

ಆಂಧ್ರ ಪ್ರದೇಶದ ತಿರುಪತಿ ತಿರುಮಲ ದೇವಸ್ಥಾನದಲ್ಲಿ 2023ರಲ್ಲಿ ನಡೆದ ಹುಂಡಿ ಕಳ್ಳತನ ಪ್ರಕರಣವನ್ನು ಸಿಐಡಿಯ ಉಪ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಶ್ರೇಣಿಯ ಅಧಿಕಾರಿಯೊಬ್ಬರು ತನಿಖೆ ನಡೆಸಬೇಕೆಂದು ಆಂಧ್ರಪ್ರದೇಶ ಹೈಕೋರ್ಟ್ ಆದೇಶಿಸಿದೆ [ ಎಂ ಶ್ರೀನಿವಾಸುಲು ಮತ್ತು ಆಂಧ್ರಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಈ ಹಿಂದೆ ತನಿಖೆ ನಡೆಸಿದ್ದ ಪೊಲೀಸ್ ಅಧಿಕಾರಿ ಮತ್ತು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಅಧಿಕಾರಿಗಳು ಈ ವಿಚಾರವಾಗಿ ಸಂಪೂರ್ಣ ರಾಜಿ ಮಾಡಿಕೊಂಡಿದ್ದಾರೆ ಎಂದು ಅಕ್ಟೋಬರ್ 27 ರಂದು ಹೊರಡಿಸಿರುವ ಆದೇಶದಲ್ಲಿ ನ್ಯಾಯಮೂರ್ತಿ ಗನ್ನಮನೇನಿ ರಾಮಕೃಷ್ಣ ಅವರು ತಿಳಿಸಿದ್ದಾರೆ.
"ಕಾನೂನುಬದ್ಧ ನಿಯಮಗಳು, ಪ್ರಕ್ರಿಯೆಗಳು ಹಾಗೂ ಆಡಳಿತಾತ್ಮಕ ಕ್ರಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ, ಈ ಅಪರಾಧ ಪ್ರಕರಣವನ್ನು ತ್ವರಿತವಾಗಿ ಸದ್ದಿಲ್ಲದೆ ಅಂತ್ಯಗೊಳಿಸುವ ಉದ್ದೇಶದಿಂದ ಅದನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಭಾಗವಹಿಸಿರುವ ವಿವಿಧ ವ್ಯಕ್ತಿಗಳು/ಅಧಿಕಾರಿಗಳಿಗೆ ಮಾತ್ರ ತಿಳಿದಿರುವ ಕಾರಣ ಹೀಗೆ ಮಾಡಲಾಗಿದೆ ಎಂಬುದು ಸ್ಪಷ್ಟ. ಈ ಘಟನೆಗಳು ಸಂಬಂಧಿತ ಅಧಿಕಾರಿಗಳ ಭಾರೀ ನಿರ್ಲಕ್ಷ್ಯ ಮತ್ತು ವಿವೇಚನಾರಹಿತ ಕಾರ್ಯವೈಖರಿಯಿಂದ ನಡೆದವೋ ಅಥವಾ ಅವರ ಸಕ್ರಿಯ ಶಾಮೀಲು ಮತ್ತು ಕುಯುಕ್ತಿಯಿಂದ ನಡೆದವೋ ಎಂಬುದು ಈ ನ್ಯಾಯಾಲಯದ ದೃಷ್ಟಿಯಲ್ಲಿ ಅತ್ಯಂತ ಗಂಭೀರವಾದ ತನಿಖೆಗೆ ಒಳಪಡಬೇಕಾದ ವಿಷಯವಾಗಿದೆ,” ಎಂದು ನ್ಯಾಯಾಲಯವು ಆದೇಶದಲ್ಲಿ ವಿವರಿಸಿದೆ.
ಏಪ್ರಿಲ್ 2023 ರಲ್ಲಿ, ದೇವಾಲಯದಲ್ಲಿ ವಿದೇಶಿ ನೋಟು ಕಳ್ಳತನವಾಗಿದೆ ಎಂದು ಆರೋಪಿಸಿ ಟಿಟಿಡಿಯ ಅಧಿಕಾರಿಯೊಬ್ಬರು ದೂರು ದಾಖಲಿಸಿದ್ದರು.
ನಂತರ ಪೊಲೀಸರು ಪರಕಮಣಿಯಲ್ಲಿ (ಕಾಣಿಕೆ ಹುಂಡಿಯ ಹಣ ಎಣಿಸುವ ಸ್ಥಳ) ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದ ಸಿ ವಿ ರವಿ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 379 (ಕಳ್ಳತನ) ಮತ್ತು 381 (ಗುಮಾಸ್ತ ಅಥವಾ ಸೇವಕನಿಂದ ಯಜಮಾನನ ಒಡೆತನದಲ್ಲಿರುವ ಆಸ್ತಿಯ ಕಳ್ಳತನ) ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು.
ಆದರೆ ಪ್ರಕರಣ ಇತ್ಯರ್ಥಗೊಳಿಸಿದ್ದ ಲೋಕ್ ಅದಾಲತ್ ಆದೇಶವನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಅಮಾನತುಗೊಳಿಸಿದ ಹೈಕೋರ್ಟ್ ಇಡೀ ಪ್ರಕರಣದ ದಾಖಲೆಗಳ ಸಂಗ್ರಹಕ್ಕೆ ಆದೇಶಿಸಿತ್ತು.
ಈ ಹಿನ್ನೆಲೆಯಲ್ಲಿ ಟಿಟಿಡಿ ಮಂಡಳಿ ಮತ್ತು ಅದರ ಅಧಿಕಾರಿಗಳ ಪಾತ್ರ, ತನಿಖಾಧಿಕಾರಿ ಮತ್ತು ದೂರುದಾರರ ಪಾತ್ರ ಸೇರಿದಂತೆ ಪ್ರಕರಣವನ್ನು ಎಲ್ಲ ಆಯಾಮಗಳಿಂದ ತನಿಖೆಗೆ ಪರಿಗಣಿಸುವಂತೆ ಸೋಮವಾರ ಅದು ಸಿಐಡಿಗೆ ಸೂಚಿಸಿದೆ. ಅಲ್ಲದೆ, ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ಸಲ್ಲಿಸಬೇಕು ಮತ್ತು ತನಿಖೆಯ ಆಧಾರದ ಮೇಲೆ ಕ್ರಮಕ್ಕೆ ಶಿಫಾರಸು ಮಾಡಬೇಕು ಡಿಜಿಪಿ ದರ್ಜೆ ಅಧಿಕಾರಿಗೆ ಸೂಚಿಸಲಾಗಿದೆ.
ರವಿ ಕುಮಾರ್ ಸರ್ಕಾರಿ ಅಧಿಕಾರಿಯಾಗಿದ್ದರೂ ಐಪಿಸಿ ಸೆಕ್ಷನ್ 409 ಅಡಿ (ಸಾರ್ವಜನಿಕ ಸೇವಕನಿಂದ ಕ್ರಿಮಿನಲ್ ವಿಶ್ವಾಸದ್ರೋಹ) ಪ್ರಕರಣ ದಾಖಲಿಸುವ ಬದಲು ಐಪಿಸಿ ಸೆಕ್ಷನ್ 379, 381ರಡಿ ಸಾಮಾನ್ಯ ಕಳ್ಳತನದ ಆರೋಪ ದಾಖಲಿಸಿರುವುದನ್ನುನ್ಯಾಯಾಲಯ ಪ್ರಶ್ನಿಸಿದೆ. ಇದೊಂದು ಗಂಭೀರ ಲೋಪ ಎಂದಿರುವ ಅದು ಹಗರಣವನ್ನು ಮುಚ್ಚಿ ಹಾಕಲು ಕಡಿಮೆ ಪರಿಣಾಮ ಬೀರುವ ಆರೋಪಗಳನ್ನು ಹೊರಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಲೋಕ ಅದಾಲತ್ ತೀರ್ಪಿನ ಕಾನೂನು ಬದ್ಧತೆಗೆ ಸಂಬಂಧಿಸಿದಂತೆ ವಿಭಾಗೀಯ ಪೀಠ ವಿಚಾರಣೆ ನಡೆಸುವಂತೆ ನ್ಯಾಯಾಲಯ ಆದೇಶಿಸಿತು. ಆರೋಪಿಯನ್ನು ಬಂಧಿಸಿಲ್ಲ ಮತ್ತು ಅವನ ಆಸ್ತಿ ಕುರಿತಂತೆಯೂ ಪೊಲೀಸರು ತನಿಖೆ ಮಾಡಿಲ್ಲ ಎಂದು ನ್ಯಾಯಾಲಯ ಹೇಳಿತು.
ಆರೋಪಿಗಳಿಂದ ಉಡುಗೊರೆ ಪತ್ರ ಸ್ವೀಕರಿಸಿದ್ದ ಟಿಟಿಡಿ
ಆರೋಪಿಯ ಕುಟುಂಬ ₹14.5 ಕೋಟಿ ಮೌಲ್ಯದ ಆಸ್ತಿಯನ್ನು ಟಿಟಿಡಿಗೆ ದೇಣಿಗೆ ನೀಡಿರುವದನ್ನು ಗಮನಿಸಿದ ನ್ಯಾಯಾಲಯ ನಿಯಮ ಪ್ರಕಾರ ಪತ್ರಿಕೆಯಲ್ಲಿ ಪ್ರಕಟಿಸದೆ ವಿಶೇಷ ವಿನಾಯಿತಿಯೊಂದಿಗೆ ಟಿಟಿಡಿ ದೇಣಿಗೆ ಸ್ವೀಕರಿಸಿರುವುದು ಸಂಶಯಾಸ್ಪದ ಎಂದಿದ್ದು ಈ ಆಸ್ತಿಯ ಮೂಲ ಮತ್ತು ಆದಾಯದ ಕಾನೂನುಬದ್ಧತೆ ಬಗ್ಗೆ ಸಿಐಡಿ ತನಿಖೆ ನಡೆಸಬೇಕು ಎಂದಿದೆ.
ಅಲ್ಲದೆ ನ್ಯಾಯಾಲಯಗಳು ಕೂಡ ರಾಜಿಯಾಗಿರುವ ಸಾಧ್ಯತೆಯನ್ನು ಉಲ್ಲೇಖಿಸಿದ ಹೈಕೋರ್ಟ್ ತಿರುಪತಿ ನ್ಯಾಯಾಲಯಕ್ಕೆ ಸಂಬಂಧಿಸಿದ ನ್ಯಾಯಾಧೀಶರಿಂದ ಶಿಷ್ಟಾಚಾರ ಕರ್ತವ್ಯಗಳನ್ನು ಹಿಂಪಡೆಯುವಂತೆ ಸೂಚಿಸಿದೆ. ಮುಂದಿನ ವಿಚಾರಣೆ ಡಿಸೆಂಬರ್ 2ರಂದು ನಡೆಯಲಿದೆ.