ತಿರುಪತಿ ಲಡ್ಡು ವಿವಾದ: ಸಿಬಿಐ ಉಸ್ತುವಾರಿಯಲ್ಲಿ ಎಸ್‌ಐಟಿ ತನಿಖೆಗೆ ಆದೇಶಿಸಿದ ಸುಪ್ರೀಂ ಕೋರ್ಟ್
ಹಾಲಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಸರ್ಕಾರವು ಹಿಂದಿನ ವೈಎಸ್‌ಆರ್ ಕಾಂಗ್ರೆಸ್ ಸರ್ಕಾರವು ಕಳಪೆ ಗುಣಮಟ್ಟದ ಪ್ರಾಣಿಯ ಕೊಬ್ಬಿನ ಅಂಶ ಒಳಗೊಂಡ ತುಪ್ಪದಿಂದ ವಿಶ್ವವಿಖ್ಯಾತ ಶ್ರೀವೆಂಕಟೇಶ್ವರ ದೇವಾಲಯದಲ್ಲಿ ಲಡ್ಡು ತಯಾರಿಸಿದೆ ಎಂಬ ಆರೋಪದ ತನಿಖೆಗೆ ಶುಕ್ರವಾರ ಸುಪ್ರೀಂ ಕೋರ್ಟ್ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ತನಿಖೆಗೆ ಆದೇಶಿಸಿದೆ.
ವೆಂಕಟೇಶ್ವರ ದೇವಾಲಯದಲ್ಲಿನ ಲಡ್ಡು ತಯಾರಿಕೆಯಲ್ಲಿ ಪ್ರಾಣಿಜನ್ಯ ಕೊಬ್ಬಿನ ಅಂಶ ಒಳಗೊಂಡ ತುಪ್ಪವನ್ನು ಬಳಕೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರ ವಿಭಾಗೀಯ ಪೀಠ ನಡೆಸಿತು.
ಎಸ್‌ಐಟಿ ತಂಡವು ಸಿಬಿಐನ ಇಬ್ಬರು ಅಧಿಕಾರಿಗಳು, ಆಂಧ್ರಪ್ರದೇಶ ಪೊಲೀಸ್ ಇಲಾಖೆಯ ಇಬ್ಬರು ಅಧಿಕಾರಿಗಳು ಹಾಗೂ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರನ್ನು ಒಳಗೊಳ್ಳಲಿದೆ ಎಂದು ನ್ಯಾಯಾಲಯ ನಿರ್ದೇಶಿಸಿದೆ.
“ಕೋಟ್ಯಂತರ ಜನರ ಭಾವನೆಗಳನ್ನು ರಕ್ಷಿಸುವ ಉದ್ದೇಶದಿಂದ ಸಿಬಿಐ ಮತ್ತು ಆಂಧ್ರ ಪ್ರದೇಶ ಪೊಲೀಸ್ ಇಲಾಖೆಯ ತಲಾ ಇಬ್ಬರು ಅಧಿಕಾರಿಗಳು ಹಾಗೂ ಎಫ್‌ಎಸ್‌ಎಸ್‌ಎಐನ ಒಬ್ಬರು ಹಿರಿಯ ಅಧಿಕಾರಿಯನ್ನು ಒಳಗೊಂಡ ಸ್ವತಂತ್ರ ವಿಶೇಷ ತನಿಖಾ ದಳವು ತನಿಖೆ ನಡೆಸಲಿದೆ” ಎಂದು ನ್ಯಾಯಾಲಯ ಹೇಳಿದೆ.
ಈಗಾಗಲೇ ರಾಜ್ಯ ಸರ್ಕಾರ ರಚಿಸಿರುವ ಎಸ್‌ಐಟಿಗೆ ಸುಪ್ರೀಂ ಕೋರ್ಟ್ ರಚಿಸಿರುವ ಎಸ್‌ಐಟಿಯು ಪರ್ಯಾಯವಾಗಿರಲಿದೆ. ಹೊಸ ಎಸ್‌ಐಟಿಯಲ್ಲಿ ಸಿಬಿಐ ನಿರ್ದೇಶಕರು ನಾಮನಿರ್ದೇಶನ ಮಾಡುವ ಇಬ್ಬರು ಅಧಿಕಾರಿಗಳು ಹಾಗೂ ಆಂಧ್ರ ಪ್ರದೇಶ ಸರ್ಕಾರ ನಾಮನಿರ್ದೇಶನ ಮಾಡುವ ಇಬ್ಬರು ಅಧಿಕಾರಿಗಳು, ಎಫ್‌ಎಸ್‌ಎಸ್‌ಎಐ ಅಧ್ಯಕ್ಷರು ನಾಮನಿರ್ದೇಶನ ಮಾಡುವ ಹಿರಿಯ ಅಧಿಕಾರಿಯೊಬ್ಬರು ಇರಲಿದ್ದಾರೆ. ಈ ತನಿಖೆಯ ಉಸ್ತುವಾರಿಯನ್ನು ಸಿಬಿಐ ನಿಭಾಯಿಸಲಿದೆ ಎಂದು ನ್ಯಾಯಾಲಯ ಹೇಳಿದೆ.
“ರಾಜ್ಯ ಎಸ್‌ಐಟಿ ಸದಸ್ಯರ ಮೇಲಿನ ಸ್ವಾತಂತ್ರ್ಯ ಮತ್ತು ನ್ಯಾಯಸಮ್ಮತತೆಯ ಪ್ರತಿಬಿಂಬವಾಗಿ ನಮ್ಮ ಆದೇಶವನ್ನು ಅರ್ಥೈಸಬಾರದು. ದೇವರಲ್ಲಿ ನಂಬಿಕೆ ಇಟ್ಟಿರುವ ಕೋಟ್ಯಂತರ ಜನರ ಭಾವನೆಗಳನ್ನು ತಣಿಸಲು ಸಮಿತಿಯನ್ನು ರಚಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಯ ಅಧಿಕಾರಿ ಎಸ್‌ಐಟಿ ಉಸ್ತುವಾರಿ ವಹಿಸಬಹುದು ಎಂದರು. ಆಗ ಆಂಧ್ರಪ್ರದೇಶ ಸರ್ಕಾರ ಪ್ರತಿನಿಧಿಸಿದ್ದ ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು ರಾಜ್ಯ ಸರ್ಕಾರವು ನೇಮಿಸಿರುವ ಎಸ್‌ಐಟಿ ತನಿಖೆ ಮುಂದುವರಿಸಲು ಅನುಮತಿಸಬೇಕು ಎಂದರು.
ಅರ್ಜಿದಾರ ಯು ವಿ ಸುಬ್ಬಾರೆಡ್ಡಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದರು.
ಆಗ ಪೀಠವು ಆರೋಪಗಳು ಗಂಭೀರವಾಗಿವೆ ಎಂದಿತು. ಈ ಸಂದರ್ಭದಲ್ಲಿ ರೋಹಟ್ಗಿ ಅವರು ಲಡ್ಡುವಿನಲ್ಲಿ ಹಂದಿಯ ಕೊಬ್ಬು ಬಳಕೆ ಮಾಡಿರುವುದಕ್ಕೆ ಸಾಕ್ಷ್ಯವಿದೆ ಎಂದರು.
ಸಿಬಲ್ ಅವರು “ಹಾಗೆಂದು ಯಾವ ವರದಿ ಹೇಳುತ್ತದೆ” ದಾಖಲೆ ನೀಡಬೇಕು ಎಂದರು. ಆಗ ರೋಹಟ್ಗಿ ಅವರು “ವರದಿಯಲ್ಲಿ ಅದು ಇದೆ” ಎಂದರು. ಆಗ ಸಿಬಲ್ ಅವರು “ಅದು ಸಸ್ಯಾಹಾರ ಕೊಬ್ಬೇ ವಿನಾ ಪ್ರಾಣಿಯ ಕೊಬ್ಬಿನ ಅಂಶವಲ್ಲ. ಇದಕ್ಕಾಗಿ ನ್ಯಾಯಾಲಯವು ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು” ಎಂದರು.
ತಿರುಪತಿ ತಿರುಮಲ ದೇವಸ್ಥಾನಂ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ಅವರು “ಜುಲೈ 4ರವರೆಗೆ ದೇವಸ್ಥಾನಕ್ಕೆ ಹೋಗುತ್ತಿದ್ದ ವಸ್ತುಗಳನ್ನು ಪರಿಶೀಲಿಸಲಾಗಿಲ್ಲ. ಜುಲೈ 6 ರಿಂದ 12ರವರೆಗೆ ದೇವಸ್ಥಾನಕ್ಕೆ ಹೋಗಿರುವ ವಸ್ತುಗಳನ್ನು ಪರಿಶೀಲಿಸಲಾಗಿದ್ದು, ಅದು ಕಲುಷಿತವಾಗಿದೆ” ಎಂದರು.
ಇದಕ್ಕೆ ಸಿಬಲ್ ಅವರು “ನೀವೇಕೆ ಅವುಗಳು ದೇವಸ್ಥಾನಕ್ಕೆ ತಲುಪಲು ಅವಕಾಶ ಮಾಡಿಕೊಟ್ಟಿರಿ. ನೀವೇ ಅದರ ಉಸ್ತುವಾರಿಯಲ್ಲವೇ” ಎಂದರು.
ಇದಕ್ಕೆ ಲೂಥ್ರಾ ಅವರು “ಟೆಂಡರ್ ನೀಡಿರುವುದು ಜಗನ್ ಮೋಹನ್ ರೆಡ್ಡಿ ಅವರ ಸರ್ಕಾರ” ಎಂದರು.
ಆಗ ಮೆಹ್ತಾ ಅವರು “ಕೋಟ್ಯಂತರ ಜನರ ನಂಬಿಕೆಯ ಮೇಲೆ ರಾಜಕೀಯ ಮಾಡಲಾಗುತ್ತಿದೆ” ಎಂದರು.
ಈ ವೇಳೆ ಪೀಠವು “ಸ್ವತಂತ್ರ ತನಿಖೆ ನಡೆಯಲಿ. ಇದು ರಾಜಕೀಯ ನಾಟಕವಾಗಿ ಪರಿವರ್ತನೆಯಾಗುವುದು ನಮಗೆ ಇಷ್ಟವಿಲ್ಲ. ಜಗತ್ತಿನಾದ್ಯಂತ ಇರುವ ಕೋಟ್ಯಂತರ ಜನರ ಭಾವನೆಯ ವಿಚಾರ ಇದಾಗಿದೆ. ಅದೃಷ್ಟವೋ, ದುರದೃಷ್ಟವೋ ಈ ಎರಡೂ ಒಂದನ್ನೊಂದು ವಿರೋಧಿಸುವ ಗುಂಪುಗಳಾಗಿವೆ" ಎಂದಿತು.