ಅಕ್ರಮ ಹಣ ವರ್ಗಾವಣೆ: ಮಾಜಿ ಸಚಿವ ದೇಶ್‌ಮುಖ್‌ ಜಾಮೀನು ಮನವಿ ತೀರ್ಪು ಜ.18ರಂದು ಪ್ರಕಟಿಸಲಿರುವ ಮುಂಬೈ ನ್ಯಾಯಾಲಯ

ವಿಶೇಷ ನ್ಯಾಯಾಧೀಶ ಆರ್‌ ಎನ್‌ ರೋಕಡೆ ಅವರು ಶುಕ್ರವಾರ ತೀರ್ಪು ಕಾಯ್ದಿರಿಸಿದ್ದಾರೆ.
Anil Deshmukh, ED, Mumbai sessions court

Anil Deshmukh, ED, Mumbai sessions court

Published on

ಹವಾಲಾ ಹಣ ಪ್ರಕರಣದಲ್ಲಿ ಬಂಧಿತರಾಗಿರುವ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌ ಸಲ್ಲಿಸಿರುವ ಜಾಮೀನು ಮನವಿಗೆ ಸಂಬಂಧಿಸಿದಂತೆ ಮುಂಬೈ ನ್ಯಾಯಾಲಯವು ಶುಕ್ರವಾರ ತೀರ್ಪು ಕಾಯ್ದಿರಿಸಿದೆ.

ಉಭಯ ಪಕ್ಷಕಾರರ ವಾದವನ್ನು ಎರಡು ದಿನಗಳ ಕಾಲ ಆಲಿಸಿದ ಅಕ್ರಮ ಹಣ ನಿಯಂತ್ರಣ ಕಾಯಿದೆ (ಪಿಎಂಎಲ್‌ಎ) ಅಡಿ ಸ್ಥಾಪಿಸಲಾಗಿರುವ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಆರ್‌ ಎನ್‌ ರೋಕಡೆ ಅವರು ತೀರ್ಪು ಕಾಯ್ದಿರಿಸಿದ್ದು, ಜನವರಿ 18ರಂದು ಆದೇಶ ಹೊರಡಿಸಲಿದ್ದಾರೆ.

ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ ಸೆಕ್ಷನ್‌ 167ರ ಅಡಿ ವಿಶೇಷ ನ್ಯಾಯಾಲಯವು ಶಾಸನಾತ್ಮಕವಾಗಿ 60 ದಿನಗಳ ಒಳಗೆ ಆರೋಪ ಪಟ್ಟಿಯನ್ನು ಪರಿಗಣಿಸದಿರುವುದರಿಂದ ತಾವು ಜಾಮೀನಿಗೆ ಅರ್ಹವಾಗಿರುವುದಾಗಿ ಅನಿಕೇತ್‌ ನಿಕಮ್‌ ಮೂಲಕ ಸಲ್ಲಿಸಿರುವ ಮನವಿಯಲ್ಲಿ ದೇಶಮುಖ್‌ ವಿವರಿಸಿದ್ದಾರೆ.

ಯಾವುದೇ ಮಾಹಿತಿ ಹಂಚಿಕೊಳ್ಳದೇ ಜಾರಿ ನಿರ್ದೇಶನಾಲಯವು ಕಳೆದ ವರ್ಷದ ಡಿಸೆಂಬರ್‌ 27ರಂದು ನ್ಯಾಯಾಂಗ ಬಂಧನದ ಅವಧಿಯನ್ನು ಜನವರಿ 9ರ ವರೆಗೆ ವಿಸ್ತರಿಸಿಕೊಂಡಿದೆ ಎಂದು ದೇಶಮುಖ್‌ ಪರ ಹಿರಿಯ ವಕೀಲ ವಿಕ್ರಮ್‌ ಚೌಧರಿ ಹೇಳಿದ್ದಾರೆ.

ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅನಿಲ್‌ ಸಿಂಗ್‌ ಅವರು “ದೇಶಮುಖ್‌ ಅವರ ವಿರುದ್ಧ ಪೂರಕ ಆರೋಪ ಪಟ್ಟಿಯನ್ನು ಡಿಸೆಂಬರ್‌ 29ರಂದು ಸಲ್ಲಿಸಲಾಗಿದೆ. ನವೆಂಬರ್‌ 2ರಂದು ಅವರನ್ನು ಬಂಧಿಸಿರುವುದನ್ನು ಪರಿಗಣೆನೆಗೆ ತೆಗೆದುಕೊಂಡರೆ ಆರೋಪ ಪಟ್ಟಿ ಸಲ್ಲಿಸಿರುವುದು ಎರಡು ತಿಂಗಳ ಅವಧಿಯ ಒಳಗಿದೆ” ಎಂದಿದ್ದಾರೆ. ಇಬ್ಬರೂ ಪಕ್ಷಕಾರರ ವಾದ ಆಲಿಸಿದ ಪೀಠವು ತೀರ್ಪು ಕಾಯ್ದಿರಿಸಿದೆ.

Kannada Bar & Bench
kannada.barandbench.com