
ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದಲ್ಲಿ ನೀಡಲಾಗುವ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಪತ್ತೆಯಾದ ವಿವಾದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದಲ್ಲಿ (ಎಸ್‌ಐಟಿ) ತನಿಖಾಧಿಕಾರಿಯೊಬ್ಬರನ್ನು ಸಿಬಿಐ ನಿರ್ದೇಶಕರು ಕಾನೂನುಬಾಹಿರವಾಗಿ ನಾಮನಿರ್ದೇಶನ ಮಾಡಿದ್ದಾರೆ ಎಂದು ಆಂಧ್ರಪ್ರದೇಶ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ಕಡೂರು ಚಿನ್ನಪ್ಪಣ್ಣ ಮತ್ತು ಆಂಧ್ರಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ] .
ಸುಪ್ರೀಂ ಕೋರ್ಟ್ ರಚಿಸಿದ ಎಸ್‌ಐಟಿಯಲ್ಲಿ ಜೆ ವೆಂಕಟ್ ರಾವ್ ಅವರ ಹೆಸರು ಇರಲಿಲ್ಲ ಆದರೆ ಸಿಬಿಐ ನಿರ್ದೇಶಕರು ನಂತರ ಅವರನ್ನು ತನಿಖಾಧಿಕಾರಿಯಾಗಿ ನಾಮನಿರ್ದೇಶನ ಮಾಡಿದರು ಎಂದು ನ್ಯಾಯಮೂರ್ತಿ ಹರಿನಾಥ್ ಎನ್ ಹೇಳಿದ್ದಾರೆ.
ರಾವ್ ಅವರಿಗೆ ತನಿಖೆ ನಡೆಸುವಂತೆ ಸಿಬಿಐ ನಿರ್ದೇಶಕರು ನಿರ್ದೇಶಿಸಲು ಸಾಧ್ಯವಿಲ್ಲ. ಹಾಗೆ ಮಾಡುವುದು ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳಿಗೆ ವಿರುದ್ಧ ಎಂದು ನ್ಯಾಯಮೂರ್ತಿ ಹರಿನಾಥ್ ಹೇಳಿದರು. ಆದ್ದರಿಂದ ಮುಕ್ತ ಮತ್ತು ನ್ಯಾಯಯುತ ತನಿಖೆ ನಡೆಸಿ ಇಡೀ ಪ್ರಕರಣದ ಮೇಲ್ವಿಚಾರಣೆ ಮಾಡುವಂತೆ ಸಿಬಿಐ ನಿರ್ದೇಶಕರಿಗೆ ಆದೇಶಿಸಿತು.
ಪ್ರಕರಣದಲ್ಲಿ ನ್ಯಾಯಯುತ ತನಿಖೆ ನಡೆಸಲು ನಿರ್ದೇಶನ ನೀಡುವಂತೆ ಕೋರಿ ಕಡೂರು ಚಿನ್ನಪ್ಪಣ್ಣ ಎಂಬ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಹಿಂದಿನ ಕಾಂಗ್ರೆಸ್ ಸರ್ಕಾರ ತಿರುಪತಿ ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಿತ್ತು ಎಂದು 2024ರ ನವೆಂಬರ್‌ನಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡುಅವರ ಸರ್ಕಾರ ಆರೋಪಿಸಿದ ಹಿನ್ನೆಲೆಯಲ್ಲಿ ವಿವಾದದ ಕಿಡಿ ಹೊತ್ತಿತ್ತು.
ಆರಂಭದಲ್ಲಿ, ರಾಜ್ಯ ಸರ್ಕಾರ ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚಿಸಿತ್ತು. ಸಿಬಿಐನ ಇಬ್ಬರು ಅಧಿಕಾರಿಗಳು, ಆಂಧ್ರಪ್ರದೇಶ ಪೊಲೀಸ್ ಇಲಾಖೆಯ ಇಬ್ಬರು ಅಧಿಕಾರಿಗಳು ಹಾಗೂ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ಎಸ್‌ಐಟಿ ತಂಡದಲ್ಲಿರಬೇಕು ಎಂದು ಸುಪ್ರೀಂ ಕೋರ್ಟ್ ನಂತರ ಆದೇಶಿಸಿತ್ತು.
ಆದರೆ, ಸಿಬಿಐ ನಿರ್ದೇಶಕರು ತನಿಖೆಯನ್ನು ತಿರುಪತಿಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗೆ ವಹಿಸಿದ್ದರು. ಅವರು ರಾಜ್ಯ ಸರ್ಕಾರ ಈ ಹಿಂದೆ ರಚಿಸಿದ್ದ ಎಸ್‌ಐಟಿಯ ಸದಸ್ಯರಾಗಿದ್ದರು. ಇದು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ ಎಂದು ಆರೋಪಿ ಚಿನ್ನಪ್ಪಣ್ಣ ದೂರಿದ್ದರು. ಈ ವಾದವನ್ನು ಪುರಸ್ಕರಿಸಿದ ಹೈಕೋರ್ಟ್ ರಾವ್ ಅವರ ನೇಮಕಾತಿ ಕಾನೂನುಬಾಹಿರ ಎಂದಿದೆ.