ಇಲಾಖಾ ತನಿಖೆ: ನಿವೃತ್ತ ವಿಮಾ ಅಧಿಕಾರಿಯು ತನ್ನನ್ನು ಸಮರ್ಥಿಸಿಕೊಳ್ಳಲು ವಕೀಲರ ನೇಮಕಕ್ಕೆ ಅನುಮತಿಸಿದ ಹೈಕೋರ್ಟ್‌

ಕಂಪೆನಿಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮೆಗಾ ಅದಾಲತ್‌ನಲ್ಲಿ ಹಲವು ಪ್ರಕರಣಗಳನ್ನು ಇತ್ಯರ್ಥಪಡಿಸಿದ ಆರೋಪದ ಮೇಲೆ ರಮೇಶ್‌ ಬಾಬು ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವುದಲ್ಲದೇ ಇಲಾಖಾ ಪ್ರಕ್ರಿಯೆ ಆರಂಭಿಸಲಾಗಿದೆ.
Justice M Nagaprasanna and Karnataka HC's Dharwad Bench
Justice M Nagaprasanna and Karnataka HC's Dharwad Bench

ಅರವತ್ತು ವರ್ಷ ದಾಟಿರುವ ನಿವೃತ್ತ ವಿಮಾ ಅಧಿಕಾರಿಯೊಬ್ಬರ ನೆರವಿಗೆ ಧಾವಿಸಿರುವ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಇಲಾಖಾ ತನಿಖೆಯಲ್ಲಿ ನಿವೃತ್ತ ಅಧಿಕಾರಿಯು ತನ್ನನ್ನು ಸಮರ್ಥಿಸಿಕೊಳ್ಳಲು ವಕೀಲರನ್ನು ನೇಮಿಸಿಕೊಳ್ಳಬಹುದು ಎಂದು ಆದೇಶಿಸಿದೆ.

ಇಲಾಖಾ ತನಿಖೆಯ ವೇಳೆ ತಮ್ಮನ್ನು ಸಮರ್ಥಿಸಿಕೊಳ್ಳಲು ವಕೀಲರ ನೆರವು ನಿರಾಕರಿಸಿದ್ದ ಹುಬ್ಬಳ್ಳಿಯ ಯುನೈಟೆಡ್‌ ಇಂಡಿಯಾ ಇನ್ಶೂರೆನ್ಸ್‌ ಕಂಪೆನಿಯು ಕ್ರಮವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

“ಹಾಲಿ ಪ್ರಕರಣವು ಅರ್ಜಿದಾರರಿಗೆ ವಿರುದ್ಧವಾದರೆ ಅವರಿಗೆ ಗಂಭೀರ ಸಿವಿಲ್‌ ಮತ್ತು ಆರ್ಥಿಕ ಪರಿಣಾಮಗಳು ಎದುರಾಗಲಿವೆ. ಎಲ್ಲಾ ಸೌಲಭ್ಯಗಳನ್ನು ತಡೆ ಹಿಡಿಯುವ ಮೂಲಕ ಅವರನ್ನು ದಾರಿದ್ರ್ಯಕ್ಕೆ ದೂಡಲಾಗಿದೆ. 63ನೇ ವಯಸ್ಸಿನಲ್ಲಿ ಉದ್ಯೋಗಿಯು ಇಲಾಖಾ ತನಿಖೆ ಮತ್ತು ಕ್ರಿಮಿನಲ್‌ ಪ್ರಕ್ರಿಯೆ ಎದುರಿಸುವಾಗ ಮುಜುಗರವಾಗುತ್ತದೆ. ಹೀಗಾಗಿ, ಅವರಿಗೆ ವಕೀಲರ ಸಹಾಯ ಅಗತ್ಯ” ಎಂದು ನ್ಯಾಯಾಲಯ ಹೇಳಿದೆ.

“ಅರ್ಜಿದಾರರಿಗೆ ಕಿವಿಯ ಸಮಸ್ಯೆಯಿದ್ದು, ಅವರಿಗೆ ಅರವತ್ತು ವರ್ಷ ದಾಟಿದೆ. ಅರ್ಜಿದಾರರ ನಿವೃತ್ತಿ ಸೌಲಭ್ಯಗಳನ್ನು ತಡೆ ಹಿಡಿಯಲಾಗಿದ್ದು, ಅವರು ಕ್ರಿಮಿನಲ್‌ ಮತ್ತು ಇಲಾಖಾ ತನಿಖೆ ಎದುರಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಅವರ ನೆರವಿಗೆ ಸಹೋದ್ಯೋಗಿಗಳು ಧಾವಿಸುತ್ತಾರೆ ಎಂದು ನಿರೀಕ್ಷಿಸಲಾಗದು. ಈಗಾಗಲೇ ಅವರು ನಿವೃತ್ತರಾಗಿರುವ ವಿಚಾರವನ್ನೂ ಪರಿಗಣಿಸಬೇಕಾಗುತ್ತದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: ಹುಬ್ಬಳ್ಳಿಯ ಗೋಕುಲದ ಟಿ ರಮೇಶ್‌ ಬಾಬು ಅವರು ಯುನೈಟೆಡ್‌ ಇಂಡಿಯಾ ಇನ್ಶೂರೆನ್ಸ್‌ ಕಂಪೆನಿಗೆ 1982ರಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಸೇರ್ಪಡೆಯಾಗಿದ್ದರು. ಘಟನೆ ನಡೆದ ಸಂದರ್ಭದಲ್ಲಿ ಅವರು ಪ್ರಾಂತೀಯ ವ್ಯವಸ್ಥಾಪಕರಾಗಿದ್ದರು. ಈ ನಡುವೆ 2021ರ ಮಾರ್ಚ್‌ 31ರಂದು ಬಾಬು ನಿವೃತ್ತರಾಗುತ್ತಿದ್ದರು. ಈ ಸಂದರ್ಭದಲ್ಲಿ ಅವರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 197, 209, 120B, 420, 109, 468, 471, 465, 464 ಜೊತೆಗೆ 34ರ ಅಡಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ಬಾಕಿ ಇದ್ದು, ಈ ಮಧ್ಯೆ ಇಲಾಖಾ ತನಿಖೆ ನಡೆಸಲು ಆರೋಪ ಪಟ್ಟಿ ಸಲ್ಲಿಸಲಾಗಿತ್ತು.

ಕಂಪೆನಿಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮೆಗಾ ಅದಾಲತ್‌ನಲ್ಲಿ ಹಲವು ಪ್ರಕರಣಗಳನ್ನು ಇತ್ಯರ್ಥಪಡಿಸಿದ ಆರೋಪದ ಮೇಲೆ ರಮೇಶ್‌ ಬಾಬು ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವುದಲ್ಲದೇ ಇಲಾಖಾ ಪ್ರಕ್ರಿಯೆ ಆರಂಭಿಸಲಾಗಿದೆ. ಹೀಗಾಗಿ, ಅವರು ಕಿವಿಯ ಸಮಸ್ಯೆ ಇರುವುದರಿಂದ ಇಲಾಖಾ ಪ್ರಕ್ರಿಯೆಯಲ್ಲಿ ವಕೀಲರನ್ನು ನೇಮಿಸಿಕೊಳ್ಳಲು ಕೋರಿದ್ದರು. ಇದಕ್ಕೆ ಮನವಿ ಸಲ್ಲಿಸಿದ ದಿನದಂದೇ ಕಂಪೆನಿಯು ಆರೋಪ ಪಟ್ಟಿ ಸಲ್ಲಿಸಿದ ಅಧಿಕಾರಿಯ ನೆರವಿಗೆ ವಕೀಲರನ್ನು ನೇಮಿಸಿಕೊಳ್ಳಲು ನಿಯಮದಲ್ಲಿ ಅವಕಾಶವಿಲ್ಲ ಎಂದು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ರಮೇಶ್‌ ಬಾಬು ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಅರ್ಜಿದಾರರನ್ನು ವಕೀಲ ವಿಠ್ಠಲ್‌ ಎಸ್‌. ತೇಲಿ ಪ್ರತಿನಿಧಿಸಿದ್ದರು. ಪ್ರತಿವಾದಿಗಳನ್ನು ವಕೀಲರಾದ ಅರುಣ್‌ ಎಲ್‌. ನೀಲೋಪಂತ್‌, ಕೆ ಎಸ್‌ ಜಾಧವ್‌, ಎನ್‌ ಆರ್‌ ಕುಪ್ಪೆಲ್ಲೂರ್‌ ಪ್ರತಿನಿಧಿಸಿದ್ದರು.

Attachment
PDF
T Ramesh Babu Vs United India Insurance Company Ltd and others.pdf
Preview
Kannada Bar & Bench
kannada.barandbench.com