ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 41 ಎ ಅಡಿಯಲ್ಲಿ ಬಂಧನದ ವಿರುದ್ಧ ನೀಡಲಾಗಿರುವ ರಕ್ಷಣೆಯನ್ನು ಕಡೆಗಣಿಸಿ ಎಫ್‌ಐಆರ್ ದಾಖಲಾಗುತ್ತಿದ್ದಂತೆ ವ್ಯಕ್ತಿಯ ಬಂಧನಕ್ಕೆ ಮುಂದಾದ ಪೊಲೀಸರನ್ನು ಆಂಧ್ರಪ್ರದೇಶ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ʼಸುಪ್ರೀಂಕೋರ್ಟ್ ಸ್ಪಷ್ಟ ಮಾರ್ಗದರ್ಶನ ನೀಡಿರುವುದರ ಹೊರತಾಗಿಯೂ ಕೆಲ ಪೊಲೀಸ್ ಅಧಿಕಾರಿಗಳು ಸೂಕ್ತ ತನಿಖೆ ನಡೆಸದೆ ದೂರು ದಾಖಲಿಸಿದ ಕೂಡಲೇ ಬಂಧನ ಮುಂದುವರೆಸುತ್ತಿದ್ದಾರೆʼ ಎಂದು ನ್ಯಾ. ಲಲಿತಾ ಕನ್ನೆಗೇಟಿ ಅವರಿದ್ದ ಏಕಸದಸ್ಯ ಪೀಠ ಅಸಮಾಧಾನ ಸೂಚಿಸಿದೆ. ಫೇಸ್‌ಬುಕ್ ಪೋಸ್ಟ್‌ಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಐಪಿಸಿ ಸೆಕ್ಷನ್ 153-A ಅಡಿ ಹೂಡಲಾದ ಕ್ರಿಮಿನಲ್ ಮೊಕದ್ದಮೆಯನ್ನು ಹಿಂಪಡೆಯುವಂತೆ ಕೋರಿ ಟಿಡಿಪಿ ಮುಖಂಡ ಜಂಗಲ ಸಾಂಬಶಿವ ಅರ್ಜಿ ಸಲ್ಲಿಸಿದ್ದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರ ನಡೆಯನ್ನು ಕೂಡ ಪೀಠ ಕಟುವಾಗಿ ಪ್ರಶ್ನಿಸಿತು. ಪ್ರಕರಣದಲ್ಲಿ ಬಂಧನಕ್ಕೊಳಗಾದವರನ್ನು ಕಸ್ಟಡಿಗೆ ಪಡೆಯಬೇಕೆಂದು ನ್ಯಾಯಾಧೀಶರು ಸೂಚಿಸಿದ್ದು ಇದು ಸಿಆರ್‌ಪಿಸಿ 41 ಎ ಸೆಕ್ಷನ್‌ನ ಸ್ಪಷ್ಟ ಉಲ್ಲಂಘನೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಬಂಧನದ ಅವಶ್ಯಕತೆ ಇಲ್ಲದಿದ್ದಾಗ ಪೊಲೀಸ್ ಅಧಿಕಾರಿಯ ಮುಂದೆ ಹಾಜರಾಗುವಂತೆ ಸೆಕ್ಷನ್ 41 ಎ ಅಡಿ ನೋಟಿಸ್ ನೀಡಲಾಗುತ್ತದೆ.
ಅರ್ಜಿದಾರರ ಪರ ವಕೀಲರು ಅರ್ನೇಶ್ ಕುಮಾರ್ ಮತ್ತು ಬಿಹಾರ ಸರ್ಕಾರದ ನಡುವಣ ಪ್ರಕರಣವನ್ನು ಉಲ್ಲೇಖಿಸಿ ವಾದಮಂಡಿಸಿದರು. ಬಳಿಕ ನ್ಯಾಯಮೂರ್ತಿ ಕನ್ನೆಗೇಟಿ ಈ ಕೆಳಗಿನ ಅಂಶಗಳನ್ನು ಪುನರುಚ್ಚರಿಸಿದರು.
ಪೊಲೀಸ್ ಅಧಿಕಾರಿಯೊಬ್ಬರು ಸೆಕ್ಷನ್ 41-ಎ ಅಡಿಯಲ್ಲಿ ನೋಟಿಸ್ ವಿತರಿಸಿ ಬಂಧನಕ್ಕೆ ಮುಂದಾದರೆ, ಆ ಬಂಧನಕ್ಕೆ ಅಗತ್ಯವಾದ ಕಾರಣಗಳೊಂದಿಗೆ ಅವರು ಸೂಕ್ತ ರೀತಿಯಲ್ಲಿ ಸಲ್ಲಿಸಿದ ಪಟ್ಟಿಯನ್ನು ಕಳುಹಿಸಬೇಕಾಗಿತ್ತು.
ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದಾಗ ನ್ಯಾಯಾಧೀಶರು ಆರೋಪಿಯ ಬಂಧನಕ್ಕೆ ಕಾರಣವಾದ ಅಂಶಗಳನ್ನು ದಾಖಲಿಸಿಕೊಳ್ಳಬೇಕಿದೆ.
ಈ ನಿರ್ದೇಶನಗಳನ್ನು ಪಾಲಿಸಲು ವಿಫಲವಾದರೆ ಪೊಲೀಸ್ ಅಧಿಕಾರಿ ಇಲಾಖಾ ಕ್ರಮಕ್ಕೆ ಒಳಪಡಬೇಕಾಗುತ್ತದೆ ಮತ್ತು ಹೈಕೋರ್ಟ್‌ನ ನ್ಯಾಯಾಂಗ ನಿಂದನೆ ಪ್ರಕರಣವನ್ನು ಎದುರಿಸಬೇಕಾಗುತ್ತದೆ. ನ್ಯಾಯಾಧೀಶರು ಕೂಡ ಇಲಾಖಾ ವಿಚಾರಣೆ ಎದುರಿಸಬೇಕಾಗುತ್ತದೆ.
ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ, ಅರ್ಜಿದಾರರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗೆ ನ್ಯಾಯಾಲಯ ತಡೆ ನೀಡಿದ್ದು ವಿಚಾರಣೆಯನ್ನು ನವೆಂಬರ್ 26 ಕ್ಕೆ ಮುಂದೂಡಿದೆ. ಅರ್ಜಿದಾರರ ಪರವಾಗಿ ವಕೀಲ ವಿ ಸಾಯಿ ರಾವ್ ವಾದ ಮಂಡಿಸಿದರು. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಹಾಜರಿದ್ದರು.