ಸಾಮಾಜಿಕ ಜಾಲತಾಣಗಳಲ್ಲಿ ದುರುದ್ದೇಶದಿಂದ ತನ್ನ ನ್ಯಾಯಮೂರ್ತಿಗಳನ್ನು ಟೀಕಿಸುವ ಪೋಸ್ಟ್‌ಗಳನ್ನು ಹಾಕುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಆಂಧ್ರ ಪ್ರದೇಶ ಹೈಕೋರ್ಟ್ ಸಮಾಜ ಘಾತುಕ ಶಕ್ತಿಗಳ ವಿರುದ್ಧ ಕೆಂಡಾಮಂಡಲವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹೈಕೋರ್ಟ್ ಮತ್ತು ಅದರ ನ್ಯಾಯಮೂರ್ತಿಗಳ ವಿರುದ್ಧ ಮಾನಹಾನಿ ಮತ್ತು ನಿಂದನಾತ್ಮಕ ಪೋಸ್ಟ್ ಗಳನ್ನು ಹಾಕಿರುವವರ ವಿರುದ್ಧ ದಾಖಲಿಸಿರುವ ಎರಡು ಎಫ್‌ಐಆರ್‌ಗಳ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ನ್ಯಾಯಾಂಗಕ್ಕೆ ಸಂಬಂಧಿಸಿದ ಸಾಮಾಜಿಕ ಜಾಲತಾಣಗಳ ಪೋಸ್ಟ್ ಗಳು ಮತ್ತು ವಿಷಯದ ಮೇಲಿನ ನಿಯಂತ್ರಣದ ತನಿಖೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ರಾಕೇಶ್ ಕುಮಾರ್ ಮತ್ತು ಉಮಾ ದೇವಿ ಅವರಿದ್ದ ವಿಭಾಗೀಯ ಪೀಠವು ನಡೆಸಿದ್ದು, ಆದೇಶದ ಹೊರಡಿಸಿದೆ.
ಎಂಟು ವಾರಗಳಲ್ಲಿ ವಿಚಾರಣೆ ನಡೆಸಿ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸುವಂತೆ ನ್ಯಾಯಪೀಠವು ಸಿಬಿಐಗೆ ಆದೇಶಿಸಿದೆ. ಪ್ರಶ್ನಾರ್ಹವಾದ ಪೋಸ್ಟ್ ಗಳನ್ನು ತೆಗೆದು ಹಾಕಿಸುವಂತೆಯೂ ನ್ಯಾಯಾಲಯವು ಹೆಚ್ಚುವರಿಯಾಗಿ ಸಿಬಿಐಗೆ ಸೂಚಿಸಿದೆ.
ಪ್ರಕರಣದ ತನಿಖೆಯನ್ನು ರಾಜ್ಯದಿಂದ ಹೊರತಾದ ಇತರೆ ಸಂಸ್ಥೆಗೆ ವಹಿಸಬೇಕೆ ಎಂಬುದರ ಕುರಿತು ವಾದಿಸುವಂತೆ ಹೈಕೋರ್ಟ್ ಪ್ರತಿನಿಧಿಸುತ್ತಿರುವ ವಕೀಲ ಎನ್ ಅಶ್ವಿನಿ ಕುಮಾರ್, ಆಂಧ್ರಪ್ರದೇಶದ ಸಿಐಡಿ ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ನಿರಂಜನ್ ರೆಡ್ಡಿ ಮತ್ತು ಅಡ್ವೊಕೇಟ್ ಜನರಲ್ ಎಸ್ ಶ್ರೀರಾಮ್ ಅವರಿಗೆ ನ್ಯಾಯಪೀಠ ಸೂಚಿಸಿತ್ತು. ಈ ವಕೀಲರ ಒಮ್ಮತದ ಸಲಹೆ ಮೇರೆಗೆ ವಿಚಾರಣೆಯನ್ನು ಸಿಬಿಐಗೆ ನೀಡಲು ನ್ಯಾಯಾಲಯ ನಿರ್ಧರಿಸಿತು.
ಸರ್ಕಾರವನ್ನು ಗುರಿಯಾಗಿಸಿ ನ್ಯಾಯಾಲಯವು ಹೀಗೆ ಹೇಳಿದೆ:
ಹೈಕೋರ್ಟ್ ಮತ್ತು ಅದರ ನ್ಯಾಯಮೂರ್ತಿಗಳ ವಿರುದ್ಧ ಪೋಸ್ಟ ಗಳು ದೊಡ್ಡ ಪಿತೂರಿಯಾ ಭಾಗವೇ ಎಂಬುದನ್ನು ಪತ್ತೆಹಚ್ಚುವಂತೆಯೂ ನ್ಯಾಯಪೀಠ ಆದೇಶಿಸಿದೆ. “ತನಿಖೆ ನಡೆಸುವಾಗ ನ್ಯಾಯಾಂಗದ ವಿರುದ್ಧ ದೊಡ್ಡ ಪಿತೂರಿಯ ಭಾಗವಾಗಿ ದಾಳಿ ನಡೆಸಲಾಗುತ್ತಿದೆಯೇ ಇಲ್ಲವೇ ಎಂಬುದನ್ನು ಪತ್ತೆಹಚ್ಚಬೇಕು. ಇದು ದೊಡ್ಡ ಪಿತೂರಿಯ ಭಾಗ ಎಂದು ಸಾಬೀತಾದರೆ ಅಂಥವರ ವಿರುದ್ಧ ಅವರ ಸ್ಥಾನಮಾನಗಳ ಆಚೆಗೆ ಸಿಬಿಐ ಕಠಿಣ ಕ್ರಮಕೈಗೊಳ್ಳಬೇಕು” ಎಂದು ನ್ಯಾಯಪೀಠ ಹೇಳಿದೆ.
ಆಂಧ್ರ ಪ್ರದೇಶದಾದ್ಯಂತ ಇಂಗ್ಲಿಷ್ ಭಾಷೆಯಲ್ಲಿ ಬೋಧನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಆದೇಶ ವಜಾಗೊಳಿಸಿದ ನ್ಯಾಯಮೂರ್ತಿಗಳು ಮತ್ತು ಹೈಕೋರ್ಟ್ ನಿಂದಿಸಿ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಸದಸ್ಯರು ಮೊದಲ ಸುತ್ತಿನಲ್ಲಿ ನಿಂದನಾತ್ಮಕ ಪೋಸ್ಟ್ ಗಳ ಮೂಲಕ ದಾಳಿ ನಡೆಸಿದ್ದರು. ಇದನ್ನು ಆಧರಿಸಿ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರು ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ಆರೋಪಿಗಳ ವಿರುದ್ಧ ಎರಡು ಎಫ್‌ಐಆರ್ ದಾಖಲಿಸಲಾಗಿತ್ತು. ದೂರು ದಾಖಲಾಗುತ್ತಿದ್ದಂತೆ ವೈಎಸ್‌ಆರ್ ಕಾಂಗ್ರೆಸ್ ಸದಸ್ಯರು ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕ ದಾಳಿಯನ್ನು ವ್ಯಾಪಕಗೊಳಿಸಿದ್ದರಿಂದ ಹೈಕೋರ್ಟ್ ರಿಜಿಸ್ಟ್ರಾರ್ ಅವರು ಎರಡನೇ ವರದಿಯನ್ನು ನೀಡಿದ್ದರು. ಇದರ ನಂತರ ನ್ಯಾಯಾಲಯ ಸ್ವಯಂಪ್ರೇರಣೆಯಿಂದ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿತ್ತು.
ಸ್ವಯಂಪ್ರೇರಿತ ನಿಂದನಾ ಪ್ರಕರಣದಡಿ ಸಂಸದ ನಂದಿಗ್ರಾಮ್ ಸುರೇಶ್ ಮತ್ತು ಶಾಸಕ ಅಮಾಂಚಿ ಕೃಷ್ಣ ಮೋಹನ್ ಅವರ ಸಹಿತ 49 ಮಂದಿಯ ವಿರುದ್ಧ ಆಂಧ್ರ ಪ್ರದೇಶ ಹೈಕೋರ್ಟ್ ವಿಚಾರಣೆ ನಡೆಸಿದೆ. ತೆಲುಗುದೇಶಂ ಪಕ್ಷದ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಅಣತಿಯಂತೆ ಹೈಕೋರ್ಟ್ ವರ್ತಿಸುತ್ತಿದೆ ಎನ್ನುವ ಆರೋಪವನ್ನು ಸಾರ್ವಜನಿಕವಾಗಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಮಾಡಿದ್ದರು.