
ಶಬರಿಮಲೆ ದೇವಸ್ಥಾನದಲ್ಲಿ ದ್ವಾರಪಾಲಕ ಮೂರ್ತಿಗಳಿಗೆ ಹೊದಿಸಲಾದ ಚಿನ್ನ ಲೇಪಿತ ತಾಮ್ರದ ತಗಡುಗಳಿಂದ ಚಿನ್ನ ಕಾಣೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ಇಂದು ಗೌಪ್ಯ ವಿಚಾರಣೆ ನಡೆಸಿತು [ಸ್ವಯಂಪ್ರೇರಿತ ದಾವೆ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಗೌಪ್ಯ ವಿಚಾರಣೆ ನಿರ್ಧಾರವನ್ನು ನ್ಯಾಯಾಲಯ ರಿಜಿಸ್ಟ್ರಿ ನಿನ್ನೆ ತಿಳಿಸಿತ್ತು. ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ವಿ ಮತ್ತು ಕೆ ವಿ ಜಯಕುಮಾರ್ ಅವರಿದ್ದ ವಿಭಾಗೀಯ ಪೀಠ ಸಾರ್ವಜನಿಕರು ಮತ್ತು ಮಾಧ್ಯಮಗಳಿಗೆ ಪ್ರವೇಶ ನಿರ್ಬಂಧಿಸಿ ವಿಚಾರಣೆ ನಡೆಸಿತು.
ಚಿನ್ನ ಕಳೆದುಹೋದ ಆರೋಪದ ಬಗ್ಗೆ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆ ನಡೆಸುವಂತೆ ನ್ಯಾಯಾಲಯ ಈ ಹಿಂದೆ ಆದೇಶಿಸಿತ್ತು. ಅಲ್ಲದೆ ಪ್ರಕರಣವನ್ನು ರೋಚಕಗೊಳಿಸದಂತೆ ಮಾಧ್ಯಮಗಳಿಗೆ ಎಚ್ಚರಿಕೆ ನೀಡಿತ್ತು. ತನಿಖೆಯಲ್ಲಿ ಭಾಗಿಯಾಗಿರುವ ಯಾವುದೇ ಅಧಿಕಾರಿ ಮಾಧ್ಯಮಗಳೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳದಂತೆ ನ್ಯಾಯಾಲಯ ನಿರ್ದೇಶಿಸಿತ್ತು.
ಇಂದು ಖುದ್ದು ನ್ಯಾಯಾಲಯಕ್ಕೆ ಹಾಜರಾದ ತನಿಖಾಧಿಕಾರಿ ಮುಚ್ಚಿದ ಲಕೋಟೆಯಲ್ಲಿ ಮಧ್ಯಂತರ ವರದಿ ಹಸ್ತಾಂತರಿಸಿದರು.
ಶಬರಿಮಲೆ ದೇವಸ್ಥಾನದಲ್ಲಿ 'ದ್ವಾರಪಾಲಕ ಮೂರ್ತಿಗಳಿಗೆ ಹೊದಿಸಲಾದ ಚಿನ್ನ ಲೇಪಿತ ತಾಮ್ರದ ತಗಡುಗಳಿಂದ ಚಿನ್ನದ ಅಂಶ ಕಾಣೆಯಾಗಿರುವ ಬಗ್ಗೆ ವರದಿಯಾಗಿತ್ತು.
ಚಿನ್ನ ಲೇಪನ ಕೆಲಸ ವಹಿಸಿಕೊಂಡಿದ್ದ ವ್ಯಕ್ತಿಯೊಬ್ಬರು ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಅಧ್ಯಕ್ಷರಿಗೆ ಇಮೇಲ್ ಕಳುಹಿಸಿ ಉಳಿದ ಚಿನ್ನವನ್ನು ಮದುವೆಗೆ ಬಳಸಬಹುದೇ ಎಂದು ಕೇಳಿರುವುದು ಬಹಿರಂಗವಾಗಿತ್ತು. ಆ ಬಳಿಕ ನ್ಯಾಯಾಲಯ ಎಸ್ಐಟಿ ತನಿಖೆಗೆ ಆದೇಶಿಸಿತ್ತು.
ದ್ವಾರಪಾಲಕ ವಿಗ್ರಹಗಳ ಚಿನ್ನ ಲೇಪಿತ ತಾಮ್ರದ ತಗಡುಗಳನ್ನು ನ್ಯಾಯಾಲಯ ಅಥವಾ ಶಬರಿಮಲೆಯ ವಿಶೇಷ ಆಯುಕ್ತರಿಗೆ ತಿಳಿಸದೆಯೇ ದುರಸ್ತಿಗಾಗಿ ಕಳುಹಿಸಲಾಗಿತ್ತು. ಆಗ ಸ್ವಲ್ಪ ಪ್ರಮಾಣದ ಚಿನ್ನ ಕಳೆದುಹೋಗಿದೆ ಎಂಬ ಕಳವಳ ವ್ಯಕ್ತವಾಗಿತ್ತು. ಮೂರ್ತಿಯ ಹೊದಿಕೆಗಳನ್ನು ತೆಗೆದಿದಿದ್ದ ಟಿಡಿಬಿ, ಉನ್ನಿಕೃಷ್ಣನ್ ಪೊಟ್ಟಿ ಎಂಬ ಭಕ್ತರ ಪ್ರಾಯೋಜಕತ್ವದಡಿಯಲ್ಲಿ ದುರಸ್ತಿ ಕಾರ್ಯವನ್ನು ಚೆನ್ನೈ ಮೂಲದ 'ಸ್ಮಾರ್ಟ್ ಕ್ರಿಯೇಷನ್ಸ್' ಎಂಬ ಸಂಸ್ಥೆಗೆ ವಹಿಸಿತ್ತು.
ಸ್ಮಾರ್ಟ್ ಕ್ರಿಯೇಷನ್ಸ್ಗೆ 42.8 ಕೆಜಿ ತೂಕದ ವಸ್ತು ಹಸ್ತಾಂತರಿಸಲಾಗಿದ್ದರೂ ಕೇವಲ 38 ಕೆಜಿ ತೂಕದ ವಸ್ತುಗಳನ್ನು ಹಸ್ತಾಂತರಿಸಲಾಗಿದೆ ಎಂದು ದಾಖಲಿಸಲಾಗಿತ್ತು. ಸುಮಾರು 4.54 ಕೆಜಿ ವ್ಯತ್ಯಾಸ ಇದ್ದುದನ್ನು ನ್ಯಾಯಾಲಯ ಕಳೆದ ವಿಚಾರಣೆ ವೇಳೆ ಗಂಭೀರವಾಗಿ ಪರಿಗಣಿಸಿತ್ತು. ಸೆಪ್ಟೆಂಬರ್ 17 ರಂದು ನ್ಯಾಯಾಲಯ ಪ್ರಕರಣದ ತನಿಖೆಗೆ ಆದೇಶಿಸಿತ್ತು. ಮುಖ್ಯ ವಿಚಕ್ಷಣಾ ಅಧಿಕಾರಿ ನಂತರ ನ್ಯಾಯಾಲಯಕ್ಕೆ ಸಮಗ್ರ ವರದಿ ಸಲ್ಲಿಸಿದ್ದರು.
ಉನ್ನಿಕೃಷ್ಣನ್ ಪೊಟ್ಟಿಯವರ ಸಹೋದರಿ ಮಿನಿಯವರ ಮನೆಯಲ್ಲಿ ಕೆಲವು ಚಿನ್ನ ಲೇಪಿತ ತಗಡುಗಳನ್ನು ಬಚ್ಚಿಟ್ಟಿರುವ ವಿಚಾರ ವರದಿಯಲ್ಲಿ ಇದ್ದು , ಶೋಧದ ಸಮಯದಲ್ಲಿ ಜಾಗೃತ ದಳ ಅವುಗಳನ್ನು ವಶಪಡಿಸಿಕೊಂಡಿರುವುದು ತಿಳಿದುಬಂದಿದೆ. ಪೊಟ್ಟಿ ಅವರಿಗೆ ಔಪಚಾರಿಕವಾಗಿ ಅಂತಹ ವಸ್ತುಗಳನ್ನು ನೀಡಲಾಗಿತ್ತು ಎಂಬ ದಾಖಲೆ ಟಿಡಿಬಿ ಬಳಿ ಇಲ್ಲದಿರಿವುದರಿಂದ ಈ ವಿಚಾರ ಕಳವಳಕಾರಿ ಎಂದು ನ್ಯಾಯಾಲಯ ಹಿಂದಿನ ವಿಚಾರಣೆ ವೇಳೆ ಹೇಳಿತ್ತು.
ಪ್ರಕರಣದ ಸೂಕ್ಷ್ಮ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು, ನ್ಯಾಯಾಲಯವು ಇಂದು ಗೌಪ್ಯ ವಿಚಾರಣೆ ನಡೆಸಿತು. ನ್ಯಾಯಾಲಯವು ಇಂದು ಹೊರಡಿಸಿರುವ ಮಧ್ಯಂತರ ಆದೇಶ ಇನ್ನೂ ಬಹಿರಂಗಗೊಂಡಿಲ್ಲ.