ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್‌ಮೋಹನ್ ರೆಡ್ಡಿ ಮತ್ತು ಸಂಪುಟ ಸಚಿವರು ತಿರುಪತಿ ತಿರುಮಲ ದೇವಸ್ಥಾನ ಪ್ರವೇಶಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ಆಂಧ್ರಪ್ರದೇಶ ಹೈಕೋರ್ಟ್ ಕಳೆದ ವಾರ ವಜಾಗೊಳಿಸಿದೆ. ಮುಖ್ಯಮಂತ್ರಿ ಹಾಗೂ ಸಚಿವರಿದ್ದ ತಂಡವು ಕ್ರೈಸ್ತ ಧರ್ಮವೂ ಸೇರಿದಂತೆ ವಿವಿಧ ಧರ್ಮಗಳಿಗೆ ಸೇರಿದವರನ್ನು ಹೊಂದಿತ್ತು ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿತ್ತು.
ಮುಖ್ಯಮಂತ್ರಿಗಳು ಕ್ರೈಸ್ತ ಸುವಾರ್ತೆ ಸಭೆ ಮತ್ತು ಧರ್ಮೋಪದೇಶ ಕಾರ್ಯಕ್ರಮಗಳಿಗೆ ಹಾಜರಾಗಿದ್ದು ಕ್ರೈಸ್ತರಾಗಿದ್ದಾರೆ ಎಂದು ಭಗವಾನ್ ಶ್ರೀ ವೆಂಕಟೇಶ್ವರ ಸ್ವಾಮಿಯ ಅನುಯಾಯಿ ಎಂದು ಹೇಳಿಕೊಂಡ ಅರ್ಜಿದಾರರಾದ ಅಲೋಕಂ ಸುಧಾಕರ್ ಬಾಬು ಆರೋಪಿಸಿದ್ದರು. ಹಿಂದೂ ದೇವಾಲಯಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಹಿಂದೂಯೇತರರಿಗೆ ಇರುವ ನಿಯಮಾವಳಿಗಳನ್ನು ಜಗನ್ ಉಲ್ಲಂಘಿಸಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದರು.
ನ್ಯಾಯಮೂರ್ತಿ ಬಟ್ಟು ದೇವಾನಂದ್ ಅವರಿದ್ದ ಏಕಸದಸ್ಯ ಪೀಠ ಅರ್ಜಿದಾರರ ವಾದವನ್ನು ತಿರಸ್ಕರಿಸಿತು. ಕೇವಲ ಪ್ರಾರ್ಥನಾ ಸಭೆಗಳು ಮತ್ತು ಸುವಾರ್ತೆ ಸಮಾವೇಶಗಳಿಗೆ ಹಾಜರಾಗುವುದರಿಂದ ಒಬ್ಬ ವ್ಯಕ್ತಿಯನ್ನು ಕ್ರೈಸ್ತನಾಗಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
1872ರ ಭಾರತೀಯ ಕ್ರೈಸ್ತ ವಿವಾಹ ಕಾಯಿದೆಯ ಸೆಕ್ಷನ್ 3ರಲ್ಲಿ "ಕ್ರೈಸ್ತ" ಮತ್ತು "ಸ್ಥಳೀಯ ಕ್ರೈಸ್ತರು" ಎಂಬ ವ್ಯಾಖ್ಯಾನವನ್ನು ಅವಲಂಬಿಸಿದ ಪೀಠವು, "ಬ್ಯಾಪ್ಟಿಸಂ ಎನ್ನುವುದು ಒಬ್ಬ ವ್ಯಕ್ತಿಯನ್ನು ಕ್ರಿಸ್ತನ ಚರ್ಚ್‌ಗೆ ಸೇರಿಸಿಕೊಳ್ಳುವ ಸಂಸ್ಕಾರವಾಗಿದ್ದು ಅದು ಕೇವಲ ಚಿಹ್ನೆಯಲ್ಲ ಕ್ರೈಸ್ತ ವೃತ್ತಿಯ ಹೆಗ್ಗುರುತು” ಎಂದಿದೆ. ಈ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಕ್ರೈಸ್ತರು ಎಂದು ಸಾಬೀತುಪಡಿಸಲು ದಾಖಲೆಗಳಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
"ಒಬ್ಬ ವ್ಯಕ್ತಿ ಬೈಬಲ್‌ನಲ್ಲಿರುವ ಹೆಸರನ್ನು ಇಟ್ಟುಕೊಂಡಿದ್ದರೆ ಅಥವಾ ಚರ್ಚ್‌ನ ಧರ್ಮೋಪದೇಶಕ್ಕೆ ಹಾಜರಾಗಿದ್ದ ಮಾತ್ರಕ್ಕೆ ʼಕ್ರೈಸ್ತ ʼ ಆಗುತ್ತಾನೆಯೇ? ವ್ಯಕ್ತಿ ಬೈಬಲ್ ಓದಿದ್ದಕ್ಕೆ ಅಥವಾ ಅವರ ಮನೆಯಲ್ಲಿ ಶಿಲುಬೆ ಇರಿಸಿಕೊಂಡ ಮಾತ್ರಕ್ಕೆ ಒಬ್ಬರನ್ನು 'ಕ್ರೈಸ್ತ' ಎಂದು ಕರೆಯಬಹುದೇ? ಇದಕ್ಕೆ ಉತ್ತರವು ನಕಾರಾತ್ಮಕವಾಗಿರುತ್ತದೆ" ಎಂದು ಪೀಠ ಹೇಳಿದೆ.
ಮುಖ್ಯಮಂತ್ರಿ ಇತ್ತೀಚೆಗೆ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿದ್ದನ್ನು ಪ್ರಸ್ತಾಪಿಸಿದ ನ್ಯಾಯಾಲಯ "ಅವರನ್ನು 'ಸಿಖ್' ಧರ್ಮದವರು ಎಂದು ಕರೆಯಬಹುದೇ?" ಎಂದು ಪ್ರಶ್ನಿಸಿತು.
ಆಂಧ್ರಪ್ರದೇಶ ಧರ್ಮಾರ್ಥ ಮತ್ತು ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ದತ್ತಿ ಕಾಯಿದೆಯ 136ನೇ ನಿಯಮದಡಿ ಘೋಷಣೆ ಮಾಡಿಕೊಳ್ಳದ ಹಿಂದೂಯೇತರ ಸಚಿವರಿಗೆ ದೇಗುಲ ಪ್ರವೇಶಿಸಲು ಅವಕಾಶ ಮಾಡಿಕೊಟ್ಟ ದೇವಸ್ಥಾನಂ ಟ್ರಸ್ಟ್ ಮತ್ತಿತರ ಅಧಿಕಾರಿಗಳ ಕ್ರಮವನ್ನು ಕೂಡ ಅರ್ಜಿದಾರರು ಪ್ರಶ್ನಿಸಿದ್ದರು. ಹಿಂದೂಯೇತರರು ವೆಂಕಟೇಶ್ವರ ಸ್ವಾಮಿಯ ದೇವಸ್ಥಾನ ಪ್ರವೇಶಿಸುವಾಗ ತಮಗೆ ಭಗವಾನ್ ಶ್ರೀ ವೆಂಕಟೇಶ್ವರ ಸ್ವಾಮಿಯ ಮೇಲೆ ನಂಬಿಕೆ ಇದೆ ಎನ್ನುವ ಘೋಷಣಾಪತ್ರಕ್ಕೆ ಸಹಿ ಹಾಕಬೇಕೆಂದು ನಿಯಮದಲ್ಲಿ ತಿಳಿಸಲಾಗಿದೆ.
ನಿಯಮ ಉಲ್ಲಂಘಿಸಿರುವ ಮುಖ್ಯಮಂತ್ರಿ ಜಗನ್ ತಮ್ಮ ಈಗಿನ ಹುದ್ದೆಯಲ್ಲಿ ಮುಂದುವರೆಯಲು ಸಾಧ್ಯವಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು. ಮುಖ್ಯಮಂತ್ರಿಯವರು ದೇಗುಲಕ್ಕೆ ಭೇಟಿ ನೀಡಿರುವುದು ವಿವಾದ ಸೃಷ್ಟಿಸಿದ್ದು ಹಿಂದೂ ನಂಬಿಕೆ ಮತ್ತು ಭಾವನೆಗಳ ಮೇಲೆ ಪರಿಣಾಮ ಬೀರಿದೆ. ಮುಖ್ಯಮಂತ್ರಿ ಕಾನೂನು ಉಲ್ಲಂಘನೆ ಮಾಡಿದ್ದಲ್ಲದೆ ತಮ್ಮ ಸಂಪುಟ ಸಚಿವರು ಹಾಗೂ ಅಧೀನ ಅಧಿಕಾರಿಗಳನ್ನು ಕಾನೂನು ಉಲ್ಲಂಘಿಸುವಂತೆ ಒತ್ತಾಯಿಸಿದ್ದಾರೆ ಎಂದು ಅರ್ಜಿದಾರರು ವಿವರಿಸಿದ್ದರು.
ಈ ವಾದ ತಿರಸ್ಕರಿಸಿದ ಪೀಠ ʼಕೈಂಕರ್ಯ ಪಟ್ಟಿʼಯಡಿ ಒದಗಿಸಲಾದ ಕಾರ್ಯವಿಧಾನಕ್ಕೆ ಅನುಗುಣವಾಗಿ ಬ್ರಹ್ಮೋತ್ಸವ ಸಮಯದಲ್ಲಿ ʼಪಟ್ಟು ವಸ್ತ್ರʼಗಳನ್ನು ಅರ್ಪಿಸಲು ಟಿಟಿಡಿಯ ದೇಗುಲಗಳಲ್ಲಿ ಮುಖ್ಯಮಂತ್ರಿಗಳನ್ನು ಆಹ್ವಾನಿಸುವುದು ದೀರ್ಘಕಾಲದಿಂದಲೂ ನಾಡಿನ ಸಂಪ್ರದಾಯವಾಗಿದೆ. ಈ ಸಾಮರ್ಥ್ಯದಡಿಯಲ್ಲಿಯೇ ಮುಖ್ಯಮಂತ್ರಿ ದೇವಸ್ಥಾನ ಪ್ರವೇಶಿಸಿದ್ದಾರೆ” ಎಂದಿತು.
“ನ್ಯಾಯಾಲಯ ಅಭಿಪ್ರಾಯಪಡುವಂತೆ ಅವರು ರಾಜ್ಯದ ಮುಖ್ಯಮಂತ್ರಿ ಎನ್ನುವ ಸಾಮರ್ಥ್ಯದಡಿ, ನಾಡಿನ ಜನರ ಪ್ರತಿನಿಧಿಯಾಗಿ, ತಿರುಮಲ ತಿರುಪತಿ ದೇವಸ್ಥಾನಂನ ದೇವಳಗಳಿಗೆ ಪ್ರವೇಶಿಸಿದ್ದಾರೆ. ನಿಯಮ 136ರ ಅಡಿಯಲ್ಲಿ ಅವರು ಘೋಷಣಾ ಪತ್ರ ಸಲ್ಲಿಸುವ ಅಗತ್ಯವಿಲ್ಲ” ಎಂದ ನ್ಯಾಯಾಲಯ “ವೈಯಕ್ತಿಕ ಸಾಮರ್ಥ್ಯದಡಿ ದೇಗುಲ ಪ್ರವೇಶಿಸುವಾಗ, ಒಂದು ವೇಳೆ ಹಿಂದೂ ಆಗಿಲ್ಲದಿದ್ದರೆ ಘೋಷಣಾಪತ್ರದ ಅಗತ್ಯವಿರುತ್ತದೆ,” ಎಂದು ಸ್ಪಷ್ಟಪಡಿಸಿ ಅರ್ಜಿಯನ್ನು ವಜಾಗೊಳಿಸಿತು.