[ಭೀಮಾ ಕೋರೆಗಾಂವ್] ಆರೋಪಿಗಳ ಪತ್ರದಲ್ಲಿದ್ದ ಆಕ್ಷೇಪಾರ್ಹ ವಿಚಾರ ನಿಯತಕಾಲಿಕದಲ್ಲಿ ಪ್ರಕಟವಾಗುತ್ತಿತ್ತು ಎಂದ ಎನ್ಐಎ

ಪತ್ರ ವಿನಿಮಯಕ್ಕೆ ತಡೆ ಒಡ್ಡಲಾಗಿದೆ ಎಂದು ಆರೋಪಿಸಿ, ತಲೋಜಾ ಜೈಲಿನ ಅಧೀಕ್ಷಕರ ವಿರುದ್ಧ ತೇಲ್ತುಂಬ್ಡೆ ಮತ್ತು ಗೊನ್ಸಾಲ್ವೆಸ್ ಅವರ ಪತ್ನಿಯರು ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿದ ಮನವಿಗೆ ಎನ್ಐಎ ವಿರೋಧ ವ್ಯಕ್ತಪಡಿಸಿತು.
[ಭೀಮಾ ಕೋರೆಗಾಂವ್] ಆರೋಪಿಗಳ ಪತ್ರದಲ್ಲಿದ್ದ ಆಕ್ಷೇಪಾರ್ಹ ವಿಚಾರ ನಿಯತಕಾಲಿಕದಲ್ಲಿ ಪ್ರಕಟವಾಗುತ್ತಿತ್ತು ಎಂದ ಎನ್ಐಎ

ತಮ್ಮ ಗಂಡಂದಿರಿಗೆ ಬರೆದ ಹಾಗೂ ಅವರಿಂದ ಬರುತ್ತಿದ್ದ ಪತ್ರಗಳನ್ನು ತಡೆಹಿಡಿಯಲಾಗಿದೆ ಎಂದು ಆರೋಪಿಸಿ, ತಲೋಜಾ ಜೈಲಿನ ಅಧೀಕ್ಷಕರ ವಿರುದ್ಧ ಭೀಮಾಕೋರೆಗಾಂವ್‌ ಪ್ರಕರಣದ ಆರೋಪಿಗಳಾದ ಆನಂದ್‌ ತೇಲ್ತುಂಬ್ಡೆ ಮತ್ತು ವೆರ್ನೋನ್‌ ಗೊನ್ಸಾಲ್ವೆಸ್ ಅವರ ಪತ್ನಿಯರು ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿದ ಮನವಿಗೆ ಎನ್‌ಐಎ ವಿರೋಧ ವ್ಯಕ್ತಪಡಿಸಿತು.

ಪತ್ರಗಳಲ್ಲಿ ಬರೆಯುತ್ತಿದ್ದ ʼʼಆಕ್ಷೇಪಾರ್ಹ ವಿಚಾರʼಗಳನ್ನು ಲೇಖನಗಳಾಗಿ ಪ್ರಕಟಿಸಲಾಗುತ್ತಿತ್ತು ಎಂದು ಎನ್‌ಐಎ ಪರವಾಗಿ ಹಾಜರಾದ ವಕೀಲ ಸಂದೇಶ್‌ ಪಾಟೀಲ್‌ ವಾದಿಸಿದರು. ಅಂತಹ ಒಂದು ಲೇಖನ ʼದ ಕಾರವಾನ್‌ʼ ನಿಯತಕಾಲಿಕದಲ್ಲಿ ಪ್ರಕಟವಾಗಿತ್ತು. ಅರ್ಜಿ ತಪ್ಪು ಅರ್ಥಗಳಿಂದ ಕೂಡಿದ್ದು ಅದನ್ನು ವಜಾಗೊಳಿಸಬೇಕು ಎಂದು ಅವರು ಹೇಳಿದರು. ವಾದ ಆಲಿಸಿದ ನ್ಯಾಯಮೂರ್ತಿಗಳಾದ ನಿತಿನ್ ಜಾಮ್ದಾರ್ ಮತ್ತು ಎಸ್‌ ವಿ ಕೊತ್ವಾಲ್ ಅವರಿದ್ದ ಪೀಠ ಅಫಿಡವಿಟ್‌ನಲ್ಲಿ ಈ ಅಂಶ ದಾಖಲಿಸುವಂತೆ ಎನ್‌ಐಎಗೆ ಸೂಚಿಸಿತು.

Also Read
[ಭೀಮಾಕೋರೆಗಾಂವ್ ಪ್ರಕರಣ] ಆನಂದ್ ತೇಲ್ತುಂಬ್ಡೆಗೆ ಜಾಮೀನು ನಿರಾಕರಿಸಿದ ಎನ್‌ಐಎ ವಿಶೇಷ ನ್ಯಾಯಾಲಯ

ಪತ್ರ ವಿನಿಮಯಕ್ಕೆ ಅಡ್ಡಿಪಡಿಸುವುದು ಜೈಲು ಅಧಿಕಾರಿಗಳ ದುರುದ್ದೇಶಪೂರ್ವಕ ಕೃತ್ಯ. ಜೈಲು ಅಧೀಕ್ಷಕರು ಕೈದಿಗಳ ಮೂಲಭೂತ ಹಕ್ಕನ್ನು ಕಸಿದುಕೊಂಡಿದ್ದಾರೆ ಎಂದು ಅರ್ಜಿದಾರರು ತಮ್ಮ ಮನವಿಯಲ್ಲಿ ತಿಳಿಸಿದ್ದರು. ಇದಕ್ಕೆ ಆಕ್ಷೇಪಿಸಿದ ಪಾಟೀಲ್‌ ಅವರು “ಆರೋಪಿತ ವ್ಯಕ್ತಿಗಳು ಪತ್ರ ಬರೆಯಲು ಯಾವುದೇ ನಿರ್ಬಂಧವಿಲ್ಲ. ಆದರೆ ನಕ್ಸಲ್‌ ಚಟುವಟಿಕೆಗೆ ಸಂಬಂಧಿಸಿದಂತೆ ಅವರು ವಿಚಾರಣಾಧೀನ ಕೈದಿಗಳಾಗಿದ್ದಾರೆ ಎಂದರು.

ಮನವಿಗೆ ಪ್ರತಿಕ್ರಿಯೆಯಾಗಿ ಅಫಿಡವಿಟ್‌ ಸಲ್ಲಿಸುವಂತೆ ಜೈಲು ಅಧಿಕಾರಿಗಳಿಗೆ ಕೂಡ ನಿರ್ದೇಶಿಸಿದ ನ್ಯಾಯಾಲಯ, ಎರಡು ವಾರಗಳ ಬಳಿಕ ವಿಚಾರಣೆ ಕೈಗೆತ್ತಿಕೊಳ್ಳಲು ನಿರ್ಧರಿಸಿತು. ಪ್ರಕರಣದ ಆರೋಪಿಗಳನ್ನು ತಲೋಜಾ ಜೈಲಿನಿಂದ ಮುಂಬೈ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸುವಂತೆ ಕೋರಿ ಸಹ ಆರೋಪಿ ಮಹೇಶ್‌ ರಾವುತ್‌ ಅವರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆಯೂ ಉತ್ತರ ನೀಡುವಂತೆ ನ್ಯಾಯಾಲಯ ಸೂಚಿಸಿತು.

Kannada Bar & Bench
kannada.barandbench.com