕಾರ ಆರೋಪಿಗಳು ಹಣ ಹಂಚಿಕೆ ಮಾಡಲು ಪ್ರಯತ್ನಿಸುತ್ತಿದ್ದರೇ ವಿನಾ ಅವರು ಹಣ ಹಂಚಿಲ್ಲ. ಹೀಗಾಗಿ, ಇಲ್ಲಿ ಐಪಿಸಿ 171(ಇ) ಮತ್ತು 171(ಎಚ್) ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಅಪರಾಧ ನಡೆದಿದ್ದ ಬೆಂಡೆಕೇರಿ ಗ್ರಾಮದಲ್ಲಿ ವಿದೇಶಿಯರು ನೆಲೆಸಿದ್ದಾರೆ ಎಂಬುದು ಪ್ರಾಸಿಕ್ಯೂಷನ್‌ ವಾದವಾಗಿರಲಿಲ್ಲ. ಆದ್ದರಿಂದ, ಮತದಾರರಿಗೆ ಹಂಚಲು ಆರೋಪಿಗಳು ವಿದೇಶಿ ಕರೆನ್ಸಿ ಹೊಂದಿದ್ದರು ಎಂಬ ಆರೋಪವೂ ಇಲ್ಲಿ ನಿಲ್ಲುವುದಿಲ್ಲ ಎಂದು ಪೀಠ ಹೇಳಿದೆ.

ಸಂಜ್ಞೆಯೇತರ ಅಪರಾಧಗಳ ಬಗ್ಗೆ ಪೊಲೀಸ್‌ ಅಧಿಕಾರಿ ವರದಿ ಸಿಕ್ಕಾಗ ಅದನ್ನು ನಿರ್ದಿಷ್ಟ ಪುಸ್ತಕದಲ್ಲಿ ದಾಖಲಿಸಿ, ಮಾಹಿತಿದಾರರನ್ನು ಸಿಆರ್‌ಪಿಸಿ ಸೆಕ್ಷನ್‌ 155(1)ರ ಅಡಿ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಬೇಕು. ಆನಂತರ ಸಿಆರ್‌ಪಿಸಿ 155(2)ರ ಅಡಿ ವ್ಯಾಪ್ತಿ ಹೊಂದಿರುವ ಮ್ಯಾಜಿಸ್ಟ್ರೇಟ್‌ ಅವರು ತನಿಖಾಧಿಕಾರಿಗೆ ಪ್ರಕರಣದ ತನಿಖೆ ನಡೆಸಲು ಅನುಮತಿಸಬೇಕು. ಮ್ಯಾಜಿಸ್ಟ್ರೇಟ್‌ ಅನುಮತಿಸದ ಹೊರತು ಪೊಲೀಸ್‌ ಅಧಿಕಾರಿಯು ತನಿಖೆ ನಡೆಸಿ, ಅಂತಿಮ ಅಥವಾ ಆರೋಪ ಪಟ್ಟಿ ಸಲ್ಲಿಸಲಾಗದು. ಇಲ್ಲಿ ಮೌಖಿಕ ಮತ್ತು ದಾಖಲೆಯ ರೂಪದಲ್ಲಿನ ಸಾಕ್ಷಿಯ ಕೊರತೆ ಮತ್ತು ಕಾನೂನು ಪ್ರಕ್ರಿಯೆಯನ್ನು ಸರಿಯಾಗಿ ಪಾಲಿಸಲಾಗಿಲ್ಲವಾದ್ದರಿಂದ ಆರೋಪಿಗಳನ್ನು ಅಪರಾಧಿಗಳು ಎಂದು ಘೋಷಿಸಲಾಗದು ಎಂದು ನ್ಯಾಯಾಲಯ ಹೇಳಿದೆ.

Also Read
ಯೋಗೀಶ್‌ ಗೌಡ ಕೊಲೆ ಪ್ರಕರಣ: ಟಿಂಗರಿಕರ್‌, ನಿಲೇಕಣಿ ಸಲ್ಲಿಸಿದ್ದ ಆರೋಪ ಮುಕ್ತ ಮನವಿ ವಜಾ ಮಾಡಿದ ವಿಶೇಷ ನ್ಯಾಯಾಲಯ

ಘಟನೆಯ ಹಿನ್ನೆಲೆ: ವಿಧಾನಸಭೆ ಚುನಾವಣೆ ಸಂದರ್ಭವಾದ 2013ರ ಮೇ 5ರಂದು ಸಂಜೆ ಬೆಳಗಾವಿಯ ಬೆಂಡಿಕೇರಿ ಗ್ರಾಮದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಿಲ್ಲಿಸಿದ್ದ ವಾಹನದಲ್ಲಿ 100 ರೂಪಾಯಿಯ 117 ನೋಟು, 500 ರೂಪಾಯಿಯ ಮೂರು ನೋಟು, 1,000 ರೂಪಾಯಿಗಳ 23 ನೋಟು ಸೇರಿದಂತೆ ಒಟ್ಟು 36,200 ರೂಪಾಯಿ ನಗದು ಪತ್ತೆಯಾಗಿತ್ತು. ನ್ಯೂಜಿಲೆಂಡ್‌ನ 75 ಡಾಲರ್‌ಗಳು, ಮಾರಿಷಸ್‌ನ 25 ಡಾಲರ್‌, ಅಮೆರಿಕದ ಒಂದು ಡಾಲರ್‌, ಸಿಂಗಪುರದ 50 ಡಾಲರ್‌ಗಳು ಪತ್ತೆಯಾಗಿದ್ದವು. ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರನ್ನು ವಿಚಾರಣೆ ನಡೆಸಲಾಗಿ ಅವರು ಸದರಿ ಹಣವು ಮಾಜಿ ಶಾಸಕ ಸಂಜಯ್‌ ಪಾಟೀಲ್‌ ಅವರ ಪರವಾಗಿ ಮತದಾರರಿಗೆ ಹಂಚಲು ಇಟ್ಟಿರಬೇಕು ಎಂದಿದ್ದರು. ಹೀಗಾಗಿ, ಆರೋಪಿಗಳ ವಿರುದ್ದ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಹಿರೇಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

Attachment
PDF
Hirebagewadi PS versus Sanjay Patil and others.pdf
Preview

Related Stories

No stories found.
Kannada Bar & Bench
kannada.barandbench.com