ಕೆನಡಾದ ಕೇಂದ್ರ ನ್ಯಾಯಾಲಯದಲ್ಲಿ ಟ್ರೇಡ್‌ ಮಾರ್ಕ್‌ ಪ್ರಕರಣ ಜಯಿಸಿದ ʼಅಮುಲ್‌ʼ

ಅಮುಲ್‌ ಬ್ರ್ಯಾಂಡ್‌ನ ವಿಶಿಷ್ಟ ಟ್ರೇಡ್‌ ಮಾರ್ಕ್‌ ಮತ್ತು ಕೃತಿ ಸ್ವಾಮ್ಯವನ್ನು (ಕಾಪಿರೈಟ್‌) ಪ್ರತಿವಾದಿ ಅಮುಲ್‌ ಕೆನಡಾ ಕಂಪೆನಿಯು ಉಲ್ಲಂಘಿಸಿದೆ ಎಂದಿರುವ ನ್ಯಾಯಾಲಯವು ಅಮುಲ್‌ ಕೆನಡಾಗೆ $15,000 ನಷ್ಟ ಪಾವತಿಸುವಂತೆ ಆದೇಶಿಸಿದೆ.
Amul and Federal Court of Canada
Amul and Federal Court of Canada
Published on

ಭಾರತದ ಹೆಸರಾಂತ ಹೈನುಗಾರಿಕಾ ಉತ್ಪನ್ನಗಳ ಬ್ರ್ಯಾಂಡ್‌ ʼಅಮುಲ್‌ʼ ಟ್ರೇಡ್‌ ಮಾರ್ಕ್‌ನ ಒಡೆತನ ಹೊಂದಿರುವ ಫಿರ್ಯಾದುದಾರರಾದ ಕೈರಾ ಜಿಲ್ಲಾ ಸಹಕಾರ ಹಾಲು ಉತ್ಪಾದಕ ಒಕ್ಕೂಟ ಲಿಮಿಟೆಡ್‌ ಮತ್ತು ಗುಜರಾತ್‌ ಸಹಕಾರ ಹಾಲು ಮಾರಾಟಗಾರರ ಒಕ್ಕೂಟ ಲಿಮಿಟೆಡ್‌ನ ಟ್ರೇಡ್‌ ಮಾರ್ಕ್‌ ಮತ್ತು ಕಾಪಿರೈಟ್‌ ಅನ್ನು ಉಲ್ಲಂಘಿಸದಂತೆ ಅಮುಲ್‌ ಕೆನಡಾಗೆ ಶಾಶ್ವತ ನಿರ್ಬಂಧ ವಿಧಿಸಿ ಕೆನಡಾದ ಒಂಟಾರಿಯೊದಲ್ಲಿರುವ ಪ್ರಧಾನ ನ್ಯಾಯಾಲಯ ಆದೇಶ ಹೊರಡಿಸಿದೆ.

ಫಿರ್ಯಾದುದಾರರ ವಿಶಿಷ್ಟ ಟ್ರೇಡ್‌ ಮಾರ್ಕ್‌ ಮತ್ತು ಕಾಪಿರೈಟ್‌ ಅನ್ನು ಪ್ರತಿವಾದಿ ಸಂಸ್ಥೆ ಅಮುಲ್‌ ಕೆನಡಾ ಉಲ್ಲಂಘಿಸಿದೆ ಎಂದು ನ್ಯಾಯಮೂರ್ತಿ ಅಲನ್‌ ಎಸ್‌ ಡೈನರ್ ಆದೇಶದಲ್ಲಿ ತಿಳಿಸಿದ್ದಾರೆ. ಅಲ್ಲದೇ, ಟ್ರೇಡ್‌ ಮಾರ್ಕ್‌ಗೆ $10,000 ನಷ್ಟ ಪಾವತಿಸಬೇಕು, ಕಾಪಿರೈಟ್‌ ನಿಯಮ ಉಲ್ಲಂಘಿಸಿದ್ದಕ್ಕೆ $5,000 ದಂಡ ಪಾವತಿಸ ಬೇಕು ಎಂದು ಆದೇಶ ಮಾಡಲಾಗಿದ್ದು, ಸಾಲಿಸಿಟರ್‌ ಮತ್ತು ಕಕ್ಷಿದಾರರ ಆಧಾರದಲ್ಲಿ ಒಟ್ಟಾರೆ $17,733 ಕಾನೂನು ಹೋರಾಟ ವೆಚ್ಚ ಪಾವತಿಸುವಂತೆ ಆದೇಶಿಸಲಾಗಿದೆ.

ತೀರ್ಪು ಹೊರಡಿಸಲಾದ 30 ದಿನಗಳ ಒಳಗೆ ಒಡೆತನ ಮತ್ತು ಎಲ್ಲಾ ಹಕ್ಕುಗಳ ಅಧಿಕಾರ, ಫಿರ್ಯಾದುದಾರರ ಟ್ರೇಡ್‌ ಮಾರ್ಕ್‌ ಮತ್ತು ಕಾಪಿರೈಟ್‌ ಒಳಗೊಂಡ ಲಿಂಕ್ಡಿನ್ ಪುಟಗಳ ಸ್ವಾಮ್ಯ ಮತ್ತು ನಿಯಂತ್ರಣ, ಡೊಮೈನ್ ಹೆಸರುಗಳು ಮತ್ತು ಪ್ರತಿವಾದಿ ಸಂಸ್ಥೆ ನಿಯಂತ್ರಿಸುತ್ತಿರುವ ಎಲ್ಲಾ ಸಾಮಾಜಿಕ ಜಾಲತಾಣ ಪುಟಗಳ ನಿಯಂತ್ರಣವನ್ನು ಹಸ್ತಾತರಿಸುವಂತೆ ನ್ಯಾಯಮೂರ್ತಿ ಡೈನರ್ ಆದೇಶದಲ್ಲಿ ತಿಳಿಸಿದ್ದಾರೆ.

Also Read
ಪತಂಜಲಿಗೆ “ಕೊರೊನಿಲ್” ಟ್ರೇಡ್ ಮಾರ್ಕ್ ಬಳಸದಂತೆ ಸೂಚಿಸಿದ್ದ ಏಕಸದಸ್ಯ ಪೀಠದ ಆದೇಶಕ್ಕೆ ಮದ್ರಾಸ್ ಹೈಕೋರ್ಟ್ ತಡೆ

ಅಮುಲ್‌ ಕೆನಡಾವು ಕೆನಡಾದಲ್ಲಿ ಉದ್ಯಮ ಆರಂಭಿಸಿದ ಸಂದರ್ಭದಲ್ಲಿ ಅಮುಲ್‌ ಹೆಸರು ಬಳಸಿಕೊಂಡು ತಮ್ಮ ಉತ್ಪನ್ನಗಳ ಕಡೆಗೆ ಸಾರ್ವಜನಿಕರ ಗಮನ ಸೆಳೆಯುವ ಹಾಗೂ ಜನರಲ್ಲಿ ಗೊಂದಲ ಸೃಷ್ಟಿಸುವ ಎಲ್ಲಾ ಪ್ರಯತ್ನಗಳನ್ನು ವ್ಯವಸ್ಥಿತವಾಗಿ ಮಾಡಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಅಮುಲ್‌ ಕೆನಡಾದ ಲಿಂಕ್‌ಡಿನ್‌ ವೆಬ್‌ಸೈಟ್‌ ಬಳಸಿಕೊಂಡು ಉತ್ಪನ್ನಗಳ ಜಾಹೀರಾತು, ಬ್ರ್ಯಾಂಡ್‌ ಇಮೇಜ್‌ ಬಳಕೆ, ಹೆಸರು ಮತ್ತು ಕಾರ್ಪೊರೇಟ್‌ ಮಾಹಿತಿಯ ಮೂಲಕ ಟ್ರೇಡ್‌ ಮಾರ್ಕ್‌ ಮತ್ತು ಕಾಪಿರೈಟ್‌ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಭಾರತದ ಅಮುಲ್‌ ಸಂಸ್ಥೆಯು ಕೆನಡಾದ ಕೇಂದ್ರ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ʼಅಮುಲ್‌ʼ ವಿಶ್ವದ ಅತಿದೊಡ್ಡ ಶಾಖಾಹಾರ ಗಿಣ್ಣು ಬ್ರ್ಯಾಂಡ್‌ ಮತ್ತು ಪ್ಯಾಕ್‌ ಮಾಡಲಾದ ಹಾಲಿನ ಬ್ರ್ಯಾಂಡ್‌ಗೆ ಹೆಸರುವಾಸಿಯಾಗಿದ್ದು, ಭಾರತದಲ್ಲಿ ಜನಪ್ರಿಯ ಟ್ರೇಡ್‌ ಮಾರ್ಕ್‌ ಆಗಿದೆ ಎಂದು ಕಂಪೆನಿ ವಾದಿಸಿತ್ತು.

Kannada Bar & Bench
kannada.barandbench.com