ಪಾಕ್‌ ಪ್ರಜೆ ಎನ್ನಲಾದ ಮಹಿಳೆಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌; ಮಗುವಿನೊಂದಿಗೆ ಬಂಧನ ಕೇಂದ್ರದಲ್ಲಿರಿಸಲು ಆದೇಶ

"ಮೇಲ್ನೋಟಕ್ಕೆ ಅರ್ಜಿದಾರೆಯ ವಿರುದ್ಧ ಯಾವುದೇ ಪ್ರಕರಣವಿಲ್ಲ, ದುರದೃಷ್ಟಕರವೆಂದರೆ ದೂರುದಾರ ಪೊಲೀಸರಿಂದಾಗಿ ಅರ್ಜಿದಾರೆಯು ಬಲಪಶುವಾಗಿದ್ದಾರೆ" ಎಂದಿರುವ ನ್ಯಾಯಾಲಯ.
High Court of Karnataka, Dharwad Bench
High Court of Karnataka, Dharwad Bench

ಪಾಕಿಸ್ತಾನಿ ಪ್ರಜೆ ಎಂಬ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಮಹಿಳೆಯೊಬ್ಬರಿಗೆ ಜಾಮೀನು ಮಂಜೂರು ಮಾಡಿರುವ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಆಕೆಯನ್ನು ಬಂಧನ ಕೇಂದ್ರದಲ್ಲಿ (ಡಿಟೆನ್ಷನ್‌ ಸೆಂಟರ್‌) ಇಡಲು ಆದೇಶ ಮಾಡಿದೆ.

ಉತ್ತರ ಕನ್ನಡ ಜಿಲ್ಲೆಯ 33 ವರ್ಷದ ಖತಿಜಾ ಮೆಹ್ರೀನ್‌ ಅವರು ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಶಿವಶಂಕರ್‌ ಅಮರಣ್ಣವರ್‌ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.

“ಜಾಮೀನಿನ ಮೇಲೆ ಅರ್ಜಿದಾರೆಯನ್ನು ವಿಚಾರಣಾಧೀನ ನ್ಯಾಯಾಲಯವು ಬಿಡುಗಡೆ ಮಾಡುವಾಗ ವಿಚಾರಣೆ ಪೂರ್ಣಗೊಳ್ಳುವವರೆಗೆ ಭಟ್ಕಳ ಅಥವಾ ಸಮೀಪದ ಯಾವುದಾದರೂ ಬಂಧನ ಕೇಂದ್ರದಲ್ಲಿ ಅರ್ಜಿದಾರೆಯನ್ನು ಇಡುವ ಉದ್ದೇಶದಿಂದ ಸಕ್ಷಮ ಪ್ರಾಧಿಕಾರಕ್ಕೆ ವಿಚಾರ ತಿಳಿಸಬೇಕು. ವಿಚಾರಣಾಧೀನ ನ್ಯಾಯಾಲಯವು ಆದ್ಯತೆಯ ಮೇಲೆ ಪ್ರಕರಣವನ್ನು ತುರ್ತಾಗಿ ಇತ್ಯರ್ಥಪಡಿಸಬೇಕು” ಎಂಬ ಎರಡು ಪ್ರಮುಖ ಷರತ್ತುಗಳನ್ನು ವಿಧಿಸಿ, ಜಾಮೀನು ಮಂಜೂರು ಮಾಡಿದೆ.

“ಮೇಲ್ನೋಟಕ್ಕೆ ಅರ್ಜಿದಾರೆಯ ವಿರುದ್ಧ ಯಾವುದೇ ಪ್ರಕರಣವಿಲ್ಲ, ದುರದೃಷ್ಟಕರವೆಂದರೆ ದೂರುದಾರ ಪೊಲೀಸರಿಂದಾಗಿ ಅರ್ಜಿದಾರೆಯು ಬಲಪಶುವಾಗಿದ್ದಾರೆ. ಅನುಮಾನದ ಆಧಾರದಲ್ಲಿ ಆಕೆಯನ್ನು ನ್ಯಾಯಾಂಗ ಬಂಧನದಲ್ಲಿ ಇಡಲಾಗದು. ಅರ್ಜಿದಾರೆಯು 1 ವರ್ಷದ 4 ತಿಂಗಳಿಂದ ಜೈಲಿನಲ್ಲಿಡಲಾಗಿದೆ. ಅರ್ಜಿದಾರೆಯ ವಿರುದ್ಧ ದೇಶದ ಭದ್ರತೆಗೆ ಧಕ್ಕೆಯಾಗುವ ಯಾವುದೇ ಆರೋಪಗಳಿಲ್ಲ. ಎರಡೂವರೆ ವರ್ಷ ಮಗುವೂ ಅರ್ಜಿದಾರೆಯ ಜೊತೆ ಜೈಲಿನಲ್ಲಿದೆ. ಹೀಗಾಗಿ, ಕಠಿಣ ಷರತ್ತುಗಳನ್ನು ವಿಧಿಸಿ, ಅವರಿಗೆ ಜಾಮೀನು ನೀಡಬಹುದಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಮುಂದುವರಿದು, “ಅರ್ಜಿದಾರೆಯನ್ನು ತನ್ನ ಮಾತೃ ದೇಶಕ್ಕೆ ಕಳುಹಿಸಬೇಕೆ ಅಥವಾ ಬೇಡವೇ ಎಂಬುದನ್ನು ಸರ್ಕಾರ ನಿರ್ಧರಿಸುವವರೆಗೆ ಅರ್ಜಿದಾರೆಯು ತನ್ನ ಇಚ್ಛೆಯಂತೆ ದೇಶಾದ್ಯಂತ ಓಡಾಡುವಂತಿಲ್ಲ. ಅಲ್ಲಿಯವರೆಗೆ ಆಕೆಗೆ ಎಲ್ಲಾ ಸೌಲಭ್ಯ ಕಲ್ಪಿಸಿ, ಬಂಧನ ಕೇಂದ್ರದಲ್ಲಿ ಇಡಬೇಕು. ಪ್ರಕರಣದಲ್ಲಿ ಆಕೆ ಖುಲಾಸೆಗೊಂಡರೆ, ಸರ್ಕಾರವು ಆಕೆಯ ರಾಷ್ಟ್ರೀಯತೆ ನಿರ್ಧರಿಸುವ ನಿಟ್ಟಿನಲ್ಲಿ ಸಕ್ಷಮ ಪ್ರಾಧಿಕಾರಕ್ಕೆ ನಿರ್ದೇಶಿಸಬೇಕು. ಇಲ್ಲಿ ಆಕೆಯನ್ನು ತನ್ನ ಮಾತೃ ದೇಶಕ್ಕೆ ಕಳುಹಿಸಬೇಕೆ ಎಂಬುದನ್ನು ತಿಳಿದು, ಆನಂತರ ಸೂಕ್ತ ಕ್ರಮವನ್ನು ಸರ್ಕಾರ ಕೈಗೊಳ್ಳಬಹುದಾಗಿದೆ. ಅರ್ಜಿದಾರೆಯು ದೋಷಿ ಎಂದಾದರೆ, ಶಿಕ್ಷೆಯ ಅವಧಿ ಪೂರ್ಣಗೊಳಿಸಿದ ಬಳಿಕ ಆಕೆಯನ್ನು ತನ್ನ ಮಾತೃ ದೇಶಕ್ಕೆ ವರ್ಗಾಯಿಸಲು ಸಕ್ಷಮ ಪ್ರಾಧಿಕಾರವು ಸೂಕ್ತ ಕ್ರಮಕೈಗೊಳ್ಳಬೇಕು” ಎಂದು ಪೀಠವು ಆದೇಶದಲ್ಲಿ ವಿವರಿಸಿದೆ.

ಪ್ರಕರಣದ ಹಿನ್ನೆಲೆ: ಭಟ್ಕಳದಲ್ಲಿ ಪಾಕಿಸ್ತಾನಿ ಪ್ರಜೆ ನೆಲೆಸಿದ್ದಾರೆ ಎಂಬ ಗುಪ್ತಚರ ದಳದ ಮಾಹಿತಿ ಆಧರಿಸಿ ಭಟ್ಕಳ ಪೊಲೀಸ್‌ ಠಾಣೆಯ ಪಿಎಸ್‌ಐ ಸುಮಾ ಅವರು ಖತಿಜಾ ಮೆಹ್ರೀನ್‌ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಸರ್ಚ್‌ ವಾರೆಂಟ್‌ ಪಡೆದು ಅರ್ಜಿದಾರೆಯನ್ನು ಬಂಧಿಸಿ, ಆಕೆಯಿಂದ ಏಳು ತಿರುಚಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. 2014ರಿಂದ ಯಾವುದೇ ವೀಸಾ ಇಲ್ಲದೇ ಅರ್ಜಿದಾರೆಯು ಭಟ್ಕಳದಲ್ಲಿ ನೆಲೆಸಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ವಿದೇಶಿಯರ ಕಾಯಿದೆ ಸೆಕ್ಷನ್‌ಗಳಾದ 14, 14(ಎ)(ಬಿ), ಐಪಿಸಿ ಸೆಕ್ಷನ್‌ಗಳಾದ 468, 471 ಅಡಿ ಪ್ರಕರಣ ದಾಖಲಿಸಲಾಗಿತ್ತು.

ಈ ಪ್ರಕರಣದ ಭಾಗವಾಗಿ ಉತ್ತರ ಕನ್ನಡದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅರ್ಜಿದಾರೆ ಜಾಮೀನು ಕೋರಿದ್ದರು. ಇದನ್ನು ನ್ಯಾಯಾಲಯವು 2022ರ ಮಾರ್ಚ್‌ 10ರಂದು ತಿರಸ್ಕರಿಸಿತ್ತು. ಹೀಗಾಗಿ, ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಅರ್ಜಿದಾರೆಯ ಪರವಾಗಿ ವಕೀಲರಾದ ಸಚಿನ್‌ ಜೈನಂದನ್‌, ಸಿ ರಂಗರಾಜನ್‌ ಅವರು ವಾದಿಸಿದರು. ಪ್ರಾಸಿಕ್ಯೂಷನ್‌ ಪರವಾಗಿ ವಕೀಲ ಪ್ರಶಾಂತ್‌ ವಿ. ಮೊಗಳಿ ವಾದಿಸಿದರು.

Related Stories

No stories found.
Kannada Bar & Bench
kannada.barandbench.com