ಅನಿಲ್ ದೇಶಮುಖ್ ಅಕ್ರಮ ಹಣ ವರ್ಗಾವಣೆ ಪ್ರಕರಣ: ಇ ಡಿ ಕಸ್ಟಡಿ ವಿಸ್ತರಣೆಗೆ ಮುಂಬೈ ನ್ಯಾಯಾಲಯ ನಕಾರ

ದೇಶಮುಖ್ ಅವರನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
Anil Deshmukh, Enforcement Directorate
Anil Deshmukh, Enforcement Directorate

ಾರಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರ ಕಸ್ಟಡಿ ಅವಧಿ ವಿಸ್ತರಿಸುವಂತೆ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಮನವಿಯನ್ನು ಮುಂಬೈನ ನ್ಯಾಯಾಲಯವೊಂದು ತಿರಸ್ಕರಿಸಿದೆ. ಬದಲಿಗೆ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಆದೇಶಿಸಿದ್ದಾರೆ.

ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ನಿರ್ದೇಶನದ ಮೇರೆಗೆ ಸಿಬಿಐ ಎಫ್‌ಐಆರ್‌ ದಾಖಲಿಸಿತ್ತು. ಬಳಿಕ ದೇಶ್‌ಮುಖ್ ಮತ್ತು ಅವರ ಸಹಚರರ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆ ಪ್ರಾರಂಭಿಸಿತ್ತು.

ಸೇವೆಯಿಂದ ಅಮಾನತಾಗಿದ್ದ ಮುಂಬೈ ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ ಅವರನ್ನು ಮುಂಬೈ ಬಾರ್‌ ಮತ್ತು ರೆಸ್ಟೋರೆಂಟ್‌ಗಳಿಂದ ₹ 4.7 ಕೋಟಿ ಸಂಗ್ರಹಿಸುವಂತೆ ಆದೇಶಿಸುವ ಮೂಲಕ ಗೃಹ ಸಚಿವರಾಗಿದ್ದ ದೇಶಮುಖ್‌ ಅವರು ತಮ್ಮ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದರು ಎಂದು ಜಾರಿ ನಿರ್ದೇಶನಾಲಯ ಆಪಾದಿಸಿತ್ತು. ಸುಲಿಗೆ ಮಾಡಲಾದ ಹವಾಲಾ ಹಣವನ್ನು ನಾಗಪುರ ಮೂಲದ ತಮ್ಮ ಕುಟುಂಬ ಸದಸ್ಯರು ನಿರ್ವಹಿಸುತ್ತಿದ್ದ ಟ್ರಸ್ಟ್‌ಗೆ ವರ್ಗಾವಣೆ ಮಾಡಿದ್ದರು ಎಂದು ಅದು ದೂರಿತ್ತು.

Also Read
ಅಕ್ರಮ ಹಣ ವರ್ಗಾವಣೆ ಪ್ರಕರಣ: ಅನಿಲ್ ದೇಶಮುಖ್ ಅವರನ್ನು ನ. 6 ರವರೆಗೆ ಇ ಡಿ ವಶಕ್ಕೆ ಒಪ್ಪಿಸಿದ ಮುಂಬೈ ನ್ಯಾಯಾಲಯ

ಇ ಡಿ ದೇಶಮುಖ್‌ ಅವರಿಗೆ ಐದು ಸಮನ್ಸ್‌ ಜಾರಿ ಮಾಡಿತ್ತು. ಆದರೆ ಅವರು ಸಮನ್ಸ್‌ಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಅದೇ ವೇಳೆ ಅವರು ಬಾಂಬೆ ಹೈಕೋರ್ಟ್‌ನಲ್ಲಿ ಇ ಡಿ ತಮಗೆ ಸಮನ್ಸ್‌ ನೀಡಿದ್ದನ್ನು ಪ್ರಶ್ನಿಸಿದ್ದರು. ಕೆಲ ದಿನಗಳ ಹಿಂದೆ ಅವರ ಅರ್ಜಿ ಹೈಕೋರ್ಟ್‌ನಲ್ಲಿ ವಜಾಗೊಂಡಿತ್ತು. ಜೊತೆಗೆ ನಿರೀಕ್ಷಣಾ ಜಾಮೀನಿಗಾಗಿ ಸಂಬಂಧಿತ ನ್ಯಾಯಾಲಯವನ್ನು ಎಡತಾಕಲು ಹೈಕೋರ್ಟ್‌ ಸೂಚಿಸಿತ್ತು.

ನವೆಂಬರ್ 1 ರಂದು ಇ ಡಿ ಅಧಿಕಾರಿಗಳೆದುರು ದೇಶಮುಖ್ ಹಾಜರಾಗಿದ್ದರು. ಸುಮಾರು 12 ಗಂಟೆಗಳ ವಿಚಾರಣೆಯ ನಂತರ, ಮಂಗಳವಾರ ಬೆಳಗಿನ ಜಾವ ದೇಶಮುಖ್ ಅವರನ್ನು ಬಂಧಿಸಲಾಗಿತ್ತು. ನಂತರ ಮುಂಬೈ ಕೋರ್ಟ್ ದೇಶಮುಖ್ ಅವರನ್ನು ಇಂದಿನವರೆಗೆ ಇ ಡಿ ವಶಕ್ಕೆ ಒಪ್ಪಿಸಲು ಅನುಮತಿ ನೀಡಿತ್ತು.

ಇಂದು ದೇಶಮುಖ್‌ ಅವರನ್ನು ಇನ್ನೂ 9 ದಿನಗಳ ಕಾಲ ವಶಕ್ಕೆ ಒಪ್ಪಿಸುವಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಮತ್ತು ವಕೀಲ ಶ್ರೀರಾಮ್ ಶಿರ್ಸಾಟ್‌ ಅವರು ಕೋರಿದರು. ಹಿರಿಯ ನ್ಯಾಯವಾದಿ ವಿಕ್ರಮ್ ಚೌಧರಿ ಮತ್ತು ವಕೀಲ ಅನಿಕೇತ್ ನಿಕಮ್‌ ಇ ಡಿ ಮನವಿಯನ್ನು ವಿರೋಧಿಸಿದರು.

ಪ್ರಕರಣ ಆಲಿಸಿದ ರಜಾಕಾಲೀನ ಪೀಠದ ನ್ಯಾ. ಪಿ ಆರ್ ಸಿತ್ರೆ ಅವರು ಇ ಡಿ ಕಸ್ಟಡಿಗೆ ಸಮ್ಮತಿ ಸೂಚಿಸದೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

Related Stories

No stories found.
Kannada Bar & Bench
kannada.barandbench.com